ರಾಯಚೂರು: ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಹತ್ತಿ ಮಾರಾಟ ಖರೀದಿ ಶುರು ಮಾಡಿದ ತಿಂಗಳಲ್ಲೇ ಹತ್ತಿ ಮಾರಾಟಕ್ಕೆ ತರುವ ರೈತರ ಸಂಖ್ಯೆ ಹೆಚ್ಚಾಗಿದೆ. ರಾಯಚೂರಿನ ಹತ್ತಿ ಮಾರುಕಟ್ಟೆಗೆ ನಿತ್ಯ ಹತ್ತಿ ತುಂಬಿದ 2500ರಿಂದ 3 ಸಾವಿರ ವಾಹನಗಳು ಬರಲಾರಂಭಿಸಿವೆ.
ಪೊಲೀಸರಿಗೆ ವಾಹನ ಸಂಚಾರ ಒತ್ತಡ ನಿಯಂತ್ರಿಸುವುದು ಸವಾಲಾದರೆ, ಕಾಟನ್ ಮಿಲ್‌ಗಳಲ್ಲಿ ರೈತರನ್ನು ಸಂಬಾಳಿಸುವುದು ಕಷ್ಟವಾಗುತ್ತಿದೆ. ಬೆಳಿಗ್ಗೆಯಿಂದ ಸಂಜೆಯ ವರೆಗೂ ಕಾಟನ್ ಮಿಲ್‌ಗಳ ಮುಂದೆ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುತ್ತಿವೆ.
ವೇಬ್ರಿಡ್ಜ್‌ಗಳಲ್ಲೂ ವಾಹನಗಳು ಸರತಿ ಸಾಲಿನಲ್ಲಿ ನಿಂತು ಹತ್ತಿ ತೂಕ ಮಾಡಿಕೊಂಡು ಚೀಟಿ ಪಡೆಯಲು ರೈತರು ಪ್ರಯಾಸ ಪಡಬೇಕಾಗಿದೆ. ಎಪಿಎಂಸಿಯಲ್ಲಿ ವೇಬ್ರಿಡ್ಜ್ ನಿರ್ಮಿಸುವಂತೆ ಎಪಿಎಂಸಿ ಸಚಿವರು ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಸೂಚಿಸಿದ್ದರು. ಆದರೆ, ಈವರೆಗೂ ಹೊಸ ವೇಬ್ರಿಡ್ಜ್ ನಿರ್ಮಾಣವಾಗಿಲ್ಲ. ಎಪಿಎಂಸಿಗಳಲ್ಲಿ ಹತ್ತಿ ಮಾರಾಟಕ್ಕೆ ನೂಕುನುಗ್ಗಲು ಉಂಟಾಗುತ್ತಿದ್ದ ಕಾರಣ ರೈತರು ಲಿಂಗಸುಗೂರಿನಲ್ಲಿ ಈಚೆಗೆ ಪ್ರತಿಭಟನೆ ನಡೆಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ ಹೊಸ ಖರೀದಿ ಕೇಂದ್ರಗಳನ್ನೂ ಆರಂಭಿಸಿದೆ.
ಹತ್ತಿ ಮಾರುಕಟ್ಟೆಗೆ ಹತ್ತಿ ತರುವ ರೈತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಮಾರಾಟ ಇಲಾಖೆ ಜಿಲ್ಲೆಯಲ್ಲಿಒಟ್ಟು 16 ಹತ್ತಿ ಖರೀದಿ ಕೇಂದ್ರಗಳನ್ನು ತೆರೆದಿದೆ.
ಭಾರತೀಯ ಹತ್ತಿ ನಿಗಮದ ಹುಬ್ಬಳ್ಳಿ ಘಟಕವು ಕನಿಷ್ಠ ಬೆಂಬಲ ಯೋಜನೆ ಅಡಿಯಲ್ಲಿ ರೈತರಿಂದ ಹತ್ತಿ ಖದೀದಿಸಲು ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಘಟಕಗಳನ್ನು ಗುರುತಿಸಿ ಅಕ್ಟೋಬರ್ 5ರಂದು ಆದೇಶ ಹೊರಡಿಸಿದೆ ಎಂದು ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಬಿ. ಹೇಳುತ್ತಾರೆ.
