ADVERTISEMENT

ರಾಯಚೂರು | ಇಚ್ಛಾಶಕ್ತಿ ಕೊರತೆ; ನಡೆಯದ ಅಕ್ಷರ ಜಾತ್ರೆ

2 ವರ್ಷಗಳಿಂದ ನಡೆಯದ ಜಿಲ್ಲಾ, ತಾಲ್ಲೂಕುಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ: ಸಾಹಿತ್ಯ ವಲಯದಲ್ಲೇ ಅಸಮಾಧಾನ

ಚಂದ್ರಕಾಂತ ಮಸಾನಿ
Published 8 ಜುಲೈ 2024, 5:57 IST
Last Updated 8 ಜುಲೈ 2024, 5:57 IST
   

ರಾಯಚೂರು: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಅದಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಎರಡು ವರ್ಷಗಳಿಂದ ವಿಫಲವಾಗಿರುವ ಕಾರಣ ಸಾಹಿತ್ಯ ವಲಯದಲ್ಲಿ ಪರಿಷತ್ತಿನ ಬಗ್ಗೆಯೇ ನಿರಾಸೆ ಮೂಡಿಸಿದೆ.

ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಒಂದು ತಾಲ್ಲೂಕಿನಲ್ಲೂ ತಾಲ್ಲೂಕು ಸಮ್ಮೇಳನ ನಡೆದಿಲ್ಲ. ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನವನ್ನೂ ಆಯೋಜಿಸಿಲ್ಲ. ಪರಿಷತ್ತು ಅನುದಾನಕ್ಕಾಗಿ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತ ಕುಳಿತಿರುವ ಕಾರಣ ಸಾಹಿತ್ಯಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ.

ಕೆಲ ತಾಲ್ಲೂಕು ಘಟಕಗಳು ಸಹ ಜನರೊಂದಿಗೆ ಬೆರೆತು ಕೆಲಸ ಮಾಡುತ್ತಿಲ್ಲ. ಪತ್ರಿಕೆಗಳಿಗೆ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳನ್ನು ನೀಡುತ್ತಿಲ್ಲ.ಕನಿಷ್ಠ ಪಕ್ಷ ದೂರವಾಣಿ ಕರೆ ಮಾಡಿಯೂ ಆಹ್ವಾನಿಸುತ್ತಿಲ್ಲ. ಆಯ್ದ ಜನರ ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಸಂದೇಶ ಹರಿಯಬಿಟ್ಟು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿವೆ.

ADVERTISEMENT

ಯುವ ಬರಹಗಾರರು, ಕವಿಗಳಿಗೆ ಜಿಲ್ಲೆಯಲ್ಲಿ ಸರಿಯಾಗಿ ಅವಕಾಶಗಳು ದೊರೆಯುತ್ತಿಲ್ಲ. ‘ಪರಿಷತ್‌ ಘಟಕಗಳು ಗುಂಪುಗಳಿಗೆ ಸೀಮಿತವಾಗಿವೆ’ ಎನ್ನುವ ಅಸಮಾಧಾನ ಸಾಹಿತ್ಯ ವಲಯದಲ್ಲಿ ಹೆಚ್ಚಾಗಿದೆ. ಸಂವಹನ ಕೊರತೆ ಹಾಗೂ ಜನರಿಂದಲೇ ದೂರವಾಗುತ್ತಿರುವ ಕಾರಣ ಸಾಹಿತ್ಯಿಕ ಬಾಂಧವ್ಯದ ನಡುವಿನ ಕಂದಕ ಹೆಚ್ಚುತ್ತಲೇ ಸಾಗಿದೆ.

2014ರ ಜೂನ್‌ನಲ್ಲಿ ಜಿಲ್ಲಾಮಟ್ಟದ ಕಥಾ ಕಮ್ಮಟ, ಎರಡು ಕವಿಗೋಷ್ಠಿ, ಒಂದು ಸಂವಾದ ಕಾರ್ಯಕ್ರಮ ಬಿಟ್ಟರೆ ಮಹಾಪುರುಷರ ಜಯಂತಿ ಆಚರಣೆ, ಸನ್ಮಾನ ಕಾರ್ಯಕ್ರಮಗಳಿಗೆ ಸೀಮಿತವಾಗಿದೆ.

