ADVERTISEMENT

ರಾಯಚೂರು | ಕಾಟನ್‌ ಮಾರ್ಕೆಟ್ ಬಳಿ ಸಂಚಾರ ದಟ್ಟಣೆ

ಸರ್ಕಾರಿ ನೌಕರರು, ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳಿಗೆ ನಿತ್ಯ ಸಂಕಟ

ಚಂದ್ರಕಾಂತ ಮಸಾನಿ
Published 22 ಅಕ್ಟೋಬರ್ 2024, 6:35 IST
Last Updated 22 ಅಕ್ಟೋಬರ್ 2024, 6:35 IST
ರಾಯಚೂರಿನ ಶಕ್ತಿನಗರ ರಸ್ತೆಯಲ್ಲಿ ಸೋಮವಾರ ನೂರಾರು ಸಂಖ್ಯೆಯಲ್ಲಿ ವಾಹನಗಳು ತಾಸುಗಟ್ಟಲೇ ನಿಂತಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು ಚಿತ್ರ: ಶ್ರೀನಿವಾಸ ಇನಾಮದಾರ್
ರಾಯಚೂರಿನ ಶಕ್ತಿನಗರ ರಸ್ತೆಯಲ್ಲಿ ಸೋಮವಾರ ನೂರಾರು ಸಂಖ್ಯೆಯಲ್ಲಿ ವಾಹನಗಳು ತಾಸುಗಟ್ಟಲೇ ನಿಂತಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು ಚಿತ್ರ: ಶ್ರೀನಿವಾಸ ಇನಾಮದಾರ್   

ರಾಯಚೂರು: ಕಳೆದ ಹತ್ತು ದಿನಗಳಿಂದ ರಾಯಚೂರು ಜಿಲ್ಲೆ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜಿಲ್ಲೆಗಳ ರೈತರು ಹತ್ತಿತುಂಬಿಕೊಂಡು ಇಲ್ಲಿಯ ಎಪಿಎಂಸಿ ಆವರಣದಲ್ಲಿರುವ ಕಾಟನ್‌ ಮಾರ್ಕೆಟ್‌ಗೆ ಬರುತ್ತಿರುವ ಕಾರಣ ಸಂಚಾರ ದಟ್ಟಣೆ ಹೆಚ್ಚಾಗಿ ಕಳೆದ ಹತ್ತು ದಿನಗಳಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಎಪಿಎಂಸಿ ಆವರಣದಲ್ಲಿರುವ ಜಿನ್ನಿಂಗ್‌ ಫ್ಯಾಕ್ಟರಿಗಳಿಗೆ ಬರುವ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರೂ ಕೆಲವರು ಬೇಗ ಹೋಗುವ ಭರದಲ್ಲಿ ವಾಹನಗಳಲ್ಲಿ ಅಡ್ಡಾದಿಡ್ಡಿಯಾಗಿ ತಂದು ನಿಲ್ಲಿಸುತ್ತಿದ್ದಾರೆ. ಇದರಿಂದ ವಾಹನಗಳು ಮುಂದೆ ಹೋಗಲಾಗದೆ, ಹಿಂದೆಯೂ ಹೋಗಲಾಗದ ಸ್ಥಿತಿ ತಲುಪಿ ಸಮಸ್ಯೆ ಎದುರಿಸುತ್ತಿವೆ.

ಜಿನ್ನಿಂಗ್‌ ಫ್ಯಾಕ್ಟರಿಗಳಲ್ಲಿ ಹತ್ತಿ ಮಾರಾಟ ಮಾಡಿ ಹೊರಗೆ ಬರುವುದೇ ರೈತರಿಗೆ ಒಂದು ಸವಾಲಾಗಿದೆ. ಲಾರಿ, ಟ್ರ್ಯಾಕ್ಟರ್‌ ಹಾಗೂ ಟಾಟಾಏಸ್‌ಗಳಲ್ಲಿ ಹತ್ತಿ ತರಲಾಗುತ್ತಿದ್ದು, ಒಂದಕ್ಕೊಂದು ತಿಕ್ಕಿಕೊಂಡು ಸಾಗುತ್ತಿವೆ. ಇದು ಅಪಘಾತಕ್ಕೂ ಕಾರಣವಾಗುತ್ತಿದೆ. ಭಾರಿ ಪ್ರಮಾಣದಲ್ಲಿ ಹತ್ತಿ ತುಂಬಿ ತಾಡಪಾಲಗಳಿಂದ ಮುಚ್ಚಿರುವ ಕಾರಣ ಚಾಲಕರಿಗೆ ಹಿಂದಿನಿಂದ ಬರುವ ವಾಹನಗಳು ಕನ್ನಡಿಯಲ್ಲಿ ಕಾಣುತ್ತಿಲ್ಲ. ಇದರಿಂದ ಅಪಘಾತ ಸಂಭವಿಸುತ್ತಿವೆ.

