ADVERTISEMENT

ರಾಯಚೂರು: ಸಾಹಿತಿ ಈರಣ್ಣ ಬೆಂಗಾಲಿಯಿಂದ ‘ಕನ್ನಡ ಪುಸ್ತಕ ಓದು ಅಭಿಯಾನ’

ಬಾವಸಲಿ
Published 3 ಆಗಸ್ಟ್ 2024, 5:29 IST
Last Updated 3 ಆಗಸ್ಟ್ 2024, 5:29 IST
ರಾಯಚೂರಿನ ಆಟೊ ಚಾಲಕರೊಬ್ಬರಿಗೆ ಈರಣ್ಣ ಬೆಂಗಾಲಿ ಕನ್ನಡ ಪುಸ್ತಕ ನೀಡುತ್ತಿರುವುದು
ರಾಯಚೂರಿನ ಆಟೊ ಚಾಲಕರೊಬ್ಬರಿಗೆ ಈರಣ್ಣ ಬೆಂಗಾಲಿ ಕನ್ನಡ ಪುಸ್ತಕ ನೀಡುತ್ತಿರುವುದು   

ರಾಯಚೂರು: ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ವೆಂದು ಮರುನಾಮಕರಣ ಮಾಡಿ ಐವತ್ತು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕನ್ನಡ ಭಾಷೆಯ ಮೇಲಿನ ಅಭಿಮಾನದಿಂದ ರಾಯಚೂರಿನ ಯುವ ಸಾಹಿತಿ, ವ್ಯಂಗ್ಯಚಿತ್ರಕಾರ ಈರಣ್ಣ ಬೆಂಗಾಲಿ ಅವರು ‘ಕನ್ನಡ ಪುಸ್ತಕ ಓದು ಅಭಿಯಾನ’ ಆರಂಭಿಸಿದ್ದಾರೆ.

ಈರಣ್ಣ ಬೆಂಗಾಲಿ ಅವರು ತಾವು ಓದಿದ ಕನ್ನಡ ಪುಸ್ತಕಗಳನ್ನು ಮತ್ತು ತಾವೇ ಬರೆದ ಕನ್ನಡ ಪುಸ್ತಕಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಿ ಕನ್ನಡಾಭಿಮಾನ ಬೆಳೆಸುತ್ತಿದ್ದಾರೆ.

ಕನ್ನಡದ ಗಜಲ್, ಹೈಕು, ಮಕ್ಕಳ ಕಥೆ, ಸಾಧಕರ ಪುಸ್ತಕಗಳನ್ನು ರಾಯಚೂರು ನಗರದ ಕಿರಾಣಿ ಅಂಗಡಿ, ಬೀಜದ ಅಂಗಡಿ, ಔಷಧ ಅಂಗಡಿ, ಕಂಪ್ಯೂಟರ್ ಅಂಗಡಿ, ಆಟೊ ಚಾಲಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಬಡಾವಣೆಗಳಲ್ಲಿ ವಾಸವಾಗಿರುವ ಆಪ್ತರ ಮನೆ ಮನೆಗೆ ತೆರಳಿ ಕನ್ನಡ ಪುಸ್ತಕಗಳನ್ನು ನೀಡಿ ಓದುವಂತೆ ಮನವಿ ಮಾಡಿದ್ದಾರೆ.

ADVERTISEMENT

‘ಪುಸ್ತಕಗಳನ್ನು ಓದುವುದರಿಂದ ಜ್ಞಾನಮಟ್ಟ ವೃದ್ಧಿಯಾಗುತ್ತದೆ. ಪುಸ್ತಕಗಳು ನಮ್ಮ ಅರಿವನ್ನು ಹಿಗ್ಗಿಸುತ್ತವೆ. ಜಗತ್ತಿನ ಮಾಹಿತಿಯನ್ನು ಕೊಡುತ್ತದೆ ಎಂದು ಮನವರಿಕೆ ಮಾಡಿಕೊಡುತ್ತಿದ್ದಾರೆ. ಕನ್ನಡ ಭಾಷೆ, ಸಾಹಿತ್ಯವನ್ನು ಪ್ರೋತ್ಸಾಹಿಸಲು ಕನ್ನಡ ಸಾಹಿತ್ಯ ಪರಿಷತ್ತು, ಗಡಿನಾಡು ಅಭಿವೃದ್ಧಿ ಪ್ರಾಧಿಕಾರ  ರಾಜ್ಯದಾದ್ಯಂತ ಹಲವು ಕಾರ್ಯಕ್ರಮಗಳು ಮಾಡುತ್ತಿವೆ. ಇದರ ನಡುವೆಯೂ ಕನ್ನಡದ ಕಟ್ಟಾಳುಗಳಾಗಿ ಸ್ಥಳೀಯ ಮಟ್ಟದಲ್ಲಿ ಈರಣ್ಣ ಬೆಂಗಾಲಿಯವರು ತಮ್ಮ ಅಳಿಲು ಸೇವೆ ಮಾಡುತ್ತಿದ್ದಾರೆ ಎಂದು ಅನೇಕರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