ಅನುದಾನ ಬಿಡುಗಡೆಯಾಗುವಲ್ಲೇ ವಿಳಂಬ

‘ಕಳೆದ ವರ್ಷ ರಾಜ್ಯ ಸರ್ಕಾರ ಮೇನಲ್ಲಿ ಅನುದಾನ ಬಿಡುಗಡೆ ಮಾಡಿತು. ಹೀಗಾಗಿ ಜಿಲ್ಲಾ ಹಾಗೂ ತಾಲ್ಲೂಕು ಸಾಹಿತ್ಯ ಸಮ್ಮೇಳನ ಆಯೋಜಿಸಲು ಸಾಧ್ಯವಾಗಲಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಪ್ರತಿಕ್ರಿಯಿಸಿದರು.

‘ಪರಿಷತ್ತಿನ ಜಿಲ್ಲಾ ಘಟಕ ಒಂದು ವರ್ಷದ ಅವಧಿಯಲ್ಲಿ ಐದು ಪುಸ್ತಕಗಳನ್ನು ಬಿಡುಗಡೆ ಮಾಡಿದೆ. ಇದರ ಜತೆಗೆ ಸಂಸ್ಥಾಪನೆ ದಿನಾಚರಣೆ, ಮಹಾಪುರುಷರ ಜಯಂತಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದೆ’ ಎಂದರು.

‘ಜಿಲ್ಲಾ ಹಾಗೂ ತಾಲ್ಲೂಕು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ದಿಸೆಯಲ್ಲಿ ಪ್ರಯತ್ನ ನಡೆದಿದೆ’ ಎಂದು ತಿಳಿಸಿದರು.

ಮೂರು ವರ್ಷಗಳಿಂದ ನಡೆದಿಲ್ಲ‌ ದೇವದುರ್ಗ ಸಮ್ಮೇಳನ

ದೇವದುರ್ಗ: ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕಳೆದ ಮೂರು ವರ್ಷಗಳಿಂದ ನಡೆದಿಲ್ಲ. ನೆರೆಯ ಜಿಲ್ಲೆಯ ತಾಲ್ಲೂಕುಗಳಲ್ಲಿ 30ಕ್ಕೂ ಹೆಚ್ಚು ತಾಲ್ಲೂಕು ಸಮ್ಮೇಳನ ನಡೆದಿವೆ. ಆದರೆ, ದೇವದುರ್ಗದಲ್ಲಿ ಇದುವರೆಗೆ ಕೇವಲ 3 ತಾಲ್ಲೂಕು ಸಮ್ಮೇಳನಗಳು ಮಾತ್ರ ನಡೆದಿವೆ.

2021ರಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷರಾಗಿದ್ದ ಬಸವರಾಜ ಬ್ಯಾಗವಾಟ ಅವಧಿಯಲ್ಲಿ ನಡೆದದ್ದ ಸಮ್ಮೇಳನವೇ ಕೊನೆಯದು. ತಾಲ್ಲೂಕಿನಲ್ಲಿ ಸಾಹಿತಿಗಳ ಕೊರತೆ ಇಲ್ಲ. ಆದರೆ, ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಗುರುತಿಸುತ್ತಿಲ್ಲ ಎಂಬ ಆರೋಪ ಸಾಹಿತ್ಯ ಬಳಗದಲ್ಲಿ ಕೇಳಿಬರುತ್ತಿದೆ.

2021ರ ನವೆಂಬರ್ 21ರಲ್ಲಿ ನಡೆದ ಚುನಾವಣೆಯಲ್ಲಿ ದೇವದುರ್ಗದ ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ, ಜಿಲ್ಲಾ ಅಧ್ಯಕ್ಷರಾದ ನಂತರ ಜಿಲ್ಲಾ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮತ್ತಷ್ಟು ನಿಷ್ಕ್ರಿಯವಾಗಿದೆ. ಲೇಖಕರು ಬರೆದಿರುವ ಪುಸ್ತಕ ಬಿಡುಗಡೆ ಮತ್ತು ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮಕ್ಕೆ ಸೀಮಿತವಾಗಿದೆ ಎಂದು ದೇವದುರ್ಗದ ಸಾಹಿತಿಗಳೇ ದೂರುತ್ತಿದ್ದಾರೆ.

