ರಾಯಚೂರು: ಆಟೋ ಚಾಲಕ ಕೆ.ಸುರೇಶ ಕುಮಾರ್ ಅವರ ಪುತ್ರಿ ಗೀತಿಕಾ ಟಿ.ವಿ. ಅವರು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಪದವಿಯಲ್ಲಿ ಮಾಡಿದ ಸಾಧನೆಗಾಗಿ ಆರು ಚಿನ್ನದ ಪದಕಗಳ ಗೌರವಕ್ಕೆ ಬಾಜನರಾದರು.
ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಸೋಮವಾರ ನಡೆದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಚಿನ್ನದ ಪದಕಗಳು ಹಾಗೂ ಪ್ರಮಾಣಪತ್ರ ನೀಡಿದರು.
ಕೇರಳ ರಾಜ್ಯ ಮಲಪ್ಪುರಂ ಜಿಲ್ಲೆ ನಿಲಂಬೂರ್ ನಗರದ ಗೀತಿಕಾ ಅವರು 2019-20ನೇ ಸಾಲಿನಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬಿಎಸ್‌ಸಿ ಕೃಷಿ ಪದವಿ ಪೂರ್ಣಗೊಳಿಸಿದ್ದು, ಸದ್ಯ ಕೇರಳ ಕೃಷಿ ವಿಶ್ವವಿದ್ಯಾಲಯದಲ್ಲಿ 'ಪ್ಲಾಂಟ್ ಪೆಥೋಲಜಿ'ಯಲ್ಲಿ ಸ್ನಾತಕೋತ್ತರ ಓದುತ್ತಿದ್ದಾರೆ.
'ಶಾಲಾ ಹಂತದಲ್ಲಿ ಶಿಕ್ಷಕರು ನೀಡಿದ್ದ ಸಲಹೆಯಂತೆ ನಾನು ಕೃಷಿ ಪದವಿ ಓದಲು ಸೇರಿದೆ. ಚಿನ್ನದ ಪದಕಗಳು ಬಂದಿರುವುದಕ್ಕೆ ತುಂಬಾ ಖುಷಿಯಾಗಿದೆ. ಆರ್ಥಿಕವಾಗಿ ಕಷ್ಟ ಇದ್ದರೂ ತಂದೆ ಆಟೋ ಚಾಲಕರಾಗಿ, ತಾಯಿ ಗೃಹಿಣಿಯಾಗಿ ನನ್ನನ್ನು ತುಂಬಾ ಬೆಂಬಲಿಸುತ್ತಾ ಬಂದಿದ್ದಾರೆ. ಪ್ಲಾಂಟ್ ಪೆಥೋಲಜಿಯಲ್ಲಿ ಸ್ನಾತಕೋತ್ತರ ಮುಗಿಸಿ, ಪ್ರಾಧ್ಯಾಪಕಿ ಆಗುವ ಕನಸು ಹೊಂದಿದ್ದೇನೆ' ಎಂದರು.
‘ಕೃಷಿಯಲ್ಲಿ ಅವಕಾಶವಿಲ್ಲ ಎಂದು ತಿಳಿದುಕೊಳ್ಳಬಾರದು. ವಿದ್ಯಾರ್ಥಿಗಳು ಪಿಯು ಹಂತದಲ್ಲೇ ನಿರ್ಧರಿಸಿ ಕೃಷಿ ಶಿಕ್ಷಣ ಪಡೆಯಲು ಮುಂದೆ ಬರಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.