ಲಿಂಗಸುಗೂರು: ಸರ್ಕಾರ ನಿಗದಿಪಡಿಸಿ ಆದೇಶ ಹೊರಡಿಸಿರುವ ಗ್ರಾಮ ಪಂಚಾಯಿತಿ ನೌಕರರ ಕನಿಷ್ಠ ವೇತನ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಘಟಕದ ನೌಕರರು ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾ ಕಮ್ಮಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ ನೌಕರರ ಅಹವಾಲು ಸ್ವೀಕರಿಸಿದರು.
ನೌಕರರ ವಿದ್ಯಾರ್ಹತೆ, ಜನ್ಮದಿನಾಂಕ, ಶಾಲಾ ದಾಖಲಾತಿ ಹೆಸರಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನೌಕರರ ವಿವರವನ್ನು ಪಂಚತಂತ್ರದಲ್ಲಿ ನೋಂದಣಿ ಮಾಡುತ್ತಿಲ್ಲ. ಅವರ ನಿರ್ಲಕ್ಷ್ಯದಿಂದ ತಾಲ್ಲೂಕಿನಲ್ಲಿ 36 ನೌಕರರು, ರಾಜ್ಯದಲ್ಲಿ 17ಸಾವಿರ ನೌಕರರು ವೇತನ ಸಿಗದೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಶೀಘ್ರ ಲೋಪದೋಷ ಸರಿಪಡಿಸಿ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪಂಚಾಯಿತಿ ನೌಕರರಿಗೆ ನಿವೃತ್ತಿ ವೇತನ, ಉಚಿತ ವೈದ್ಯಕೀಯ ಸೇವೆ, ನಗರಾಭಿವೃದ್ಧಿ ಇಲಾಖೆಯ ಸೇವಾ ನಿಯಮಾವಳಿಗಳನ್ನು ಗ್ರಾಮ ಪಂಚಾಯಿತಿ ನೌಕರರಿಗೆ ಅನ್ವಯವಾಗುವಂತೆ ಸೂಕ್ತ ಆದೇಶ ಹೊರಡಿಸಬೇಕು. ಜನಸಂಖ್ಯೆ ಆಧಾರದಲ್ಲಿ ಪಂಚಾಯಿತಿ ಮೇಲ್ದರ್ಜೆಗೇರಿಸಿ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಅಮರೇಶ ಪಾಟೀಲ, ತಾಲ್ಲೂಕು ಉಪಾಧ್ಯಕ್ಷ ಹನುಮಂತ ಬನ್ನಿಗೋಳ, ತಾಲ್ಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಶಿವರೆಡ್ಡಿ ಗೌಡೂರು. ಮುಖಂಡರಾದ ಮೌನೇಶ ಮಟ್ಟೂರು, ಬಸಯ್ಯ ಗೊರೆಬಾಳ, ಬಸವರಾಜ ಕಾಳಾಪುರ, ಶರಣಬಸವ ಗುಡದನಾಳ, ಯಮನೂರ, ಮೌಲಸಾಬ, ಗುರುನಾಥ, ವೆಂಕಟೇಶ, ಗದ್ದೆಪ್ಪ, ಭಾಸ್ಕರ್, ಅಮರಪ್ಪ ಭಾಗವಹಿಸಿದ್ದರು.
ಈಗಾಗಲೆ ಶೇ 90ರಷ್ಟು ನೌಕರರ ಮಾಹಿತಿಯನ್ನು ಪಂಚತಂತ್ರದಲ್ಲಿ ಸೇರ್ಪಡೆ ಮಾಡಲಾಗಿದೆ
- ಪುಷ್ಪಾ ಎಂ. ಕಮ್ಮಾರ,ಇಒ, ತಾ.ಪಂ. ಲಿಂಗಸುಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.