ADVERTISEMENT

ಮನುಷ್ಯರಿಗೆ ಅಯೋಡಿನ್ ಉಪ್ಪು ಅಗತ್ಯ: ಶಿಕ್ಷಣಾಧಿಕಾರಿ ಸರೋಜಾ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 15:20 IST
Last Updated 24 ಅಕ್ಟೋಬರ್ 2024, 15:20 IST
ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ. ಪೋಸ್ಟರ್‌ ಬಿಡುಗಡೆ ಮಾಡಿದರು
ರಾಯಚೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ. ಪೋಸ್ಟರ್‌ ಬಿಡುಗಡೆ ಮಾಡಿದರು   

ರಾಯಚೂರು: ‘ಅಯೋಡಿನ್ ಮನುಷ್ಯನಿಗೆ ಅಗತ್ಯವಾಗಿ ಬೇಕಾಗುವ ಸೂಕ್ಷ್ಮ ಪೋಷಕಾಂಶ. ಇದು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅವಶ್ಯಕ’ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸರೋಜಾ ಕೆ. ಹೇಳಿದರು.

ನಗರದ ಇಂದ್ರನಗರದ ಅಂಬೇಡ್ಕರ್ ಭವನದಲ್ಲಿ ವಿಶ್ವ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ದಿನ ಹಾಗೂ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ತಾಯಿಯ ಗರ್ಭದಲ್ಲಿರುವಾಗಲೇ ಶಿಶುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಗರ್ಭಿಣಿಯರಲ್ಲಿ ಅಯೋಡಿನ್ ಅಂಶ ಕೊರತೆಯಿದ್ದರೆ ಶಿಶುವಿನಲ್ಲಿ ಸರಿಪಡಿಸಲಾಗದಂಥ ದೈಹಿಕ ಹಾಗೂ ಮಾನಸಿಕ ತೊಂದರೆಗಳು ಉಂಟಾಗುತ್ತವೆ’ ಎಂದು ತಿಳಿಸಿದರು.

ADVERTISEMENT

‘ಅಯೋಡಿನ್ ಕೊರತೆ ಅಲ್ಪಪ್ರಮಾಣದಲ್ಲಿದ್ದರೂ ಪ್ರಾರಂಭದಲ್ಲಿ ಮಗುವಿಗೆ ಬೆಳವಣಿಗೆ ಸಹಜವಾಗಿ ಕಂಡರೂ ಕ್ರಮೇಣ ಕುಂಠಿತ ಬೆಳವಣಿಗೆ, ಬುದ್ಧಿ ಮಾಂದ್ಯತೆ, ಕಿವುಡು, ಮೂಕತನ ಮತ್ತಿತರ ನ್ಯೂನತೆಗಳು ಕಾಣಿಸಿಕೊಳ್ಳಬಹುದು. ಗರ್ಭಿಣಿಯರಲ್ಲಿ ಅಯೋಡಿನ್‌ ಕೊರತೆಯಿಂದ ಪದೇ-ಪದೇ ಗರ್ಭಪಾತ, ಸತ್ತು ಹುಟ್ಟುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಸಂತಾನೋತ್ಪತ್ತಿಯಲ್ಲಿ ತೊಂದರೆ ಆಗುತ್ತದೆ’ ಎಂದರು.

‘ಉಪ್ಪಿನಲ್ಲಿ 15-30 ಪಿಪಿಪಿಎಂ ಆಯೋಡಿನ್‌ ಇರಬೇಕು. ಒಂದು ದಿನಕ್ಕೆ ಅಗತ್ಯವಿರುವ ಅಯೋಡಿನ್ ಅಂಶದ ಪ್ರಮಾಣ ವಯಸ್ಕರಲ್ಲಿ 150 ಮೈಕ್ರೋ ಗ್ರಾಂ, ಗರ್ಭಿಣಿಯರು, ಬಾಣಂತಿಯರಿಗೆ 200 ಮೈಕ್ರೋ ಗ್ರಾಂ, 0-1ತಿಂಗಳ ಮಕ್ಕಳಿಗೆ 50 ಮೈಕ್ರೋ ಗ್ರಾಂ, 12-59 ತಿಂಗಳ ಮಕ್ಕಳಿಗೆ 90 ಮೈಕ್ರೋ ಗ್ರಾಂ, ಶಾಲಾ ಮಕ್ಕಳಿಗೆ 120 ಮೈಕ್ರೋ ಗ್ರಾಂ ಬೇಕು. ಪ್ರತಿಯೊಬ್ಬರು ತಮ್ಮ ದಿನನಿತ್ಯದ ಆಹಾರದಲ್ಲಿ ಅಯೋಡಿನ್‌ಯುಕ್ತ ಉಪ್ಪನ್ನು ಬಳಸುವುದರಿಂದ ಗಳಗಂಡ ರೋಗ, ನ್ಯೂನತೆಗಳ ನಿವಾರಣೆ ಸಾಧ್ಯ’ ಎಂದರು.

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಶಿಕಲಾ, ಎಚ್ಐಒ ಶ್ರುತಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.