ADVERTISEMENT

‘ಆರ್ಥಿಕ ಸುಸ್ಥಿರಕ್ಕೆ ಸಮಗ್ರ ಕೃಷಿ’

ಮುರಾನಪುರದಲ್ಲಿ ಸೂರ್ಯಕಾಂತಿ ಬೆಳೆಯ ಕ್ಷೇತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 13:01 IST
Last Updated 6 ಡಿಸೆಂಬರ್ 2019, 13:01 IST
ರಾಯಚೂರು ತಾಲ್ಲೂಕು ಮುರಾನಪುರದಲ್ಲಿ ಈಚೆಗೆ ಆಯೋಜಿಸಿದ್ದ ಸೂರ್ಯಕಾಂತಿ ಕ್ಷೇತ್ರೋತ್ಸವದಲ್ಲಿ ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ಡಾ. ವಿಜಯಕುಮಾರ ಘಂಟೆ ಮಾತನಾಡಿದರು
ರಾಯಚೂರು ತಾಲ್ಲೂಕು ಮುರಾನಪುರದಲ್ಲಿ ಈಚೆಗೆ ಆಯೋಜಿಸಿದ್ದ ಸೂರ್ಯಕಾಂತಿ ಕ್ಷೇತ್ರೋತ್ಸವದಲ್ಲಿ ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ಡಾ. ವಿಜಯಕುಮಾರ ಘಂಟೆ ಮಾತನಾಡಿದರು   

ರಾಯಚೂರು: ಬದಲಾಗುತ್ತಿರುವ ವಾತಾವರಣದಲ್ಲಿ ರೈತರು ಏಕಬೆಳೆಗೆ ಮೊರೆ ಹೋಗದೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕವಾಗಿ ಸುಸ್ಥಿರರಾಗಬೇಕು ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಭೀಮಣ್ಣ ಎಂ. ಹೇಳಿದರು.

ತಾಲ್ಲೂಕಿನ ಮುರಾನಪುರ ಗ್ರಾಮದಲ್ಲಿ ರಾಯಚೂರಿನ ಐ.ಸಿ.ಎ.ಆರ್.ಕೃಷಿ ವಿಜ್ಞಾನ ಕೇಂದ್ರ ಹಾಗೂ ಅಖಿಲ ಭಾರತ ಸೂರ್ಯಕಾಂತಿ ಸಂಯೋಜಿತ ಯೋಜನೆ, ರಾಯಚೂರು ಮುಖ್ಯ ಕೃಷಿ ಸಂಶೋಧನಾ ಕೇಂದ್ರದಿಂದ ಪ್ರಗತಿಪರ ರೈತ ಶರಣಗೌಡ ಅವರ ಕ್ಷೇತ್ರದಲ್ಲಿ ಈಚೆಗೆ ಏರ್ಪಡಿಸಿದ್ದ ಸೂರ್ಯಕಾಂತಿ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು.

ಯಥೇಚ್ಚವಾಗಿ ಕೀಟನಾಶಕಗಳನ್ನು ಬಳಸುವುದರಿಂದ ಕೀಟಗಳ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ಕೀಟಗಳ ನೈಸರ್ಗಿಕ ಶತ್ರುಗಳ ಸಂಖ್ಯೆ ಕಡಿಮೆಯಾಗುತ್ತದೆ. ಇದರಿಂದ ನೈಸರ್ಗಿಕ ಸಮತೋಲನದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಮಗ್ರ ಕೀಟನಿರ್ವಹಣೆ ಅಳವಡಿಸಿಕೊಳ್ಳುವುದು ಉತ್ತಮ ಎಂದು ತಿಳಿಸಿದರು.

ADVERTISEMENT

ಸೂರ್ಯಕಾಂತಿ ವಿಭಾಗದ ಮುಖ್ಯಸ್ಥ ಡಾ.ವಿಕಾಸ ಕುಲಕರ್ಣಿ ಅವರು ಸೂರ್ಯಕಾಂತಿ ಆರ್‌ಎಫ್‌ಎಸ್‌ಎಚ್‌ 1887 ಸಂಕರಣ ತಳಿಯ ವಿಶೇಷತೆ ಕುರಿತು ಮಾತನಾಡುಡಿ, ಈ ತಳಿಯು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ 2015 ರಂದು ಬಿಡುಗಡೆ ಮಾಡಲಾಗಿದೆ. ಅಲ್ಫಾವಧಿ 95 ದಿನಗಳಲ್ಲಿ ಸಂಕರಣ ತಳಿಯಾಗಿ ಅಭಿವೃದ್ಧಿ ಗೊಳಿಸಲಾಗಿದೆ. ಬೀಜ ತುಂಬುವಿಕೆಯು ಇಡೀ ತೆನೆ ಆವರಿಸಲಿದ್ದು, ಕಪ್ಪು ಬಣ್ಣದ ದಪ್ಪ ಕಾಳುಗಳು ಹೊಂದಿದೆ. ಎಣ್ಣೆ ಪ್ರಮಾಣ ಶೇ 40 ರಷ್ಟು ಇದ್ದು, ಈಗಾಗಲೇ ಬಿಡುಗಡೆಯಾದ ವಿಶ್ವವಿದ್ಯಾಲಯ ತಳಿಗಳಿಗೆ ಹೋಲಿಸಿದರೆ ಶೇ 10 –15ರಷ್ಟು ಹೆಚ್ಚಿನ ಇಳುವರಿ ಇದೆ. ಎರಡು ಕಿಲೋ ಪ್ರತಿ ಪ್ಯಾಕೇಟ್ ಬೀಜಕ್ಕೆ ₹400 ದರವಿದೆ ಎಂದು ಹೇಳಿದರು.

ರಾಯಚೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ, ಡಾ. ಜಿ.ಎಸ್. ಯಡಹಳ್ಳಿ ಮಾತನಾಡಿ, ಹವಾಮಾನದಲ್ಲಾಗುವ ಬದಲಾವಣೆಗೆ ಹೊಂದಿಕೊಂಡು ಬೆಳೆಯಬಹುದಾದ ಶಕ್ತಿ ಇರುವ ಸೂರ್ಯಕಾಂತಿಯು ವರ್ಷದ ಎಲ್ಲಾ ಹಂಗಾಮಿನಲ್ಲಿ ಬೆಳೆಯಬಹುದಾಗಿದೆ. ಶಿಫಾರಸು ಮಾಡಿದ ರಸಗೊಬ್ಬರದೊಂದಿಗೆ ಪ್ರತಿ ಎಕರೆಗೆ 40 ಕಿಲೋ ಗ್ರಾಂನಂತೆ ಜಿಪ್ಸ್‌ಮ್ ಪೂರೈಕೆ ಮಾಡಿದಲ್ಲಿ ಅದರಲ್ಲಿರುವ ಗಂಧಕವು ಎಣ್ಣೆ ಪ್ರಮಾಣ ಹೆಚ್ಚಿಸುವಲ್ಲಿ ಸಹಾಕಾರಿಯಾಗುತ್ತದೆ. ಪ್ರತಿ ಎಕರೆಗೆ ಶಿಫಾರಸು ಮಾಡಿದ ಪೋಷಕಾಂಶಗಳ ಅರ್ಧದಷ್ಟು ಎರೆಗೊಬ್ಬರದಿಂದ ಪೂರೈಕೆ ಮಾಡಿ, ಖರ್ಚುಕಡಿಮೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಕೀಟಶಾಸ್ತ್ರ ವಿಭಾಗದ ವಿಜ್ಞಾನಿ ಡಾ. ವಿಜಯಕುಮಾರ ಘಂಟೆ ಮಾನಾಡಿ, ಸೂರ್ಯಕಾಂತಿ ಬೆಳೆಯಲ್ಲಿ ಸಮಗ್ರ ಕೀಟ ನಿರ್ವಹಣೆ ಕೈಗೊಳ್ಳವುದರಿಂದ ಸಿಂಪರಣಾ ವೆಚ್ಚ ಕಡಿಮೆ ಗೊಳಿಸಬಹುದಾಗಿದೆ. ಬಾಧೆ ಕಂಡುಬಂದಲ್ಲಿ ಪ್ರತಿ ಲೀಟರ್‌ ನೀರಿಗೆ ೦.5 ಮಿ.ಲೀ. ಲಾಮ್ಡಾ ಸೈಲೋಥ್ರೀನ್ 5. ಇ.ಸಿ.ಅಥವಾ ಸ್ಪೈನೊಸ್ಯಾಡ 45 ಎಸ್.ಸಿ. ಬೆರೆಸಿ ಸಿಂಪರಣೆ ಮಾಡಿದಲ್ಲಿ ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು. ನಂಜಾಣು ರೋಗ ಕಂಡು ಬಂದಲ್ಲಿ ಭಾದಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು ಎಂದರು.

ವಿಜ್ಞಾನಿ ಡಾ. ಶ್ರೀವಾಣಿ. ಜಿ.ಎನ್. ಮಾತನಾಡಿ, ಪ್ರತಿ ಎಕರೆಗೆ ಎರಡು ಜೇನು ಕುಟುಂಬಗಳನ್ನು ಇಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಪರಾಗಸ್ಪರ್ಶ ಹೊಂದಿದ ಕಾಳುಕಟ್ಟುವಿಕೆ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ರೈತರು, ಕೃಷಿಯೊಂದಿಗೆ ಜೇನು ಸಾಕಾಣಿಕೆಯತ್ತ ಒಲವು ತೋರಿಸಬೇಕು ಎಂದು ಹೇಳಿದರು.

ವಿಜ್ಞಾನಿ ಡಾ. ಉಮೇಶ್ ಎಂ.ಆರ್. ಮಾತನಾಡಿ, ಭತ್ತದ ನಂತರ ಭತ್ತವನ್ನು ಬೆಳೆಯುವ ಬದಲಾಗಿ, ವ್ಯತಿರಿಕ್ತ ವಾತಾವರಣಕ್ಕನುಗುಣವಾಗಿ, ಭತ್ತದ ನಂತರ ಸೂರ್ಯಕಾಂತಿಯನ್ನು ಪರ್ಯಾಯ ಬೆಳೆಯನ್ನಾಗಿ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಸೂಚಿಸಿದರು.

ಕ್ಷೇತ್ರದ ಮಾಲಿಕ ಶರಣಬಸವ ಅವರು ಈ ತಳಿಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿ, ಗಿಡದಿಂದ ಗಿಡಕ್ಕೆ 20 ರಿಂದ 30 ಸೆಂ.ಮೀ. ಅಂತರ ಬಿಟ್ಟು ಬೆಳೆದಲ್ಲಿ ತೆನೆಯ ಗಾತ್ರ ಹಾಗೂ ಕಾಳು ಕಟ್ಟುವಿಕೆ ಪ್ರಮಾಣ ಹೆಚ್ಚಾಗಿ ಇಳುವರಿಯು ಜಾಸ್ತಿಯಾಗುತ್ತದೆ ಎಂದು ತಿಳಿಸಿದರು.

ಮುರ‍್ಹಾನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ 71 ರೈತರು ಭಾಗವಹಿಸಿ ತಂತ್ರಜ್ಞಾನದ ಸದುಪಯೋಗ ಪಡೆದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಪ್ರಹ್ಲಾದ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.