ಕವಿತಾಳ: ಪಟ್ಟಣದ 30 ಹಾಸಿಗೆ ಸಾಮರ್ಥ್ಯದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರು ಹಾಗೂ ಎಂಬಿಬಿಎಸ್ ವೈದ್ಯರ ಕೊರತೆ ಕಾಡುತ್ತಿದ್ದು, ರೋಗಿಗಳು ಚಿಕಿತ್ಸೆಗೆ ಪರದಾಡುವಂತಾಗಿದೆ.
ನಿತ್ಯ 250ರಿಂದ 300 ಮಂದಿ ಹೊರ ರೋಗಿಗಳ ವಿಭಾಗಕ್ಕೆ ಚಿಕಿತ್ಸೆಗೆ ಬರುತ್ತಾರೆ. ಸಂತೆ ದಿನವಾದ ಬುಧವಾರ ಈ ಸಂಖ್ಯೆ 400ರ ತನಕ ಏರುತ್ತದೆ. ಒಳ ರೋಗಿಗಳ ವಿಭಾಗದಲ್ಲೂ ಚಿಕಿತ್ಸೆಗಾಗಿ ನಿತ್ಯ ಹತ್ತಾರು ಮಂದಿ ಬರುತ್ತಾರೆ. ಇಂಥ ಆಸ್ಪತ್ರೆಯಲ್ಲಿ ಸದ್ಯ ಒಬ್ಬ ಆಯುರ್ವೇದ ವೈದ್ಯರು ಮತ್ತು ಸಾಂಕ್ರಾಮಿಕವಲ್ಲದ ರೋಗ ವಿಭಾಗದ(ಎನ್‌ಸಿಡಿ) ಒಬ್ಬ ವೈದ್ಯರೇ ಎಲ್ಲವನ್ನೂ ನಿಭಾಯಿಸುವಂತಾಗಿದೆ.
ಬಲ್ಲಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ ಪ್ರಭಾರ ಆಡಳಿತ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ‘ಆಡಳಿತ ನಿರ್ವಹಣೆಗೆ ಸೀಮಿತರಾದ ಅವರು ಆಸ್ಪತ್ರೆಗೆ ನಿತ್ಯ ಬರಲ್ಲ’ ಎನ್ನುವ ಆರೋಪಗಳಿವೆ. ಎಂಬಿಬಿಎಸ್ ಪದವಿ ಪೂರೈಸಿ ಗ್ರಾಮೀಣ ಸೇವೆಗೆ ಬಂದಿದ್ದ ಇಬ್ಬರು ವೈದ್ಯರಲ್ಲಿ ಒಬ್ಬರು ಉನ್ನತ ಶಿಕ್ಷಣಕ್ಕೆ ತಯಾರಿ ನಡೆಸುವ ನಿಟ್ಟಿನಲ್ಲಿ ಸೇವೆಗೆ ಬರುತ್ತಿಲ್ಲ. ಮತ್ತೊಬ್ಬ ವೈದ್ಯೆ ಮಧ್ಯಾಹ್ನದ ನಂತರ ಆಸ್ಪತ್ರೆಗೆ ಬರುವುದರಿಂದ ಹೆಚ್ಚಿನ ರೋಗಿಗಳಿಗೆ ಅವರ ಸೇವೆ ದೊರೆಯುತ್ತಿಲ್ಲ.
‘ಇಲ್ಲಿ ಸೇವೆ ಸಲ್ಲಿಸುತ್ತಿದ್ದ ಮಕ್ಕಳ ತಜ್ಞ ಡಾ.ಸುಶಾಂತ ಎರಡು ತಿಂಗಳಿಂದ ಸೇವೆಗೆ ಗೈರಾಗಿದ್ದಾರೆ. ಮಕ್ಕಳನ್ನು ಲಿಂಗಸುಗೂರು, ಸಿಂಧನೂರು ಮತ್ತು ರಾಯಚೂರು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ’ ಎಂಬುದು ಮಕ್ಕಳ ಪಾಲಕರ
ಆರೋಪ.
ತಡರಾತ್ರಿ ಹೆರಿಗೆ, ಅಪಘಾತ, ಮತ್ತಿತರ ತುರ್ತು ಸಂದರ್ಭ ಸೇರಿದಂತೆ ದಿನದ 24 ಗಂಟೆಯೂ ಒಬ್ಬರೇ ಆಯುರ್ವೇದ ವೈದ್ಯ ಎಲ್ಲವನ್ನೂ ನಿರ್ವಹಿಸುವಂತಾಗಿದೆ. ಮರಣೋತ್ತರ ಪರೀಕ್ಷೆಗೆ ದಿನಗಟ್ಟಲೇ ಕಾಯುವಂತಾಗಿದೆ.
ಎಂಬಿಬಿಎಸ್ ವೈದ್ಯರ ಕಡ್ಡಾಯ ಗ್ರಾಮೀಣ ಸೇವಾ ನಿಯಮವನ್ನು ಸರ್ಕಾರ ತೆಗೆದುಹಾಕಿದ್ದು ವೈದ್ಯರ ಕೊರತೆಯನ್ನು ಹೆಚ್ಚಿಸಿದೆ. ಸ್ವ ಇಚ್ಛೆಯಿಂದ ಬರುವ ವೈದ್ಯರು ಉನ್ನತ ಶಿಕ್ಷಣಕ್ಕೆ ತೆರಳಲು ಪರೀಕ್ಷಾ ತಯಾರಿ, ತರಬೇತಿ ಮತ್ತಿತರ ಕಾರಣಗಳಿಂದ ನಿರಂತರ ಸೇವೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದ ರೋಗಿಗಳು ಚಿಕಿತ್ಸೆಗೆ ಪರದಾಡುವಂತಾಗಿದೆ.
ವೈದ್ಯರ ಕೊರತೆಯಿಂದ ಬಡ ಮಧ್ಯಮ ವರ್ಗದ ಜನರು ತುರ್ತು ಸಂದರ್ಭದಲ್ಲಿ ಚಿಕಿತ್ಸೆಗೆ ಪರದಾಡುವಂತಾಗಿದೆ. ಎಂಬಿಬಿಎಸ್ ತಜ್ಞ ವೈದ್ಯರ ನೇಮಕಕ್ಕೆ ಸರ್ಕಾರ ಮುಂದಾಗಬೇಕು
-ಎಂ.ಡಿ.ಮೆಹಬೂಬ ಕಾರ್ಮಿಕ ಸಂಘಟನೆ ಮುಖಂಡ
ಮಕ್ಕಳ ತಜ್ಞ ವೈದ್ಯ ಉನ್ನತ ಶಿಕ್ಷಣಕ್ಕಾಗಿ ದೀರ್ಘ ರಜೆ ಮೇಲೆ ತೆರಳಿದ್ದಾರೆ. ಚುನಾವಣಾ ನೀತಿ ಸಂಹಿತೆ ಮುಗಿದ ನಂತರ ಎಂಬಿಬಿಎಸ್ ವೈದ್ಯರ ನೇಮಕಕ್ಕೆ ಕ್ರಮವಹಿಸಲಾಗುವುದು
-ಡಾ.ಶರಣಬಸವರಾಜ ಮಾನ್ವಿ ತಾಲ್ಲೂಕು ಆರೋಗ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.