ರಾಯಚೂರು: ರಾಜ್ಯದಲ್ಲಿ ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಅಭಿವೃದ್ಧಿ ವಿಷಯದಲ್ಲಿ ರಾಯಚೂರನ್ನು ಕಡೆಗಣಿ ಸಿದ್ದೇ ಹೆಚ್ಚು. ಜಿಲ್ಲೆಯ ಮಟ್ಟಿಗೆ ಹೊಸ ಯೋಜನೆಗಳ ನಿರೀಕ್ಷೆಗಳೇನೂ ಇಲ್ಲ.
ಆದರೆ ಈಗಾಗಲೇ ಘೋಷಣೆ ಆಗಿರುವ ಯೋಜನೆಗಳಿಗೆ ಅಗತ್ಯ ಅನುದಾನ ಒದಗಿಸಿದರೂ ಸಾಕು ಎನ್ನುವುದೇ ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದೆ.
2019ರಲ್ಲೇ ಗುಲ್ಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಕ್ಕೆ ಆಡಳಿತ ಅಧಿಕಾರಿ ನೇಮಕ ಮಾಡಿ ಸ್ವತಂತ್ರ ರಾಯಚೂರು ವಿಶ್ವವಿದ್ಯಾಲಯದ ಕನಸಿಗೆ ನೀರೆರೆದಿದೆ.
ಕಳೆದ ವರ್ಷ ರಾಯಚೂರು ವಿಶ್ವವಿದ್ಯಾಲಯ ಘೋಷಣೆ ಮಾಡಿದರೂ ಅಲ್ಲಿ ಮೂಲಸೌಕರ್ಯಗಳ ಒದಗಿಸಲು ಅಗತ್ಯ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಹೀಗಾಗಿ ವಿಶ್ವವಿದ್ಯಾಲಯ ಹಲವು ಕೊರತೆಗಳ ಮಧ್ಯೆ ಗುಣಮಟ್ಟದ ಶಿಕ್ಷಣ ಕೊಡಲು ಹೆಣಗಾಡುತ್ತಿದೆ.
ವಿಶ್ವವಿದ್ಯಾಲಯಗಳ ಅಂಕಿ ಸಂಖ್ಯೆಗಳ ಪ್ರಕಾರ ರಾಷ್ಟ್ರೀಯ ವಿಶ್ವವಿದ್ಯಾಲಯಗಳ ಸರಾಸರಿಗಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದಿದ್ದಾರೆ. ಒಟ್ಟು 20 ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಹಿಂದುಳಿದ ಜಿಲ್ಲೆಯಲ್ಲಿರುವ ಈ ವಿಶ್ವವಿದ್ಯಾಲಯಲ್ಲಿ ಅಭಿವೃದ್ಧಿ ಪಡಿಸುವ ದಿಸೆಯಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿಲ್ಲ. ಇದು ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳ ಬೇಸರಕ್ಕೆ ಕಾರಣವಾಗಿದೆ.
‘ರಾಜ್ಯ ಸರ್ಕಾರ ಹಿಂದುಳಿದ ಜಿಲ್ಲೆಯ ರಾಯಚೂರು ವಿಶ್ವವಿದ್ಯಾಲಯದ ಮೂಲಸೌಕರ್ಯ ಅಭಿವೃದ್ಧಿ ಪಡಿಸಲು ವಿಶೇಷ ಅನುದಾನ ಕೊಡಲಿದೆ ಎನ್ನುವ ನಂಬಿಕೆ ಇದೆ. ಇದು ವಿದ್ಯಾರ್ಥಿಗಳ ನಿರೀಕ್ಷೆಯೂ ಆಗಿದೆ‘ ಎಂದು ಎಐಡಿಎಸ್ಒ ಜಿಲ್ಲಾ ಘಟಕದ ಅಧ್ಯಕ್ಷ ಹಯ್ಯಾಳಪ್ಪ ಹೇಳುತ್ತಾರೆ.
‘ಮಾನ್ವಿ ಪಟ್ಟಣದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು , ಮಹಿಳಾ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮಂಜೂರು ಮಾಡಬೇಕು. ಬಜೆಟ್‌ನಲ್ಲಿ ಘೋಷಣೆ ಮಾಡಿ ಅನುದಾನ ಒದಗಿಸಬೇಕು’ ಎಂದು ಮಾನ್ವಿಯ ಹೈದರಾಬಾದ್ ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಮಲ್ಲೇಶ ಮಾಚನೂರು ಆಶಯ ವ್ಯಕ್ತಪಡಿಸುತ್ತಾರೆ.
ನಿರ್ಮಾಣವಾಗದ ವಿಮಾನ ನಿಲ್ದಾಣ: ರಾಜ್ಯ ಸರ್ಕಾರ 2022-2023 ಸಾಲಿನ ಬಜೆಟ್‌ನಲ್ಲಿ ರಾಯಚೂರಲ್ಲಿ ₹186 ಕೋಟಿ ವೆಚ್ಚದಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿದೆ. ವಿಮಾನ ನಿಲ್ದಾಣಕ್ಕೆ ಬೇಕಿದ್ದ ಹೆಚ್ಚುವರಿ 23 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ರಾಯಚೂರು ಏರೋಡ್ರಮ್ ಹೆಸರಿನಲ್ಲಿ 315 ಎಕರೆ ಭೂಮಿ ಇದರೆ ನಿಲ್ದಾಣ ಇದೆ ಆದರೆ ನಿಲ್ದಾಣ ಕಾಮಗಾರಿಯೇ ಆರಂಭವಾಗಿಲ್ಲ.
‘ಹೊಸ ಸರ್ಕಾರ ಬಂದ ಮೇಲೆ ಇನ್ನಷ್ಟು ಅನುದಾನ ಸಿಗಬಹುದು. ವಿಮಾನ ನಿಲ್ದಾಣದ ಕಾಮಗಾರಿ ವೇಗ ಪಡೆಯಬಹುದು ಎನ್ನುವ ನಿರೀಕ್ಷೆ ಜಿಲ್ಲೆಯ ಜನರಲ್ಲಿ ಇದೆ. ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ವಿಮಾನ ನಿಲ್ದಾಣ ನಿರ್ಮಾಣವಾದರೆ ಕೈಗಾರಿಕೆಗಳು ಹಾಗೂ ಬಂಡವಾಳದಾರರು ಇಲ್ಲಿಗೆ ಬರುತ್ತಾರೆ’ ಎಂದು ರಾಯಚೂರಿನ ಚೇಂಬರ್ ಆಫ್ ಕಾರ್ಮರ್ಸ್‌ನ ಅಧ್ಯಕ್ಷ ತ್ರಿವಿಕ್ರಮ ಜೋಶಿ ಹೇಳುತ್ತಾರೆ.
ಐಐಐಟಿ ನೂತನ ಕ್ಯಾಂಪಸ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ಕೊಡಬೇಕು. ಉದ್ಯೋಗ ಸೃಷ್ಟಿಗೆ ಹೊಸ ಯೋಜನೆಗಳನ್ನು ಘೋಷಿಸಬೇಕು.ಹಯ್ಯಾಳಪ್ಪ ಎಐಡಿಎಸ್ಒ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.