ರಾಯಚೂರು: ಮಕ್ಕಳಲ್ಲಿ ವಿನೂತನ ಆಲೋಚನೆ ಮತ್ತು ಆಸಕ್ತಿ ಮೂಡಿಸುವ ಮುಖಾಂತರ ಮಕ್ಕಳನ್ನು ಶೈಕ್ಷಣಿಕವಾಗಿ ಆಕರ್ಷಿಸಲು ಈ ಮಕ್ಕಳ ವಿಜ್ಞಾನ ಹಬ್ಬ ಆಯೋಜಿಸಲಾಗಿದೆ ಎಂದು ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೋಕುಲ್ ಹುಸೇನ್ ಅಭಿಪ್ರಾಯಪಟ್ಟರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ವಿಜ್ಞಾನ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಲಭವನ ಸೊಸೈಟಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿಯ ಮಕ್ಕಳನ್ನು ಒಳಗೊಂಡ ಜನನದಿಂದ 18 ವರ್ಷಗಳ ಮಕ್ಕಳ ಸಮಗ್ರ ಬೆಳವಣಿಗೆಗೆ ಶ್ರಮಿಸುತ್ತಿವೆ ಎಂದರು.
ಈ ವಿಜ್ಞಾನ ಹಬ್ಬದಲ್ಲಿನ ಚಟುವಟಿಕೆಗಳನ್ನು ಕಲಿತುಕೊಂಡು, ವಿಜ್ಞಾನ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡರೆ ಮುಂದಿನ ಅಧ್ಯಯನಕ್ಕೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ವಿಜ್ಞಾನ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ ನೀವು ಸಹ ಮುಂದಿನ ದಿನಗಳಲ್ಲಿ ವಿಜ್ಞಾನಿ ಆಗುತ್ತಿರಿ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಶಾಲಾಪೂರ್ವ ಶಿಕ್ಷಣ ಯೋಜನೆಯ ಸಂಪನ್ಮೂಲ ವ್ಯಕ್ತಿ ಸಂಗಮೇಶ ಹಿರೇಮಠ ಮಾತನಾಡಿ, ಮಕ್ಕಳ ವಿಜ್ಞಾನ ಹಬ್ಬವು ಮಕ್ಕಳಲ್ಲಿ ಪ್ರಶ್ನೆ ಮೂಡಿಸುತ್ತದೆ. ಪ್ರಶ್ನೆ ಮಾಡುವಂತಹ ಮನೋಭಾವನೆಯನ್ನು ಬೆಳೆಸುತ್ತದೆ ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಅಭ್ಯಾಸದ ನಂತರ ಮಕ್ಕಳು ಪಿಯುಸಿ ವಿದ್ಯಾಭ್ಯಾಸದಲ್ಲಿ ವಿಜ್ಞಾನ ವಿಷಯಕ್ಕೆ ಹೆಚ್ಚಿನ ಪ್ರವೇಶ ಪಡೆದುಕೊಳ್ಳಲಿ ಮತ್ತು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಲು ಹಾಗೂ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸುವಲ್ಲಿ ಮಕ್ಕಳ ಪಾತ್ರ ಬಹಳ ಮುಖ್ಯವಾಗಿದ್ದು ಈ ನಿಟ್ಟಿನಲ್ಲಿ ವಿಜ್ಞಾನ ಹಬ್ಬವು ಮಕ್ಕಳ ಸರ್ವತೋಮುಖ ಬೆಳವಣಿಗೆಯ ಉದ್ದೇಶದೊಂದಿಗೆ ಇಲಾಖೆಯು ಬಿ.ಜಿ.ವಿ.ಎಸ್ ಸಹಯೋಗದಲ್ಲಿ ವಿಜ್ಞಾನ ಹಬ್ಬವನ್ನು ಆಯೋಜಿಸಿದೆ. ಮಕ್ಕಳು ಈ ಹಬ್ಬದ ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಈ ಎರಡು ದಿನದ ವಿಜ್ಞಾನ ಹಬ್ಬದಲ್ಲಿ ಆಟ, ಹಾಡುಗಳ ಮೂಲಕ 30 ವಿಜ್ಞಾನದ ಚಟುವಟಿಕೆಗಳು ಮಾಡುವುದರ ಮುಖಾಂತರ ವಿಜ್ಞಾನದ ಅಂಶಗಳನ್ನು ತಿಳಿಸಲಾಗುತ್ತದೆ.
ಮುಖ್ಯ ಶಿಕ್ಷಕ ರಾಘವೇಂದ್ರ, ಸಹ ಶಿಕ್ಷಕ ಇಸ್ಮಾಯಿಲ್, ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕ ನಾಗರಾಜ, ಶ್ರೀದೇವಿ, ಈಶ್ವರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.