ADVERTISEMENT

ಮುದಗಲ್ | ಪಡಿತರ ಧಾನ್ಯ ಅಸಮರ್ಪಕ ವಿತರಣೆ

ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ: ಫಲಾನುಭವಿಗಳ ಆರೋಪ

ಡಾ.ಶರಣಪ್ಪ ಆನೆಹೊಸೂರು
Published 8 ಅಕ್ಟೋಬರ್ 2024, 6:22 IST
Last Updated 8 ಅಕ್ಟೋಬರ್ 2024, 6:22 IST

ಮುದಗಲ್: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನ ವಿವಿಧ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಆಹಾರ ಧಾನ್ಯ ಅಸಮರ್ಪಕವಾಗಿ ವಿತರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಸರ್ಕಾರ ಬಡವರ ಹಸಿವು ನೀಗಿಸುವ ಸಲುವಾಗಿ ಕಡಿಮೆ ದರದಲ್ಲಿ ಅಕ್ಕಿ, ಗೋದಿ, ಜೋಳ, ಸಕ್ಕರೆ, ಎಣ್ಣೆ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡುತ್ತಿದೆ. ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಡಿತರ ಧಾನ್ಯಗಳು ಬಹುಪಾಲು ಉಳ್ಳವರಿಗೆ ಸಿಗುತ್ತಿವೆ. ಲಿಂಗಸುಗೂರು ತಾಲ್ಲೂಕಿನಲ್ಲಿ 152 ನ್ಯಾಯಬೆಲೆ ಅಂಗಡಿಗಳು ಇದ್ದು, ಒಟ್ಟು 89,993 ಪಡಿತರ ಚೀಟಿದಾರರಿದ್ದಾರೆ.

‘ಜಮೀನುದಾರರು, ಸರ್ಕಾರಿ ನೌಕರರು, ಶ್ರೀಮಂತರು ಬಿಪಿಎಲ್‌ ಕಾರ್ಡ್ ಪಡೆದುಕೊಂಡು ನ್ಯಾಯಬೆಲೆ ಅಂಗಡಿಗಳಿಂದ ಬಂದ ಸಾಮಗ್ರಿಗಳನ್ನು ಪಡೆದು ಕಾಳಸಂತೆಯಲ್ಲಿ ₹15 ಕೆ.ಜಿ ಅಕ್ಕಿಯನ್ನು ಟಂಟಂ, ಆಟೊರಿಕ್ಷಾಗಳಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಅಕ್ರಮ ತಡೆಗಟ್ಟುತ್ತಿಲ್ಲ’ ಎಂದು ದಲಿತ ಮುಖಂಡ ಶರಣಪ್ಪ ಕಟ್ಟಿಮನಿ ಆರೋಪಿಸಿದರು.

ADVERTISEMENT

‘ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿಯಂತೆ ಪಡಿತರ ಆಹಾರ ಧಾನ್ಯ ವಿತರಣೆ ಮಾಡುತ್ತಿಲ್ಲ. ಸರ್ಕಾರ ನಿಗದಿಪಡಿಸಿದ್ದರಲ್ಲಿ ಪ್ರತಿ ವ್ಯಕ್ತಿಗೆ ಒಂದು ಕೆ.ಜಿ ಧಾನ್ಯ ಕಡಿತ ಮಾಡಿ ನೀಡುತ್ತಾರೆ. ಉಳಿದ ಧಾನ್ಯವನ್ನು ಅಂಗಡಿ ಮಾಲೀಕರು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಆಹಾರ ಧಾನ್ಯ ವಿತರಿಸಿದ ಬಗ್ಗೆ ಯಾವುದೇ ರಸೀದಿ ನೀಡುತ್ತಿಲ್ಲ. ಇದನ್ನು ಪ್ರತಿಭಟಿಸುವವರಿಗೆ ನ್ಯಾಯಬೆಲೆ ಅಂಗಡಿ ಮಾಲೀಕರು ‘ನಾವು ಕೊಡುವುದು ಇಷ್ಟೇ, ಬೇಕಾದರೆ ತಹಶೀಲ್ದಾರ್, ಎಸಿಯವರಿಗೆ ಕೇಳಿ’ ಎನ್ನುತ್ತಾರೆ‘ ಎಂದು ಬಸವರಾಜ ಬಂಕದಮನಿ ಅವರು ಆರೋಪಿಸಿದ್ದಾರೆ.

ತಾಲ್ಲೂಕಿನ ಆಹಾರ ನಿರೀಕ್ಷಕ ಅಬ್ದುಲ್ ರೌಫ್, ವ್ಯವಸ್ಥಾಪಕ ಎಂ.ಎಂ.ಹುಸೇನ್‌, ಪ್ರಥಮ ದರ್ಜೆ ಸಹಾಯಕ ರಾಮಕೃಷ್ಣ ಅವರು ಪ್ರತಿ ನ್ಯಾಯಬೆಲೆ ಅಂಗಡಿಗೆ 10 ಚೀಲದಂತೆ ಆಹಾರ ಧಾನ್ಯಗಳನ್ನು ಕಡಿತಗೊಳಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಿ ತಿಂಗಳಿಗೆ ₹10 ಲಕ್ಷದಿಂದ ₹15 ಲಕ್ಷದವರೆಗೆ ದೋಚುತ್ತಾರೆ’ ಎಂದು ಜೆಡಿಎಸ್ ಲಿಂಗಸುಗೂರು ಬ್ಲಾಕ್ ಅಧ್ಯಕ್ಷ ಬಸವರಾಜ ಮಾಕಾಪುರ ಅವರು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಪ್ರಧಾನ ವ್ಯವಸ್ಥಾಪರಿಗೆ ಲಿಖಿತ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

‘ತಾಲ್ಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿಗಳು ರಾಜಕೀಯ ಮುಖಂಡರ ಮಾಲೀಕತ್ವದಲ್ಲಿರುವುದರಿಂದ ಸಾಮಾನ್ಯ ಪಡಿತರದಾರರು ಎದುರು ಹಾಕಿಕೊಳ್ಳುವ ಸಾಹಸಕ್ಕೆ ಹೋಗುವುದಿಲ್ಲ. ಜತೆಗೆ ಅಧಿಕಾರಿಗಳು ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ಇದರಿಂದ ಫಲಾನುಭವಿಗಳಿಗೆ ಸರಿಯಾಗಿ ಪಡಿತರ ಸಿಗುತ್ತಿಲ್ಲ. ಕಾಳ ಸಂತೆಯಲ್ಲಿ ಪಡಿತರ ಮಾರಾಟವಾಗುವುದನ್ನು ಸಂಬಂಧಿಸಿದ ಅಧಿಕಾರಿಗಳೇ ತಡೆಯಬೇಕು’ ಎಂದು ಫಲಾನುಭವಿಗಳು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.