‘ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲೆಯಾದ್ಯಂತ ಏಳು ತಾಲ್ಲೂಕುಗಳಲ್ಲಿ ‘ಕನ್ನಡಕ್ಕಾಗಿ ಸಾವಿರದ ಒಂದು’ ಎಂಬ ಶೀರ್ಷಿಕೆಯಡಿಯಲ್ಲಿ ಯೋಜನೆ ರೂಪಿಸಿ ಎಲ್ಲಾ ಇಲಾಖೆಯ ಅಧಿಕಾರಿಗಳಿಂದ ಮತ್ತು ಸಾಮಾನ್ಯ ಕನ್ನಡಿಗರಿಂದ ₹1,001 ಪಡೆದುಕೊಂಡು ಯಾವುದೇ ಸಾಹಿತ್ಯ ಕಾರ್ಯ ಚಟುವಟಿಕೆ ನಡೆಸಿಲ್ಲ’ ಎಂದು ದೇವದುರ್ಗ ತಾಲ್ಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಮರಿಲಿಂಗಪ್ಪ ಕೋಳೂರು ಬೇಸರ ವ್ಯಕ್ತಪಡಿಸಿದ್ದಾರೆ.

ಪದಾಧಿಕಾರಿಗಳ ಇಚ್ಛಾಶಕ್ತಿಯ ಕೊರತೆ

ಸಿಂಧನೂರು: ಹತ್ತು ವರ್ಷಗಳಿಂದ ಸಿಂಧನೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿಲ್ಲ.

ಫೆ.22, 2014ರಲ್ಲಿ ರಮಾದೇವಿ ಶಂಭೋಜಿ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿದ್ಧ ಅವಧಿಯಲ್ಲಿ ತಾಲ್ಲೂಕು ಸಾಹಿತ್ಯ ಸಮ್ಮೇಳನ ಜರುಗಿತ್ತು. 2019ರಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ.

‘ತಾಲ್ಲೂಕು ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳ ನಿರಾಸಕ್ತಿ ಕಾರಣ ತಾಲ್ಲೂಕು ಸಮ್ಮೇಳನಗಳು ನಡೆದಿಲ್ಲ. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಕ್ರಿಯಾಶೀಲರಾಗಿಲ್ಲ. ಜಿಲ್ಲಾ ಅಧ್ಯಕ್ಷರ ಪ್ರೇರಣೆ, ಪ್ರೋತ್ಸಾಹ ಮತ್ತು ಒತ್ತಡ ಇದ್ದರೆ ತಾಲ್ಲೂಕು ಅಧ್ಯಕ್ಷರು ಜಾಗೃತರಾಗಿರುತ್ತಾರೆ’ ಎಂದು ಸಾಹಿತಿ ಎಚ್.ಜಿ.ಹಂಪಣ್ಣ ಹೇಳಿದರು.

‘ಜಿಲ್ಲಾ ಅಧ್ಯಕ್ಷರು ಜನರೊಂದಿಗೆ ಬೆರೆತು ವಿಶ್ವಾಸವಿಟ್ಟುಕೊಂಡು ಕೆಲಸ ಮಾಡಿದರೆ, ಸಾಹಿತ್ಯಾಸಕ್ತರೇ ಸಮ್ಮೇಳನ ಮಾಡುವುದಕ್ಕೆ ಶಕ್ತಿ ತುಂಬುತ್ತಾರೆ’ ಎನ್ನುತ್ತಾರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿರುವ ಇಟಗಿ ಭೀಮನಗೌಡ.

ಸಹಕಾರ: ಡಿ.ಎಚ್‌.ಕಂಬಳಿ, ಬಸವರಾಜ ನಂದಿಕೋಲಮಠ, ಬಸವರಾಜ ಭೋಗಾವತಿ, ಯಮನೇಶ ಗೌಡಗೇರಾ

ಮಾನ್ವಿ ಸಮ್ಮೇಳನ: ಶೀಘ್ರ ಸಭೆ

ಮಾನ್ವಿ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದಿಂದ ಮಾನ್ವಿ ಪಟ್ಟಣದಲ್ಲಿ 2023ರ ಫೆಬ್ರುವರಿಯಲ್ಲಿ ಸಾಹಿತಿ ಮಧುಕುಮಾರಿ ಪಾಂಡೆ ಅಧ್ಯಕ್ಷತೆಯಲ್ಲಿ ಪ್ರಥಮ ತಾಲ್ಲೂಕು ಮಟ್ಟದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದೆ.

ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ದತ್ತಿ ಉಪನ್ಯಾಸ ಹಾಗೂ ಕನ್ನಡಪರ ಚಟುವಟಿಕೆಗಳು ಸಾಂದರ್ಭಿಕವಾಗಿ ನಡೆದಿವೆ.

