ADVERTISEMENT

ಮಸ್ಕಿ: ವಿಧಾನ ಪರಿಷತ್‌ ಟಿಕೆಟ್‌ಗೆ ಪ್ರತಾಪಗೌಡ ಬಿಗಿ ಪಟ್ಟು

ಪ್ರಕಾಶ ಮಸ್ಕಿ
Published 24 ಮೇ 2024, 6:12 IST
Last Updated 24 ಮೇ 2024, 6:12 IST
ಪ್ರತಾಪಗೌಡ ಪಾಟೀಲ,
ಪ್ರತಾಪಗೌಡ ಪಾಟೀಲ,   

ಮಸ್ಕಿ: ವಿಧಾನ ಪರಿಷತ್‌ಗೆ ಬಿಜೆಪಿ ಟಿಕೆಟ್ ಪಡೆಯಲು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಪಟ್ಟು ಹಿಡಿದಿದ್ದು ಕಳೆದು ಮೂರು ದಿನಗಳಿಂದ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶಿವರಾಜ ಪಾಟೀಲ ಸೇರಿದಂತೆ ಜಿಲ್ಲೆಯ ಹಾಗೂ ಕ್ಷೇತ್ರದ ಕೆಲವು ಮುಖಂಡರು ಪಕ್ಷದ ವರಿಷ್ಠರನ್ನು ಭೇಟಿಯಾಗಿ ಪ್ರತಾಪಗೌಡ ಪರವಾಗಿ ಮನವಿ ಮಾಡಲಿದ್ದಾರೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ ಗೆ ತಿಳಿಸಿದ್ದಾರೆ.

2018ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಪ್ರತಾಪಗೌಡ ಪಾಟೀಲ ಒಂದೇ ವರ್ಷದಲ್ಲಿ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಕೆಡವುವಲ್ಲಿ ಪ್ರಮುಖ ಪಾತ್ರ ವಹಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 17 ಜನ ವಲಸಿಗರಲ್ಲಿ ಪ್ರತಾಪಗೌಡ ಮೊದಲಿಗರಾಗಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಕಾರಣರಾಗಿದ್ದರು. ಬಳಿಕ ನಡೆದ ಉಪ ಚುನಾವಣೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ಪ್ರತಾಪಗೌಡ ಪಾಟೀಲ ರಾಜಕೀಯವಾಗಿ ಕುಗ್ಗಿದ್ದರು.

ADVERTISEMENT

ಈಗ ಖಾಲಿಯಾಗುತ್ತಿರುವ ವಿಧಾನ ಪರಿಷತ್ತ್‌ ಸ್ಥಾನಕ್ಕೆ ಬಿಜೆಪಿ ಟಿಕೆಟ್ ಪಡೆದು ರಾಜಕೀಯ ಪುನರ್ ಜನ್ಮ ಪಡೆಯಲು ಮುಂದಾಗಿದ್ದಾರೆ. ಬುಧವಾರ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಶಾಸಕ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಸದಾನಂದಗೌಡ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಮುಖಂಡರನ್ನು ಭೇಟಿಯಾಗಿ, ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮೊದಲ ಹೆಜ್ಜೆ ಇಟ್ಟ ನನಗೆ ಅನ್ಯಾಯವಾಗಿದ್ದು ವಿಧಾನ ಪರಿಷತ್‌ ಟಿಕೆಟ್ ನೀಡಿ ನ್ಯಾಯ ಕೊಡಬೇಕು’ ಎಂದು ಮನವಿ ಮಾಡಿದ್ದಾರೆ.

ಬುಧವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲೂ ಪ್ರತಾಪಗೌಡ ಪಾಟೀಲರ ಹೆಸರು ಪ್ರಸ್ತಾಪವಾಗಿದೆ, ಹೈಕಮಾಂಡ್‌ಗೆ ಪ್ರತಾಪಗೌಡರ ಹೆಸರು ಸೇರಿಸಿ ಆಕಾಂಕ್ಷೆಗಳ ಪಟ್ಟಿ ಕಳಿಸಲು ತಿರ್ಮಾನಿಸಲಾಗಿದೆ ಎನ್ನಲಾಗಿದೆ. ಈ ನಡುವೆ ಒಂದೇರಡು ದಿನಗಳಲ್ಲಿ ಮಾಜಿ ಸಚಿವ ಶ್ರೀರಾಮುಲು ಪ್ರತಾಪಗೌಡರೊಂದಿಗೆ ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಲಿದ್ದಾರೆ ಎಂದು ಮುಖಂಡರೊಬ್ಬರು ಹೇಳಿದ್ದಾರೆ.

ಬಿಜೆಪಿ ವರಿಷ್ಠರು ನನಗೆ ವಿಧಾನ ಪರಿಷತ್ತಿನ ಟಿಕೆಟ್ ನೀಡಲಿದ್ದಾರೆ ಎಂಬ ಭರವಸೆ ಇದೆ. ನನಗೆ ಆದ ಅನ್ಯಾಯ ಎಲ್ಲಾ ಮುಖಂಡರಿಗೆ ಗೊತ್ತಿದೆ. ವರಿಷ್ಠರಿಂದ ನ್ಯಾಯ ಸಿಗುವ ಭರವಸೆ ಇದೆ
–ಪ್ರತಾಪಗೌಡ ಪಾಟೀಲ, ಮಾಜಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.