ADVERTISEMENT

ಲಿಂಗಸುಗೂರು: ನಡುಗಡ್ಡೆಯಲ್ಲಿ ಸಮಸ್ಯೆಗೆ ನಲುಗಿದ ಗ್ರಾಮಗಳು

ನಡುಗಡ್ಡೆ ಗ್ರಾಮಗಳಲ್ಲಿಯೇ ವಿವಿಧ ಇಲಾಖೆ ಸೇವೆ ಕಲ್ಪಿಸಲು ಒತ್ತಾಯ

ಪ್ರಜಾವಾಣಿ ವಿಶೇಷ
Published 30 ಜುಲೈ 2024, 5:07 IST
Last Updated 30 ಜುಲೈ 2024, 5:07 IST
ಲಿಂಗಸುಗೂರು ತಾಲ್ಲೂಕು ಕೃಷ್ಣಾ ನಡುಗಡ್ಡೆ ಗ್ರಾಮ ಹಂಚಿನಾಳದಲ್ಲಿ ಶುದ್ಧ ಕುಡಿಯುವ ನೀರು ಘಟಕ ಬಳಕೆಯಾಗದೆ ಅನಾಥ ಸ್ಥಿತಿಯಲ್ಲಿರುವುದು
ಲಿಂಗಸುಗೂರು ತಾಲ್ಲೂಕು ಕೃಷ್ಣಾ ನಡುಗಡ್ಡೆ ಗ್ರಾಮ ಹಂಚಿನಾಳದಲ್ಲಿ ಶುದ್ಧ ಕುಡಿಯುವ ನೀರು ಘಟಕ ಬಳಕೆಯಾಗದೆ ಅನಾಥ ಸ್ಥಿತಿಯಲ್ಲಿರುವುದು   

ಲಿಂಗಸುಗೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೂರೆಂಟು ಯೋಜನೆಗಳನ್ನು ಜಾರಿಗೊಳಿಸಿವೆ. ಅದರಲ್ಲೂ ಶೇ 90ರಷ್ಟು ಪರಿಶಿಷ್ಟರೆ ವಾಸಿಸುವ ಕೃಷ್ಣಾ ನದಿಯ ನಡುಗಡ್ಡೆ ಗ್ರಾಮಗಳು ಸೌಲಭ್ಯದಿಂದ ವಂಚಿತಗೊಂಡಿವೆ. ಶಿಕ್ಷಣ, ಆರೋಗ್ಯ ಕುಡಿವ ನೀರಿಗಾಗಿ ಪರದಾಡುವ ದುಸ್ಥಿತಿ ಕೇಳುವವರೆ ಇಲ್ಲವಾಗಿದೆ.

ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶಗಳಾಗಿದ್ದ ಜಲದುರ್ಗ, ಹಂಚಿನಾಳ, ಯಳಗುಂದಿ, ಯರಡಗೋಡಿ, ಕಡದರಗಡ್ಡಿ, ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಪ್ರದೇಶಗಳು ಶತ ಶತ ಮಾನಗಳಿಂದ ನಾಗರಿಕ ಸಮಾಜದ ಬಾಹ್ಯ ಸಂಪರ್ಕ ಕಡಿಮೆ ಹೊಂದಿದ್ದರು ಎಂದು ಹೇಳಲಾಗುತ್ತದೆ. 1974-75ರಲ್ಲಿ ಜಲದುರ್ಗ ಬಳಿ ಸೇತುವೆ ನಿರ್ಮಿಸಿ ನಂತರ ಸ್ವಲ್ಪ ಮಟ್ಟಿಗೆ ನಾಗರಿಕ ಜನಜೀವನ ಸಂಪರ್ಕ ಸಾಧಿಸಿದ್ದು ಐತಿಹ್ಯ.

