ರಾಯಚೂರು: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನ ಖಂಡಿಸಿ ಆಮ್ ಆದ್ಮಿ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಅಬಕಾರಿ ನೀತಿ ಹಗರಣದ ಆರೋಪದ ಮೇರೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಂಧನ ಮಾಡಿರುವುದನ್ನು ಖಂಡನೀಯ. ಚುನಾವಣೆ ಸಂದರ್ಭದಲ್ಲಿ ಬಂಧನ ಮಾಡುವ ಮೂಲಕ ಬಿಜೆಪಿ ವಿರೋಧ ಪಕ್ಷಗಳ ನಾಯಕರನ್ನು ದಮನ ಮಾಡಲು ಪ್ರಯತ್ನಿಸುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮಧ್ಯಪ್ರವೇಶಿಸಿ ಅರವಿಂದ ಕೇಜ್ರಿವಾಲ್ ಅವರಿಗೆ ನ್ಯಾಯ ಒದಗಿಸಬೇಕು ಎಂದು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಅರವಿಂದ ಕೇಜಿವಾಲ್ ಅವರನ್ನು ಬಂಧಿಸಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ನಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತನಗೆ ಭವಿಷ್ಯದಲ್ಲಿ ಎದುರಾಳಿಯಾಗಬಹುದಾದ ರಾಜಕೀಯ ಪಕ್ಷಗಳ ನಾಯಕರನ್ನು ಕುತಂತ್ರದಿಂದ ಹತ್ತಿಕ್ಕುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಜಾರಿ ನಿರ್ದೇಶನಾಲಯ, ಸಿಬಿಐ, ತೆರಿಗೆ ಇಲಾಖೆ ಸೇರಿದಂತೆ ಎಲ್ಲ ಸ್ವತಂತ್ರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಚುನಾವಣಾ ಆಯೋಗಕ್ಕೂತಮ್ಮ ಕೈಗೊಂಬೆಯಂತೆ ನಡೆಸಿಕೊಳ್ಳುತ್ತಿದೆ ಎಂದು ದೂರಿದರು.
ಅಬಕಾರಿ ಹಗರಣ ನಡೆದಿದೆ ಎಂದು ಈಗಾಗಲೇ ಸತ್ಯೇಂದ್ರ ಜೈನ್, ಮನೀಷ್ ಸಿಸೋಡಿಯಾ ಹಾಗೂ ಸಂಜಯ್ ಸಿಂಗ್ ಅವರನ್ನು ಬಂಧಿಸಿದೆ. ಬಂಧನದ ಮೊದಲು ಬಿಜೆಪಿಗೆ ಸೇರುವಂತೆ ಒತ್ತಾಯಿಸಿ ಒಪ್ಪದಿದ್ದಾಗ ತನಿಖಾ ಸಂಸ್ಥೆಗಳ ಮೂಲಕ ಬಂಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ಮುಖಂಡರಾದ ಡಿ. ವೀರೇಶಕುಮಾರ, ಕೆ. ಬಸವರಾಜ ಗುತ್ತೇದಾರ, ಮಕ್ಬೂಲ್, ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.