ADVERTISEMENT

ಹತ್ತಿ ಸಾಗಿಸುವ ವಾಹನಗಳು ರಸ್ತೆ ಮಧ್ಯೆದಲ್ಲೇ ತಾಸುಗಟ್ಟಲೇ ನಿಲ್ಲುತ್ತಿರುವ ಕಾರಣ ಸಂಚಾರ ಒತ್ತಡ ಹೆಚ್ಚಾಗಿದೆ. ಶಕ್ತಿನಗರ, ಯಾದಗಿರಿ, ಕಲಬುರಗಿ, ಮೆಹಬೂಬ್‌ನಗರ ಹಾಗೂ ಹೈದರಾಬಾದ್ ಕಡೆಗೆ ಹೋಗುವ ಬಸ್‌ಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗುತ್ತಿದೆ. ಸೋಮವಾರ ದೂರದ ಊರಿನ ಪ್ರಯಾಣಿಕರಿಗೂ ಸಂಚಾರ ಒತ್ತಡದ ಬಿಸಿ ತಟ್ಟಿತು.

ಬಸ್‌ಗಳು ಬಿಸಿಲಿಗೆ ಕಾಯುತ್ತಿರುವ ಕಾರಣ ಸರ್ಕಾರಿ ನೌಕರರು ಹಾಗೂ ವಿದ್ಯಾರ್ಥಿಗಳು ನಡೆದುಕೊಂಡೇ ಸಾಗಬೇಕಾಗಿದೆ. ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಿರುವ ಕಾರಣ ಪಾದಚಾರಿಗಳೂ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ.

‘ಕಳೆದ 10 ದಿನಗಳಿಂದ ಸಂಚಾರ ಒತ್ತಡ ಸಮಸ್ಯೆ ಎದುರಿಸುತ್ತಿದ್ದೇವೆ. ಪ್ರತ್ಯೇಕವಾದ ಏಕಮುಖ ರಸ್ತೆಗಳು ಇದ್ದರೂ ವಾಹನಗಳ ಸಂಖ್ಯೆ ಅಧಿಕ ಇರುವ ಕಾರಣ ಬಸ್‌ಗಳು ಮುಂದೆ ಸಾಗಲು ಸಾಧ್ಯವಾಗುತ್ತಿಲ್ಲ. ಶಾಲಾ–ಕಾಲೇಜುಗಳಿಗೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗದೇ ಹಿಂಸೆ ಅನುಭವಿಸಬೇಕಾಗಿದೆ’ ಎಂದು ಪದವಿಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಅಳಲು ತೋಡಿಕೊಂಡರು.

‘ನಿತ್ಯ ಸಂಚಾರ ಒತ್ತಡವಾಗುತ್ತಿದ್ದರೂ ಪೊಲೀಸ್‌ ಅಧಿಕಾರಿಗಳು ಗಂಭೀರವಾಗಿಲ್ಲ. ಒಬ್ಬರು ಇಬ್ಬರಿಂದ ಸಂಚಾರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಕನಿಷ್ಠ 6ರಿಂದ 8 ಪೊಲೀಸ್‌ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಬೇಕು. ಅಂದಾಗ ಮಾತ್ರ ಸಂಚಾರ ಒತ್ತಡ ಕಡಿಮೆಯಾಗಲಿದೆ’ ಎಂದು ಕಾಟನ್‌ ಮಾರ್ಕೆಟ್‌ಗೆ ಹತ್ತಿ ಮಾರಾಟ ಮಾಡಲು ಬಂದಿದ್ದ ರೈತ ಆದಪ್ಪ ಹೇಳಿದರು.

ಕೆಲವು ಏಜೆಂಟರು ರಸ್ತೆ ಮಧ್ಯೆದಲ್ಲಿಯೇ ಹತ್ತಿ ಸಾಗಿಸುವ ವಾಹನಗಳನ್ನು ತಡೆದು ವ್ಯವಹಾರ ನಡೆಸುತ್ತಿದ್ದಾರೆ. ಇದು ಸಹ ಸಂಚಾರ ಒತ್ತಡ ಹೆಚ್ಚಾಗಲು ಕಾರಣವಾಗಿದೆ. ಎಪಿಎಂಸಿ ಆವರಣದಲ್ಲೇ ವ್ಯವಹಾರ ನಡೆಸುವಂತೆ ಏಜೆಂಟರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಅಗತ್ಯವಿದೆ ಎಂದು ಹತ್ತಿ ಮಾರಾಟಗಾರರು ತಿಳಿಸಿದರು.