ಶೀಲಹಳ್ಳಿ, ಯರಗೋಡಿ ಬಳಿ ನಿರ್ಮಿಸಿದ ಸೇತುವೆಗಳು ನಡುಗಡ್ಡೆ ಜನರಲ್ಲಿ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿತು. ಆದರೆ, ಕರಡಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಜನ ಕರಾಳ ಲೋಕದಿಂದ ಹೊರಬರಲು ಆಗುತ್ತಿಲ್ಲ. ಈ ನಡುಗಡ್ಡೆ ಗ್ರಾಮಗಳ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳ ಗುಂತಗೋಳ ಆಗಿದೆ. ಕೆಲಸ ಕಾರ್ಯಗಳಿಗೆ ನಿತ್ಯ 16 ರಿಂದ 18 ಕಿ.ಮೀ ಸುತ್ತುವರೆದು ಹೋಗಬೇಕು. ಕಡದರಗಡ್ಡಿ ಸೇತುವೆ ನಿರ್ಮಿಸಿದರೆ ಕೇವಲ 3 ಕಿ.ಮೀ ಅಂತರ ಮಾತ್ರ.

ADVERTISEMENT

ಕಡದರಗಡ್ಡಿಯಲ್ಲಿ 217 ಮನೆಗಳಿದ್ದು, 630 ಜನಸಂಖ್ಯೆ ಹೊಂದಿದೆ. ಯರಗೋಡಿ 984 ಜನಸಂಖ್ಯೆ ಹೊಂದಿದ್ದು, 176 ಮನೆಗಳು ಇವೆ. ಯಳಗುಂದಿ 588 ಜನಸಂಖ್ಯೆ ಹೊಂದಿದ್ದು, 352 ಮನೆಗಳಿವೆ. ಹಂಚಿನಾಳದಲ್ಲಿ 1,072 ಜನಸಂಖ್ಯೆ ಇದ್ದು, 653 ಮನೆಗಳಿವೆ. ಜಲದುರ್ಗ 377 ಜನಸಂಖ್ಯೆ ಇದ್ದು, 133 ಮನೆ ಸೇರಿ ಒಟ್ಟು 3,651 ಜನಸಂಖ್ಯೆ 1,531 ಮನೆಗಳಿವೆ.

ಕಡದರಗಡ್ಡಿ, ಯಳಗುಂದಿ, ಜಲದುರ್ಗದಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಹಂಚಿನಾಳ ಯರಗೋಡಿಗಳಲ್ಲಿ ಮಾತ್ರ ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ನಡುಗಡ್ಡೆಯ ಬಹುತೇಕರ ಓದು ಇಲ್ಲಿಗೆ ಮುಕ್ತಾಯಗೊಂಡಿದೆ. ನಡುಗಡ್ಡೆ ಗ್ರಾಮಗಳಲ್ಲಿ ಎಲ್ಲಿಯಾದರು ಪ್ರೌಢಶಾಲೆ ನಿರ್ಮಾಣ ಮಾಡಲು ಮನವಿ ಮಾಡಿದರು ಸ್ಪಂದನೆ ಸಿಗುತ್ತಿಲ್ಲ. ನದಿ ದಾಟಿ ಓದಲು ಹೋಗಲಾಗದೆ ಬಹುತೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದೆ ಹೆಚ್ಚು.

ಆರೋಗ್ಯ ಸೇವೆಗೆ ಗುಂತಗೋಳ, ಗುರುಗುಂಟಾ ಅಥವಾ ತಾಲ್ಲೂಕು ಕೇಂದ್ರಕ್ಕೆ ತೆರಳಬೇಕು. ನ್ಯಾಯಬೆಲೆ ಪಡಿತರ ತಂದು ಕೊಳ್ಳಲು ಗೋನವಾಟ್ಲಕ್ಕೆ ಹೆಚ್ಚಾಗಿ ಹೋಗಬೇಕು. ಪರ್ಯಾಯವಾಗಿ ಇಲ್ಲಿಯೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನ್ಯಾಯಬೆಲೆ ಅಂಗಡಿ ಆರಂಭಿಸಲು ನಡೆದ ಹೋರಾಟಕ್ಕೆ ಬೆಲೆಯೆ ಇಲ್ಲವಾಗಿದೆ. ಜಾನುವಾರುಗಳಿಗೆ ರೋಗ ಬಂದರೆ ದೇವರೆ ಗತಿ. ಪಶು ಆಸ್ಪತ್ರೆಯೊಂದು ತೆರೆಯಲು ಆಡಳಿತ ಮುಂದಾಗುತ್ತಿಲ್ಲ ಎಂಬುದು ಆರೋಪ.

