ರಾಯಚೂರು: ಕನ್ನಡ ನೆಲದ ಅವಿಭಾಜ್ಯ ಅಂಗ ರಾಯಚೂರು ತಾಲ್ಲೂಕಿನ ಹಲವು ಗಡಿಗ್ರಾಮಗಳಲ್ಲಿ ಇಂದಿಗೂ ಸರ್ಕಾರಿ ಶಾಲೆಗಳಲ್ಲಿ ತೆಲುಗು ಮೂಲಕ ಕನ್ನಡ ಪಾಠ ಹೇಳಿಕೊಡುವ ಪರಿಸ್ಥಿತಿ ಇದೆ!
ಪುಚ್ಚಲದಿನ್ನಿ, ಮಿಡಗಲದಿನ್ನಿ, ಕೊತ್ತದೊಡ್ಡಿ, ಮಾಸದೊಡ್ಡಿ, ಸಿಂಗನೋಡಿ ಸೇರಿದಂತೆ ಗಡಿಭಾಗದ ಸರ್ಕಾರಿ ಶಲೆಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡವನ್ನಷ್ಟೆ ಬಲ್ಲ ಶಿಕ್ಷಕರು ಪಾಠ ಹೇಳುವುದಕ್ಕೆ ಪರದಾಡುತ್ತಿದ್ದಾರೆ.
’10 ವರ್ಷಗಳ ಹಿಂದಿನ ಸ್ಥಿತಿ ನೋಡಿದರೆ, ಮಕ್ಕಳಿಗೂ ಕನ್ನಡ ಭಾಷೆಯೇ ಬರುತ್ತಿರಲಿಲ್ಲ. ಸದ್ಯ ಶಾಲೆಗಳಲ್ಲಿ ಮಗು ಕನ್ನಡ ಮಾತನಾಡಲು ಪ್ರಯತ್ನಿಸುತ್ತಿದೆ. ಸಾಧ್ಯವಾದಷ್ಟು ಮಕ್ಕಳೆಲ್ಲ ಕನ್ನಡ ಓದಲು, ಬರೆಯಲು ಕಲಿಯುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸಲು ಶಿಕ್ಷಕರು ಅನಿವಾರ್ಯವಾಗಿ ತೆಲುಗು ಕಲಿತು ಪಾಠ ಮಾಡುತ್ತಿದ್ದಾರೆ’ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಗಡಿಗ್ರಾಮದ ಸರ್ಕಾರಿ ಶಾಲಾ ಮುಖ್ಯಗುರು ವಿವರಿಸಿದರು.
‘ಸಾಕ್ಷರತ ಭಾರತ ಕಾರ್ಯಕ್ರಮದ ಮೂಲಕ ದೊಡ್ಡವರಿಗೂ ಕನ್ನಡ ಪಾಠ ಮಾಡುತ್ತಿದ್ದೆ. ಕಲಿಕಾ ಕೇಂದ್ರಗಳ ಮಕ್ಕಳ ಕಲಿಕೆ ಮಾಡಿಸುವಂತೆ ಪ್ರೇರೆಪಿಸಿದ್ದೇನೆ. ಭಾಷಾ ಅಭಿಮಾನ ಬೆಳೆಸುವ ಕೆಲಸವನ್ನು ಸರ್ಕಾರಿ ಕನ್ನಡ ಶಾಲೆಗಳು ಇತ್ತೀಚೆಗೆ ಮಾಡುತ್ತಿವೆ. ತೆಲಂಗಾಣ, ಆಂಧ್ರಪ್ರದೇಶದ ಜನರು ತೆಲುಗು ಭಾಷೆ ಬಿಟ್ಟು ಬೇರೆ ಭಾಷೆಗಳನ್ನು ಪ್ರಾಣಹೋದರೂ ಮಾತನಾಡುವುದಿಲ್ಲ. ಅದನ್ನೆ ಮಾದರಿಯಾಗಿ ಹೇಳಿ, ಕನ್ನಡ ನೆಲದವರಾಗಿ ಕನ್ನಡ ಮಾತನಾಡುವಂತೆ ಪ್ರೇರೆಪಿಸಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.