‘ವಾಹನ ದಟ್ಟಣೆಯಲ್ಲಿ ಸಿಲುಕಿರುವ ಹತ್ತಿ ತುಂಬಿದ ವಾಹನಗಳನ್ನು ಗಮನಿಸಿ ಕಳ್ಳರು ಮಕ್ಕಳನ್ನು ಬಳಸಿ ವಾಹನ ಮೇಲೆ ಮುಚ್ಚಲಾದ ತಾಡಪಾಲ್ ಹರಿದು ಹಾಕಿ ಹತ್ತಿ ಕಳ್ಳತನ ಮಾಡುತ್ತಿದ್ದಾರೆ. ಇದರಿಂದ ರೈತರು ತೊಂದರೆ ನಷ್ಟ ಅನುಭವಿಸಬೇಕಾಗಿದೆ. ಕಳ್ಳರ ಹಾವಳಿ ತಡೆಯಲು ಪೊಲೀಸರು ರೈತರ ನೆರವಿಗೆ ಬರಬೇಕು’ ಎಂದು ಆಂಧ್ರಪ್ರದೇಶದ ರೈತರು ಮನವಿ ಮಾಡಿದರು.

ರಾಯಚೂರಿನ ಶಕ್ತಿನಗರ ರಸ್ತೆಯ ಎಪಿಎಂಸಿ ಕಾಟನ್‌ ಮಾರ್ಕೆಟ್‌ ಮುಂಭಾಗದಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು
ರಾಯಚೂರಿನ ಶಕ್ತಿನಗರ ರಸ್ತೆಯ ಎಪಿಎಂಸಿ ಕಾಟನ್‌ ಮಾರ್ಕೆಟ್‌ ಬಳಿ ಬಸ್‌ಗಳು ಟ್ರಾಫಿಕ್‌ನಲ್ಲಿ ಸಿಲುಕಿದ ಕಾರಣ ವಿದ್ಯಾರ್ಥಿನಿಯರು ಬಸ್‌ನಿಂದ ಇಳಿದು ನಡೆದುಕೊಂಡು ಕಾಲೇಜಿಗೆ ಹೋದರು

ನಿತ್ಯ ಮೂರು ಸಾವಿರ ವಾಹನಗಳ ಸಂಚಾರ ಸಂಚಾರ ಒತ್ತಡ ನಿಯಂತ್ರಿಸುವಲ್ಲಿ ಪೊಲೀಸರು ವಿಫಲ ಮಾನಸಿಕ ಹಿಂಸೆ ಅನುಭವಿಸುತ್ತಿರುವ ಪರೀಕ್ಷಾರ್ಥಿಗಳು

ಶೀಘ್ರದಲ್ಲಿ ಎಪಿಎಂಸಿ ವರ್ತಕರ ಸಭೆ ಕರೆದು ಎಪಿಎಂಸಿ ಮಾರುಕಟ್ಟೆಯಲ್ಲೇ ಹತ್ತಿ ಖರೀದಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು

-ನಿತೀಶ್ ರಾಯಚೂರು ಜಿಲ್ಲಾಧಿಕಾರಿ

ರಾಯಚೂರು ಎಪಿಎಂಸಿಗೆ ನಿತ್ಯ ಸರಾಸರಿ ಮೂರು ಸಾವಿರ ವಾಹನಗಳು ಬರುತ್ತಿವೆ. ಪೊಲೀಸ್‌ ಸಿಬ್ಬಂದಿಯನ್ನು ಹೆಚ್ಚಿಸಿ ಸಂಚಾರ ಒತ್ತಡ ನಿಯಂತ್ರಿಸಲಾಗುವುದು

- ಪುಟ್ಟಮಾದಯ್ಯ ಎಂ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

- ಕೆಲವು ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಖರೀದಿದಾರರು ಹತ್ತಿ ಖರೀದಿ ಸಂದರ್ಭದಲ್ಲಿ ಗೋಲ್‌ಮಾಲ್‌ ಮಾಡುತ್ತಿದ್ದು ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು

-ಆದಪ್ಪ ಆಂಧ್ರಪ್ರದೇಶದ ರೈತ

ಪದವಿ ಪೂರ್ವ ಕಾಲೇಜಿನ ಅರ್ಧವಾರ್ಷಿಕ ಕನ್ನಡ ವಿಷಯದ ಪರೀಕ್ಷೆ ಇತ್ತು. ಒಂದು ತಾಸಿನಿಂದ ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡು ತೊಂದರೆ ಅನುಭವಿಸಬೇಕಾಯಿತು

-ನಾಗರತ್ನ ಮೀನಾಕ್ಷಿ ಪಿಯುಸಿ ವಿದ್ಯಾರ್ಥಿನಿಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.