ಗ್ರಂಥಾಲಯ,ಕಂದಾಯ, ಕೃಷಿ, ಪಂಚಾಯಿತಿ ಸೇರಿ ವಿವಿಧ ಇಲಾಖೆ ಸೌಲಭ್ಯ ಪಡೆಯಲು ಪ್ರವಾಹ ಬಂದಾಗ ಕನಿಷ್ಠ 40 ರಿಂದ 45 ಕಿ.ಮೀ ಕ್ರಮಿಸಲೇಬೇಕು. ಅಲ್ಲಿಗೆ ಹೋದಾಗ ಅಧಿಕಾರಿ, ಸಿಬ್ಬಂದಿ ಸಿಗದೆ ಪರದಾಡಿ ಬೇಸತ್ತು ಸರ್ಕಾರಿ ಸೌಲಭ್ಯ ಪಡೆಯದೆ ವಂಚಿತರಾಗುತ್ತಿದ್ದಾರೆ. ಸರ್ಕಾರದ ಯೋಜನೆ ಮನೆ ಬಾಗಿಲಿಗೆ ಎಂಬುದು ನಡುಗಡ್ಡೆ ಗ್ರಾಮಗಳಿಗೆ ಶಾಪವಾಗಿ ಪರಿಣಮಿಸಿದೆ ಎಂಬುದು ಸಾಮೂಹಿಕ ದೂರು.

ಗ್ರಾಮೀಣ ಜನರಿಗೆ ಸಿಗುವ ಸೌಲಭ್ಯಗಳು ಕೃಷ್ಣಾ ತಟಕ್ಕೆ ಬಂದಾಕ್ಷಣ ಕೃಷ್ಣಾರ್ಪಣೆಯಾಗುತ್ತಿವೆ. ಶೇ 90ರಷ್ಟು ಪರಿಶಿಷ್ಟರಿದ್ದು ಅವಿದ್ಯಾವಂತರ ಸಂಖ್ಯೆಯೆ ಹೆಚ್ಚು. ಶೇ 5ರಷ್ಟು ಜನ ಮಾತ್ರ ಸೌಲಭ್ಯ ಪಡೆದುಕೊಳ್ಳುತ್ತಾರೆ. ನಡುಗಡ್ಡೆ ಗ್ರಾಮಗಳಲ್ಲಿಯೆ ಸೌಲಭ್ಯ ಕಲ್ಪಿಸುವ ಪ್ರತಿಯೊಂದು ಇಲಾಖೆ ಸೇವೆ ಸಿಗುವ ಕೇಂದ್ರ ಆರಂಭಗೊಂಡರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಆಡಳಿತ ಕ್ರಮ ಕೈಗೊಳ್ಳುವುದೇ ಕಾದು ನೋಡಬೇಕಷ್ಟೆ.

‘ಕೃಷ್ಣಾ ನದಿಯ ನಡುಗಡ್ಡೆ ಗ್ರಾಮಗಳು ಮತ್ತು ನಡುಗಡ್ಡೆ ಪ್ರದೇಶಗಳ ಜನರು ಮತ್ತು ಮಕ್ಕಳಿಗೆ ಸರ್ಕಾರಿ ಸೌಲಭ್ಯ ದೊರಕಿಸಲು ಸರ್ಕಾರ ನಡುಗಡ್ಡೆಯಲ್ಲೊಂದು ಎಲ್ಲಾ ಇಲಾಖೆ ಸೇವೆಗಳು ಸಿಗುವಂತಹ ಕೇಂದ್ರ ಆರಂಭಿಸಬೇಕು. ಶಿಕ್ಷಣ, ಆರೋಗ್ಯ ರಕ್ಷಣೆಗೆ ಸಂಬಂಧಿಸಿ ಪ್ರೌಢಶಾಲೆ ಮತ್ತು ಆರೋಗ್ಯ ಕೇಂದ್ರಗಳನ್ನು ಆರಂಭಿಸಿ ಶುದ್ಧ ಕುಡಿಯುವ ನೀರು ಪೂರೈಸಿ ನಡುಗಡ್ಡೆ ಗ್ರಾಮಸ್ಥರ ರಕ್ಷಣೆಗೆ ಮುಂದಾಗಬೇಕು’ ಎಂದು ಮುದುಕಪ್ಪ ಹಂಚಿನಾಳ ಆಗ್ರಹಪಡಿಸಿದ್ದಾರೆ.