ರಾಯಚೂರಿನ ವಡ್ಲೂರ್ ಕ್ರಾಸ್‌ನಲ್ಲಿರುವ ಮೆ.ವಿಶಾಲ್ ಆಗ್ರೋ ಇಂಡಸ್ಟ್ರೀಸ್, ಹೈದರಾಬಾದ್ ರಸ್ತೆಯಲ್ಲಿರುವ ಮೆ.ಶ್ರೀನಂದೀಶ್ವರ ಜಿನ್ನಿಂಗ್ ಆ್ಯಂಡ್ ಪ್ರೆಸ್ಸಿಂಗ್, ಕೆಐಡಿಬಿ ಕೈಗಾರಿಕಾ ಪ್ರದೇಶದಲ್ಲಿರುವ ಮೆ.ರಾಜ್‌ಶ್ರೀ ಕಾಟನ್ ಕಂಪನಿ, ಮೆ.ಬಾವಾಲ್ ಸ್ಪಿನ್ನರ್ಸ್ ಪ್ರೈವೆಟ್ ಲಿಮಿಟೆಡ್, ಮೆ.ಶ್ರೀಪಾಗುಂಟಾ ಕಾಟನ್ ಅಗ್ರಿಟೆಕ್, ಮೆ.ಗಣೇಶ ಇಂಡಸ್ಟ್ರೀಸ್, ಮಂಚಲಾಪುರ ರಸ್ತೆಯ ಮೆ.ಆರ್‌ಕೆಬಿ ಆಗ್ರೋ ಇಂಡಸ್ಟ್ರೀಸ್, ಬೈಪಾಸ್ ರಸ್ತೆಯಲ್ಲಿರುವ ಮೆ.ಶ್ರೀಲಕ್ಷ್ಮಿ ವೆಂಟಕೇಶ್ವರ ಇಂಡಸ್ಟ್ರೀಸ್, ಹೈದರಾಬಾದ್ ರಸ್ತೆಯ ಮೆ.ಜಿಆರ್‌ಎಸ್ ಅಗ್ರೋ ಇಂಡಸ್ಟ್ರೀಸ್, ದೇವದುರ್ಗ ತಾಲ್ಲೂಕಿನ ದೇವರಗುಡ್ಡದ ಮೆ.ಎಂ.ಎ.ಜಿ ಕಾಟನ್ ಇಂಡಸ್ಟ್ರೀಸ್, ಸಿರವಾರ್ ಕ್ರಾಸನ್‌ಲ್ಲಿರುವ ಮೆ.ಯಶ್ ಪಾಟೀಲ ಕಾಟನ್ ಕಂಪನಿ, ರಾಯಚೂರು ರಸ್ತೆಯಲ್ಲಿರುವ ಮೆ.ಶ್ರೀಧನಲಕ್ಷ್ಮಿ ಜಿನ್ನಿಂಗ್ ಫ್ಯಾಕ್ಟರಿ, ಮಾನ್ವಿಯ ಮೆ.ಶೈಲಜಾ ಇಂಡಸ್ಟ್ರೀಸ್ ಹಾಗೂ ಸಿಂಧನೂರಿನಲ್ಲೂ ಹತ್ತಿ ಖರೀದಿಗೆ ವ್ಯವಸ್ಥೆ ಮಾಡಲಾಗಿದೆ.
ಹೈಬ್ರೀಡ್–44 ಹತ್ತಿಯು ಕನಿಷ್ಠ ₹ 6400ರಿಂದ ಗರಿಷ್ಠ ₹ 8400ಗೆ ಮಾರಾಟವಾಗುತ್ತಿದೆ. ಹತ್ತಿ ಮಾರಾಟ ಮಾಡಿದ ದಿನವೇ ರೈತರ ಖಾತೆಗೆ ಹಣ ಜಮಾ ಆಗುತ್ತಿರುವ ಕಾರಣ ನೆರೆಯ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಯಾದಗಿರಿ ಜಿಲ್ಲೆಯ ರೈತರೂ ರಾಯಚೂರು ಎಪಿಎಂಸಿಗೆ ಬರುತ್ತಿದ್ದಾರೆ.
‘ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಹತ್ತಿ ಮಾರಾಟ ಮಾಡಿದ ಒಂದು ವಾರದ ನಂತರ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ಆದರೆ, ಕರ್ನಾಟಕದಲ್ಲಿ ರೈತರು ಉತ್ಪನ್ನ ಮಾರಾಟದ ದಿನವೇ ಹಣ ಕೈಗೆ ಸಿಗುತ್ತಿದೆ. ಹೀಗಾಗಿ ಕರ್ನಾಟಕದ ಎಪಿಎಂಸಿಗಳಲ್ಲೇ ಉತ್ಪನ್ನಗಳನ್ನು ಮಾರಾಟ ಮಾಡಲು ನೆರೆಯ ರಾಜ್ಯಗಳ ರೈತರು ಹೆಚ್ಚು ಇಷ್ಟ ಪಡುತ್ತಾರೆ‘ ಎಂದು ರಾಯಚೂರು ಎಪಿಎಂಸಿ ಕಾರ್ಯದರ್ಶಿ ಆದಪ್ಪ ಗೌಡ ಹೇಳುತ್ತಾರೆ.