‘ಮಾನ್ವಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸುವ ವಿಷಯವಾಗಿ ಶೀಘ್ರದಲ್ಲಿ ಸಾಹಿತ್ಯಾಸಕ್ತರು, ಸಾಹಿತಿಗಳು ಹಾಗೂ ಕನ್ನಡಪರ ಸಂಘಟನೆಗಳ ಸಭೆ ಕರೆಯಲು ನಿರ್ಧರಿಸಲಾಗಿದೆ’ ಎಂದು ಕಸಾಪ ಮಾನ್ವಿ ತಾಲ್ಲೂಕು ಘಟಕದ ಅಧ್ಯಕ್ಷ ರವಿಕುಮಾರ ಪಾಟೀಲ ತಿಳಿಸಿದರು.

ಸ್ಥಳೀಯ ಸಂಪನ್ಮೂಲನದ ಕೊರತೆ

ಲಿಂಗಸುಗೂರು: ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ನಿರಾಸಕ್ತಿ ಹಾಗೂ ಸ್ಥಳೀಯ ಸಂಪನ್ಮೂಲ ಕೊರತೆಗಳ ಮಧ್ಯೆ ಸಾಹಿತ್ಯಿಕ ಚಟುವಟಿಕೆಗಳು ಕುಂಠಿತಗೊಂಡಿವೆ.

ಶರಣರು, ಸಂತರು, ಸೂಫಿಗಳು ನಡೆದಾಡಿದ ದಾಸ ಮತ್ತು ವಚನ ಸಾಹಿತ್ಯದ ನೆಲದಲ್ಲಿ 1995ರವರೆಗೆ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆಯದೆ ಹೋಗಿದ್ದು ಸಂಘ ಸಂಸ್ಥೆಗಳ ಮತ್ತು ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

1995ರಲ್ಲಿ ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದು ಐತಿಹ್ಯ. ನಂತರದಲ್ಲಿ 2004, 2016ರಲ್ಲಿ ಒಟ್ಟು ಮೂರು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳು ಮಾತ್ರ ನಡೆದಿವೆ. ನಂತರದ ಎಂಟು ವರ್ಷಗಳಲ್ಲಿ ದತ್ತಿ ಉಪನ್ಯಾಸಗಳಿಗೆ ಸಾಹಿತ್ಯ ಪರಿಷತ್ತು ಸೀಮಿತವಾಗಿದೆ.

ಕಸಾಪ ಇಲ್ಲಿ ಸಾಹಿತಿಗಳು, ಸಾಹಿತ್ಯಾಸಕ್ತರ ಸದಸ್ಯತ್ವಕ್ಕೆ ಆದ್ಯತೆ ನೀಡಿಲ್ಲ. ಬದಲಾಗಿ ಜಾತಿ ಮತ್ತು ರಾಜಕೀಯ ಇಚ್ಛಾಶಕ್ತಿ ಆಧಾರಿತ ಸದಸ್ಯತ್ವ ಕಲ್ಪಿಸಿರುವುದು ನಿರುತ್ಸಾಹಕ್ಕೆ ಕಾರಣವಾಗಿದೆ ಎಂದು ಕಸಾಪ ಸದಸ್ಯರೇ ಆಡಿಕೊಳ್ಳುತ್ತಿದ್ದಾರೆ.

‘ಸಾಹಿತ್ಯಿಕ ಚಟುವಟಿಕೆಗಳಿಗೆ ಸರ್ಕಾರಗಳು ಪ್ರೋತ್ಸಾಹ ನೀಡುತ್ತಿಲ್ಲ. ನಮ್ಮಲ್ಲಿ ನಿರಂತರ ಬರಗಾಲದ ಛಾಯೆ, ಬಡತನ ಸಮಸ್ಯೆ, ಪ್ರತಿನಿಧಿಗಳ ನಿರಾಶಕ್ತಿ, ಸಾಹಿತ್ಯಸಕ್ತರ ಗುಂಪುಗಾರಿಕೆ ಸಾಹಿತ್ಯ ಚಟುವಟಿಕೆಗಳ ಹಿನ್ನಡೆಗೆ ಕಾರಣ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಮಾಜಿ ಅಧ್ಯಕ್ಷ ಶಶಿಕಾಂತ ಕಾಡ್ಲೂರು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.