ರಾಯಚೂರು: ಹೆಣ್ಣು ಮತ್ತು ಗಂಡಿನ ಆತ್ಮಕ್ಕೆ ಕುಲದ ಭೇದವಿಲ್ಲ. ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿ ಮನುಷ್ಯನನ್ನು ಸುಸಂಸ್ಕೃತ ಆಗಿಸುತ್ತದೆ. ಜಾತಿ ಹೋಗಲಾಡಿಸಿ ಎಲ್ಲರೂ ಭಾರತೀಯರಾಗಬೇಕು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಹೇಳಿದರು.
ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕನ್ನಡ ಅಧ್ಯಯನ ವಿಭಾಗದ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಉತ್ತಮ ನಡವಳಿಕೆ ರೂಢಿಸಿಕೊಳ್ಳಲು ಸಹಾಯವಾಗುತ್ತದೆ. ವ್ಯಕ್ತಿಗತವಾಗಿ ತನಗೆ ತಾನೆ ಮೊದಲು ಗೌರವಿಸಬೇಕು. ಆಗ ಮಾತ್ರ ಸಮಾಜವನ್ನು ಗೌರವ ಮತ್ತು ಪ್ರೀತಿಯಿಂದ ಕಾಣಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಪ್ರೊ.ಪಾರ್ವತಿ ಸಿ.ಎಸ್. ಮಾತನಾಡಿದರು.
ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿಶ್ವನಾಥ ಎಂ. ಅವರು ಮಾತನಾಡಿ, ಪತ್ರಿಕೆಗಳು ಮತ್ತು ಗ್ರಂಥಗಳನ್ನು ಓದುವುದರ ಮುಖಾಂತರ ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಬೇಕು. ಸಮಾಜಕ್ಕೆ ಪೂರಕವಾದ ವಾತಾವರಣದಲ್ಲಿ ಪ್ರಯತ್ನಪಟ್ಟು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಗುಲ್ಬರ್ಗಾ ಸಿಂಡಿಕೇಟ್ ಸದಸ್ಯ ಡಾ.ಶರಣಬಸವ ಪಾಟೀಲ ಜೋಳದಹೆಡಗಿ ಮಾತನಾಡಿ, ಕನ್ನಡವು ಒಂದು ಶಕ್ತಿ, ಪ್ರೀತಿ, ತಾಳ್ಮೆ, ಸಂಭ್ರಮ ಅಷ್ಟೇ ಅಲ್ಲದೇ ಮಾನವೀಯ ಮೌಲ್ಯಗಳನ್ನು ಒಳಗೊಂಡ ಒಂದು ಸಂಸ್ಕೃತಿಯ ಸಂಸ್ಕಾರವಾಗಿದೆ. ಕನ್ನಡ ಮತ್ತು ಸಾಹಿತ್ಯ ಶಿಕ್ಷಣದ ಮೂಲಕ ನಮಗೆಲ್ಲಾ ಸಂಸ್ಕಾರ ಕೊಡುವುದರ ಜೊತೆಗೆ ಬದುಕನ್ನು ಕಟ್ಟಿಕೊಡುತ್ತಿದೆ ಎಂದರು.
ಉಪಕರಣಾತ್ಮಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪಿ.ಭಾಸ್ಕರ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ನುಸ್ರತ್ ಫಾತೀಮಾ, ಗ್ರಂಥಪಾಲಕ ಡಾ.ಜಿ.ಎಸ್ ಬಿರಾದರ, ಡಾ.ಲಿಂಗಣ್ಣ ಗಾಣದಾಳ ಮಾತನಾಡಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳನ್ನು ರಂಗೋಲಿಯಲ್ಲಿ ಅಂದವಾಗಿ ಬಿಡಿಸಿದ ಬಾಗಲವಾಡ ಚಿತ್ರಕಲಾವಿದ ದೇವಣ್ಣ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಶಿವಮ್ಮ ಮತ್ತು ತಂಡ ನಾಡಗೀತೆ ಹಾಡಿದರು. ಕನ್ನಡ ಸಾಹಿತ್ಯ ಸಂಘದ ಕಾರ್ಯಾಧ್ಯಕ್ಷ ಶರಣಪ್ಪ ಛಲವಾದಿ ಪ್ರಾಸ್ತಾವಿಕ ಮಾತನಾಡಿದರು. ಪರಶುರಾಮ ಕಟ್ಟಿಮನಿ ಸ್ವಾಗತಿಸಿದರು, ನರಸಪ್ಪ ಚಿತ್ತಾಪುರ ಪರಿಚಯಿಸಿದರು, ಮಂಜುನಾಥ, ರೇಖಾ ನಿರೂಪಿಸಿದರು. ಮಸ್ತಾನ್ ಸಾಬ್ ವಂದಿಸಿದರು.
ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಮಲ್ಲೇಶ.ಆರ್.ಛಲವಾದಿ, ಪುಷ್ಪಾವತಿ, ನಿರ್ಮಲಾ ಎಲ್ ಮಾನೆ, ಹುಲಿಯಪ್ಪ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.