‘ಕೃಷ್ಣಾ ಪ್ರವಾಹದ ಕರಕಲಗಡ್ಡಿ, ಮ್ಯಾದರಗಡ್ಡಿ, ವಂಕಮ್ಮನಗಡ್ಡಿ ಶಾಶ್ವತ ಸ್ಥಳಾಂತರಿಸಬೇಕು ಇಲ್ಲವೇ ಸಂಚರಿಸಲು ಅನುಕೂಲ ಮಾಡಿಕೊಡಬೇಕು. ಕಡರಗಡ್ಡಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಿ ನಡುಗಡ್ಡೆ ಜನರಿಗೆ ಬಾಹ್ಯ ಸಂಪರ್ಕಕ್ಕೆ ಅನುಕೂಲ ಕಲ್ಪಿಸಿಕೊಡಬೇಕು. ನಡುಗಡ್ಡೆ ಗ್ರಾಮಗಳಿ ಪ್ರೌಢಶಾಲೆ, ಆರೋಗ್ಯ ಮತ್ತು ಪಶು ಆಸ್ಪತ್ರೆ, ನ್ಯಾಯಬೆಲೆ ಇತರೆ ಸೌಲಭ್ಯ ಕೇಂದ್ರ ಆರಂಭಿಸಬೇಕು’ ಎಂದು ವಿರೇಶ ಕಡದರಗಡ್ಡಿ ಒತ್ತಾಯಿಸಿದ್ದಾರೆ.

ಕೃಷ್ಣಾ ನದಿಯ ನಡುಗಡ್ಡೆ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಜಲದುರ್ಗ ಮತ್ತು ಕಡದರಗಡ್ಡಿ ಏತ ನೀರಾವರಿ ಯೋಜನೆಗಳಿಂದ ಜಮೀನಿಗೆ ಹನಿ ನೀರು ಹರಿದಿಲ್ಲ. ಗುತ್ತಿಗೆದಾರರಿಗೆ ಕಾಮಧೇನುವಾಗಿವೆ.
-ಪ್ರಭುಲಿಂಗ ಮೇಗಳಮನಿ, ರಾಜ್ಯ ಸಮಿತಿ ಸದಸ್ಯಕರಾದಸಂಸ
ನಡುಗಡ್ಡೆ ಗ್ರಾಮಗಳಲ್ಲಿ ಪ್ರೌಢಶಾಲೆ ಪ್ರಾಥಮಿಕ ಆರೋಗ್ಯ ಕೇಂದ್ರ ನ್ಯಾಯಬೆಲೆ ಅಂಗಡಿ ವಿವಿಧ ಇಲಾಖೆಗಳ ಎಲ್ಲ ಸೇವೆಗಳು ಸ್ಥಳೀಯವಾಗಿಯೆ ಸಿಗುವಂತ ವ್ಯವಸ್ಥೆ ಕಲ್ಪಿಸಿಕೊಡಬೇಕು.
-ಬಸ್ಸೆಟ್ಟೆಪ್ಪ ಹಂಚಿನಾಳ, ಸಮಾಜ ಸೇವಕ ಹಂಚಿನಾಳ
ಲಿಂಗಸುಗೂರು ತಾಲ್ಲೂಕು ಕೃಷ್ಣಾ ನಡುಗಡ್ಡೆ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿಲು ನಿರ್ಮಿಸಿದ್ದ ಜಲದುರ್ಗ ಏತ ನೀರಾವರಿ ಯೋಜನೆ ಮೋಟರ್‌ ಪಂಪ್‌ಗಳು ಮುಳ್ಳುಕಂಟೆಯಲ್ಲಿ ಬಳಕೆಯಾಗದೆ ಬಿದ್ದಿರುವುದು
ಲಿಂಗಸುಗೂರು ತಾಲ್ಲೂಕು ಕೃಷ್ಣಾ ನಡುಗಡ್ಡೆ ಗ್ರಾಮ ಕಡದರಗಡ್ಡಿಯಲ್ಲಿ ದುರಸ್ತಿ ಕಾಣದ ಬಸ್‍ ತಂಗುದಾಣ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.