ADVERTISEMENT

ಲಿಂಗಸುಗೂರು: ರೈತರ ಜಮೀನಿಗೆ ವೈಜ್ಞಾನಿಕ ಬೆಲೆ ನಿಗದಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2021, 12:53 IST
Last Updated 11 ಡಿಸೆಂಬರ್ 2021, 12:53 IST
ಕೆ.ರಂಗನಾಥ ಪಾಟೀಲ
ಕೆ.ರಂಗನಾಥ ಪಾಟೀಲ   

ಲಿಂಗಸುಗೂರು: ‘ಗದಗ-ವಾಡಿ ರೈಲ್ವೆ ಮಾರ್ಗ ಯೋಜನೆ ಅನುಷ್ಠಾನಕ್ಕೆ ಭೂ ಸ್ವಾಧೀನಪಡಿಸಿಕೊಳ್ಳುತ್ತಿರುವ ರೈತರ ಜಮೀನಿಗೆ ಎಕರೆಗೆ ಕನಿಷ್ಠ ₹ 25 ಲಕ್ಷದಷ್ಟು ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು’ ಎಂದು ಬಾರತೀಯ ಕಿಸಾನ್‍ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಕೆ. ರಂಗನಾಥ ಪಾಟೀಲ್‍ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈಲ್ವೆ ಭೂ ಸ್ವಾಧೀನಾಧಿಕಾರಿಗಳು ರೈತರನ್ನು ವಿಶ್ವಾಸಕ್ಕೆ ಪಡೆಯದೆ, ಎಕರೆಗೆ ₹ 8 ರಿಂದ ₹12ಲಕ್ಷ ಪರಿಹಾರ ನಿಗದಿ ಪಡಿಸಿರುವುದು ಅವೈಜ್ಞಾನಿಕವಾಗಿದೆ. ಜಮೀನು ಬೆಲೆ ನಿಗದಿಪಡಿಸುವಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಎಕರೆಗೆ ಕನಿಷ್ಠ ₹ 25 ಲಕ್ಷ. ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಎಕರೆಗೆ ₹ 50ಲಕ್ಷದಂತೆ ನಿಗದಿಪಡಿಸಬೇಕು’ ಎಂದು ಆಗ್ರಹಪಡಿಸಿದರು.

ವೈಜ್ಞಾನಿಕ ಬೆಂಬಲ ಬೆಲೆ ನೀಡುವ ಜೊತೆಗೆ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ರೈತರು ಬೆಳೆಯುವ ಬೆಳೆಗೆ ರೈತ ಬೆಲೆ ನಿಗದಿಪಡಿಸಲು ವಿಶೇಷ ಕಾನೂನು ಜಾರಿಗೆ ತರಬೇಕು. ಬೆಲೆ ನಿಗದಿ ಕಾನೂನು ಜಾರಿಗೆ ತರುವ ಪೂರ್ವದಲ್ಲಿ ರೈತ ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು. ಖರೀದಿ ಕೇಂದ್ರಗಳ ಮೂಲಕವೆ ಬೆಳೆ ಖರೀದಿಗೆ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಮುಂದಾಗಬೇಕು’ ಎಂದು ಮನವಿ ಮಾಡಿದರು.

ADVERTISEMENT

ಮುಖಂಡರಾದ ಮಂಜುನಾಥ ದಳವಾಯಿ, ಗಂಗನಗೌಡ ಪಾಟೀಲ, ಅಯ್ಯಪ್ಪ, ಶರಣಪ್ಪ, ಬಸವರಾಜ, ಹನುಮಂತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.