ರಾಯಚೂರು: ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಸೋಮವಾರ ನಡೆದ ಸಮಾರಂಭದಲ್ಲಿ ಸಾಹಿತಿಗಳಿಗೆ 2020–21ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಹಿತಿಗಳಾದ ಜಿನದತ್ತ ದೇಸಾಯಿ, ಡಾ.ನಾ.ಮೊಗಸಾಲೆ, ಡಾ.ಸರಸ್ವತಿ ಚಿಮ್ಮಲಗಿ, ಪ್ರೊ.ಬಸವರಾಜ ಕಲ್ಗುಡಿ ಮತ್ತು ಯಲ್ಲಪ್ಪ ಕೆ.ಕೆ.ಪುರ ಅವರಿಗೆ ‘ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹50 ಸಾವಿರ ನಗದು ಒಳಗೊಂಡಿದೆ.
ಸಾಹಿತಿಗಳಾದ ಡಾ.ಚಂದ್ರಕಲಾ ಬಿದರಿ, ಪ್ರೊ.ಎಂ.ಎನ್.ವೆಂಕಟೇಶ, ಡಾ.ಚನ್ನಬಸವಯ್ಯ ಹಿರೇಮಠ, ಡಾ.ಮ.ರಾಮಕೃಷ್ಣ, ಅಬ್ದುಲ್ ರಶೀದ್, ಡಾ.ವೈ.ಎಂ.ಭಜಂತ್ರಿ, ಗಿರೀಶರಾವ್ ಹತ್ವಾರ್ (ಜೋಗಿ), ಮೈಸೂರು ಕೃಷ್ಣಮೂರ್ತಿ, ಗಣೇಶ ಅಮೀನಗಡ, ಆಲೂರು ದೊಡ್ಡನಿಂಗಪ್ಪ ಅವರಿಗೆ ‘ಸಾಹಿತ್ಯ ಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ.
ವರ್ಷದ ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ 19 ಕೃತಿಗಳ ಲೇಖಕರಿಗೆ ನಗದು ಮತ್ತು ಪ್ರಮಾಣಪತ್ರ ನೀಡಲಾಯಿತು. ದತ್ತಿ ಬಹುಮಾನಕ್ಕೆ ಆಯ್ಕೆಯಾದ 10 ಕೃತಿಗಳ ಲೇಖಕರಿಗೂ ಬಹುಮಾನ ನೀಡಲಾಯಿತು.
ಇದಕ್ಕೂ ಮುನ್ನ ಅಭಿನಂದನಾ ನುಡಿಗಳನ್ನಾಡಿದ ಸಾಹಿತಿ ಎಚ್.ಎಸ್.ಶಿವಪ್ರಕಾಶ್ ಅವರು, ‘ಮಹಾರಾಜರು ನಿರ್ಮಿಸಿದ ಸ್ಮಾರಕಗಳು ಅಳಿದುಹೋಗಿವೆ. ಆದರೆ, ಸಾಹಿತ್ಯ ಪರಂಪರೆಗೆ ಅಳಿವಿಲ್ಲ’ ಎಂದು ಹೇಳಿದರು.
‘ಜಗತ್ತಿನ ಬೇರೆಬೇರೆ ದೇಶಗಳ ಸಾಹಿತ್ಯವನ್ನು ಅವಲೋಕಿಸಿದಾಗ, ಭಾರತದಲ್ಲಿರುವ ವೈವಿಧ್ಯಮಯ ಸಾಹಿತ್ಯ ಅವರಲ್ಲಿ ಇಲ್ಲ’ ಎಂದರು.
‘ಕನ್ನಡದಲ್ಲಿರುವ ಸಮಗ್ರತೆ ಬೇರೆ ಸಾಹಿತ್ಯದಲ್ಲಿ ಇಲ್ಲ. ಆದರೆ, ಕ್ಯುಬಾದಂತಹ ಸಣ್ಣ ದೇಶಗಳಲ್ಲೂ ವರ್ಷಕ್ಕೆ ಹತ್ತಾರು ಅಂತರರಾಷ್ಟ್ರೀಯ ಮಟ್ಟದ ಕಾವ್ಯ ಸಮ್ಮೇಳನನಡೆಯುತ್ತವೆ. ಭಾರತದಲ್ಲಿ ಈ ರೀತಿ ಕಾರ್ಯಕ್ರಮಗಳಾಗುವುದಿಲ್ಲ. ವಿದೇಶಗಳಲ್ಲಿ ಸಾಹಿತ್ಯವನ್ನು ಎಲ್ಲ ಸ್ತರಗಳಲ್ಲೂ ಒಯ್ಯುತ್ತಾರೆ. ಜೈಲು, ಆಸ್ಪತ್ರೆ, ವೃದ್ಧಾಶ್ರಮದಲ್ಲೂ ಸಾಹಿತ್ಯ ಕಾರ್ಯಕ್ರಮ ನಡೆಯುತ್ತವೆ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಡಾ.ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.