‘ಜಿಲ್ಲೆಯಲ್ಲಿ ಈ ಬಾರಿ ಹತ್ತಿ ಉತ್ತಮವಾಗಿ ಬೆಳೆದಿದೆ. ಸೆಪ್ಟೆಂಬರ್‌ನಿಂದ ರೈತರು ಮಾರುಕಟ್ಟೆಗೆ ಹತ್ತಿ ತರಲು ಆರಂಭಿಸಿದ್ದಾರೆ. ರಾಯಚೂರು ಎಪಿಎಂಸಿಗೆ ನಿತ್ಯ ಸರಾಸರು 20ರಿಂದ 30 ಕ್ವಿಂಟಲ್ ಹತ್ತಿ ಬರುತ್ತಿದೆ. ಕಳೆದ ವರ್ಷ 2013 ಕ್ವಿಂಟಲ್ ಹತ್ತಿ ಎಪಿಎಂಸಿಗೆ ಆವಕವಾಗಿತ್ತು. ಪ್ರಸಕ್ತ ವರ್ಷ ಒಂದು ತಿಂಗಳಲ್ಲೇ 727 ಕ್ವಿಂಟಲ್ ಹತ್ತಿ ಮಾರುಕಟ್ಟೆಗೆ ಬಂದಿದೆ. ಮಾರುಕಟ್ಟೆಗೆ ಬರುವ ರೈತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ನವೆಂಬರ್, ಡಿಸೆಂಬರ್ ವೇಳೆಗೆ ಇನ್ನೂ ಹೆಚ್ಚಾಗಲಿದೆ’ ಎನ್ನುತ್ತಾರೆ ಅವರು.
ರೈತರು ಟ್ರ್ಯಾಕ್ಟರ್, ಟಾಟಾಏಸ್ ಹಾಗೂ ಕ್ರೂಸರ್‌ಗಳಲ್ಲಿ ಹತ್ತಿ ತರುತ್ತಿರುವಾಗಲೇ ಕಳ್ಳರು ವಾಹನಗಳ ಹಿಂಬದಿಯಲ್ಲಿ ಮುಚ್ಚಿದ ಹೊದಿಕೆ ಹರಿದು ಹಾಕಿ ಹತ್ತಿ ಕಳ್ಳತನ ಮಾಡುತ್ತಿದ್ದಾರೆ. ಕೆಲವರು ಮಕ್ಕಳನ್ನು ಬಳಸಿ ಅವರಿಂದ ಹತ್ತಿ ಕಳ್ಳತನ ಮಾಡಿಸುತ್ತಿದ್ದಾರೆ.
ರಾಯಚೂರು ನಗರದಲ್ಲಿರುವ ರೋಡ್ ಹಂಪ್ಸ್‌ಗಳ ಬಳಿ ಹತ್ತಿ ಕಳ್ಳತನಕ್ಕೆ ಮಕ್ಕಳ ಪಡೆಯೇ ನಿಂತಿರುತ್ತದೆ. ಹತ್ತಿ ವಾಹನಗಳು ಬರುತ್ತಿದ್ದಂತೆಯೇ ಕಳ್ಳತನ ಮಾಡಲು ಅಪಾಯ ಲೆಕ್ಕಿಸದೇ ಮುಗಿಬೀಳುತ್ತಿದ್ದಾರೆ. ಇದರಿಂದಾಗಿ ರೈತರು ಭಾರಿ ನಷ್ಟ ಅನುಭವಿಸಬೇಕಾಗಿದೆ. ವಾಹನಗಳಿಂದ ಹತ್ತಿ ಕಿತ್ತುಕೊಳ್ಳುವುದನ್ನು ತಡೆಯಲು ಹೋದರೆ ರೈತರ ಮೇಲೆಯೇ ಧಾವಿಸಿ ಬಂದು ಬೆದರಿಕೆ ಹಾಕುತ್ತಿದ್ದಾರೆ. ಇದು ರೈತರಿಗೂ ದೊಡ್ಡ ತಲೆ ನೋವಾಗಿದೆ.
‘ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಕಳ್ಳತನ ಹಾವಳಿ ತಪ್ಪಿಸಲು ಕೃಷಿ ಮಾರಾಟ ಇಲಾಖೆಯ 35 ಸೆಕ್ಯುರಿಟಿ ಗಾರ್ಡ್‌ಗಳು ಇದ್ದರೆ. ಇವರು ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೆಕ್ಯುರಿಟಿ ಗಾರ್ಡ್‌ಗಳ ಕೊರತೆ ಕಾರಣ ಇರುವ ವ್ಯವಸ್ಥೆಯಲ್ಲಿ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಬೇಕಾಗಿದೆ‘ ಎಂದು ಕೃಷಿ ಮಾರಾಟ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಬಿ. ಹೇಳುತ್ತಾರೆ.
ಕೃಷಿ ಮಾರಾಟ ಇಲಾಖೆ, ಎಪಿಎಂಸಿ ಹಾಗೂ ಪೊಲೀಸ್ ಇಲಾಖೆಯವರು ರೈತರ ಉತ್ಪನ್ನಗಳಿಗೆ ರಕ್ಷಣೆ ಕೊಡುವ ದಿಸೆಯಲ್ಲಿ ಕಾವಲಿಗೆ ಹೆಚ್ಚಿನ ಸೆಕ್ಯುರಿಟಿ ನಿಯೋಜಿಸಬೇಕು. ವಾಹನಗಳಿಂದ ಹತ್ತಿ ಕದಿಯುತ್ತಿರುವ ಕಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ರೈತ ಆದಪ್ಪ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.