ಜಾಲಹಳ್ಳಿ: ಸ್ಥಳೀಯ ಪ್ರಾಥಮಿಕ ರೈತ ಸೇವಾ ಸಹಕಾರ ಸಂಘದ ವ್ಯವಸ್ಥಾಪಕರಾಗಿ ಜಿಲ್ಲಾ ಸಹಕಾರಿ ಬ್ಯಾಂಕಿನ ವಿಸ್ತರ್ಣಾಧಿಕಾರಿ ರಾಜು ಬುಧವಾರ ಅಧಿಕಾರ ವಹಿಸಿಕೊಂಡರು.
ವೀರಭದ್ರಪ್ಪ ಅವರ ನಿವೃತ್ತಿಯ ನಂತರ ವ್ಯವಸ್ಥಾಪಕರ ಹುದ್ದೆ ಖಾಲಿ ಇತ್ತು. ಕಳೆದ ಎರಡು ತಿಂಗಳಿಂದ ವ್ಯವಸ್ಥಾಪಕರಿಲ್ಲದೇ ರೈತರಿಗರ ಬೆಳೆ ಸಾಲ, ಮರುಪಾವತಿ, ಮಹಿಳೆಯರ ಸ್ವಸಹಾಯ ಗುಂಪಿನ ಹಣಕಾಸು, ಪಡಿತರ ವಿತರಣೆ ವ್ಯವಹಾರಕ್ಕೆ ತುಂಬಾ ತೊಂದರೆ ಉಂಟಾಗಿತ್ತು.
‘ಬುಧವಾರವೇ 31 ರೈತರಿಗೆ ಸುಮಾರು ₹ 15 ಲಕ್ಷ ಸಾಲವನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ. ಮುಂದಿನ ಆದೇಶದ ವರೆಗೆ ಇಲ್ಲಿಯೇ ಇದ್ದು, ಗ್ರಾಹಕರಿಗೆ ಯಾವುದೇ ತೊಂದರೆ ಉಂಟಾಗದಂತೆ ನೋಡಿಕೊಳ್ಳಲಾಗುವುದು’ ಎಂದು ರಾಜು ಅವರು ತಿಳಿಸಿದರು.
ಅಧ್ಯಕ್ಷರ ವಿರುದ್ಧ ಅವಿಶ್ವಾಸ ಅರ್ಜಿ ಸಲ್ಲಿಕೆ: ರೈತ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಕೆರಿಲಿಂಗಪ್ಪ ನಾಡಗೌಡ ಅವರ ವಿರುದ್ಧ ಬ್ಯಾಂಕಿನ ಉಪಾಧ್ಯಕ್ಷ ಸೇರಿ 8 ನಿರ್ದೇಶಕರು ಪ್ರತ್ಯೇಕವಾಗಿ ಅವಿಶ್ವಾಸ ಅರ್ಜಿ ಸಲ್ಲಿಸಿದ್ದಾರೆ. ಒಟ್ಟು 12 ನಿರ್ದೇಶಕರಲ್ಲಿ ಒಬ್ಬರು ಎರಡು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಉಳಿದ 11 ಜನರಲ್ಲಿ ಅಧ್ಯಕ್ಷರ ವಿರುದ್ಧ 8 ಜನ ನಿರ್ದೇಶಕರು ಬುಧವಾರ ರಾಜು ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.