‘ತಂತ್ರಜ್ಞಾನ ಮುಂದುವರೆದಂತೆ ಪುಸ್ತಕಗಳ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಮೊಬೈಲ್ ಗೀಳಿನಿಂದ ಕನ್ನಡ ಪುಸ್ತಕಗಳನ್ನು ಓದುವುದು ಕಡಿಮೆಯಾಗುತ್ತಿದೆ. ಹೀಗಾಗಿ ‘ಕನ್ನಡ ಪುಸ್ತಕಗಳ ಓದು ಅಭಿಯಾನ ಆರಂಭಿಸಿದ್ದೇನೆ. ಕನ್ನಡ ಉಳಿಯಲು ಕನ್ನಡದಲ್ಲೇ ವ್ಯವಹರಿಸಬೇಕು. ಕನ್ನಡ ಪುಸ್ತಕಗಳನ್ನು ಓದಬೇಕು. ಕನ್ನಡ ಚಲನಚಿತ್ರಗಳನ್ನೂ ನೋಡಬೇಕು‘ಎಂದು ಹೇಳುತ್ತಾರೆ.

‘ಕನ್ನಡ ಸಂಸ್ಕೃತಿ, ಪರಂಪರೆ ಉಳಿಯಲು ನಾಡಿನ ಪ್ರತಿಯೊಬ್ಬರು ಕನ್ನಡಕ್ಕಾಗಿ ತನುಮನದಿಂದ ಶ್ರಮಿಸಬೇಕು. ನಾಡಿನ ಕನ್ನಡೇತರರು ಸಹ ಇಲ್ಲಿನ ಭಾಷೆ ಅರಿಯಬೇಕು. ಕಲಿಯಬೇಕು’ ಎಂದು ಎನ್ನುತ್ತಾರೆ ಈರಣ್ಣ ಬೆಂಗಾಲಿ.

‘ಕನ್ನಡ ಪುಸ್ತಕ ಓದು ಅಭಿಯಾನದ ಭಾಗವಾಗಿ ಈರಣ್ಣ ಬೆಂಗಾಲಿ ಉಚಿತವಾಗಿ ಪುಸ್ತಕ ನೀಡಿದ್ದನ್ನು  ಖಂಡಿತವಾಗಿ ಓದುತ್ತೇನೆ. ಈ ಅಭಿಯಾನ ಉತ್ತಮವಾದ ಆಲೋಚನೆಯಾಗಿದೆ. ಕನ್ನಡಿಗರು ಕನ್ನಡದ ಪುಸ್ತಕಗಳನ್ನು ಹೆಚ್ಚು ಹೆಚ್ಚು ಓದುವ ರೂಢಿ ಮಾಡಿಕೊಳ್ಳಬೇಕು‘ ಎಂದು ಬೀಜದ ಅಂಗಡಿಯ ವ್ಯಾಪಾರಿ ಹನುಮಂತರಾಯ ಹೇಳುತ್ತಾರೆ.

ಸಾಹಿತಿ ಈರಣ್ಣ ಬೆಂಗಾಲಿಯವರು ಪುಸ್ತಕ ಓದು ಅಭಿಯಾನ ಪ್ರಯುಕ್ತ ರಾಯಚೂರಿನ ಬೀಜದ ವ್ಯಾಪಾರಿಗೆ ಪುಸ್ತಕ ಉಚಿತವಾಗಿ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.