ದೇವದುರ್ಗ: ಬಾಲಕಿಯರ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ತಾಲ್ಲೂಕಿನ ಆಲ್ಕೋಡ ಗ್ರಾಮದಲ್ಲಿ 2004ರಲ್ಲಿ ಆರಂಭವಾದ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ(ಕೆಜಿಬಿವಿ) ವಸತಿ ಶಾಲೆ ಮೂಲಸೌಕರ್ಯ ಕೊರತೆ ಎದುರಿಸುತ್ತಿದೆ.
ಸಾಕ್ಷರತೆಯಲ್ಲಿ ಹಿಂದುಳಿದ ಪ್ರದೇಶಗಳನ್ನು ಗುರುತಿಸಿ ಪ್ರಾರಂಭಿಸಿರುವ ಈ ವಸತಿ ಶಾಲೆ ಮೂಲ ಸೌಕರ್ಯಗಳ ಕೊರತೆಯಿಂದ ತನ್ನ ಆಶಯಗಳನ್ನು ಈಡೇರಿಸಲು ಪರದಾಡುತ್ತಿದೆ.
ಆಲ್ಕೋಡ ಗ್ರಾಮದ ಈ ವಸತಿ ಶಾಲೆಯಲ್ಲಿ 100 ವಿದ್ಯಾರ್ಥಿಗಳ ದಾಖಲಾತಿ ಸಾಮರ್ಥ್ಯವನ್ನು ಹೊಂದಿದೆ. ಶಾಲೆ ಸ್ವಂತ ಕಟ್ಟಡವಿದ್ದರೂ ವಿದ್ಯಾರ್ಥಿನಿಯರಿಗೆ ಭದ್ರತೆ ಇಲ್ಲದಂತಾಗಿದೆ. ಶಾಲೆಯ ಕಟ್ಟಡಕ್ಕೆ ಕಾಂಪೌಂಡ್ ಇಲ್ಲ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಪ್ರತಿ ವರ್ಷ ಸರ್ಕಾರ ಕೆಜಿಬಿವಿ ವಸತಿ ಶಾಲೆಗಳ ನಿರ್ವಹಣೆಗೆ ವಾರ್ಷಿಕ ₹50 ಲಕ್ಷಕ್ಕೂ ಅಧಿಕ ಅನುದಾನ ನೀಡುತಿದೆ. ಆದರೆ ವಸತಿ ಶಾಲೆಯಲ್ಲಿ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿವೆ.
ಕಳೆದ 10 ವರ್ಷದ ಹಿಂದೆ ಆಲ್ಕೋಡ ಗ್ರಾಮದಲ್ಲಿನ ಕೆಜಿಬಿವಿ ವಸತಿ ಶಾಲೆಗೆ ಹೊಸ ಕಟ್ಟಡ ನಿರ್ಮಾಣವಾಗಿದೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿ ನಿರ್ಮಿಸಿಲ್ಲ. 6ರಿಂದ 8ನೇ ತರಗತಿ ತನಕ 100 ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಬೋಧನೆಗೆ ಇರುವುದು ಎರಡೇ ಕೋಣೆ.
ಇದೇ ಕೋಣೆಯಲ್ಲಿ ಊಟ, ನಿದ್ರೆ ಮಾಡಬೇಕಿದೆ. ಇಕ್ಕಟ್ಟಿನ ಜಾಗದಲ್ಲಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಇನ್ನು, ಶಾಲೆಯಲ್ಲಿನ ಶುದ್ಧ ಕುಡಿಯವ ನೀರಿನ ಯಂತ್ರ ಕೆಟ್ಟಿರುವ ಕಾರಣ, ಅಶುದ್ಧ ನೀರನ್ನೇ ಮಕ್ಕಳು ಕುಡಿಯುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.