ADVERTISEMENT

ರಾಯಚೂರು: ಪ್ರಯಾಣಿಕರಿಗೆ ಆಶ್ರಯ ನೀಡದ ತಂಗುದಾಣಗಳು

ಸ್ವಚ್ಛತೆ, ನಿರ್ವಹಣೆ ಕೊರತೆಯಿಂದ ಹಾಳಾದ ಬಸ್‌ ನಿಲ್ದಾಣ

ಬಾವಸಲಿ
Published 7 ಜುಲೈ 2024, 6:48 IST
Last Updated 7 ಜುಲೈ 2024, 6:48 IST
ರಾಯಚೂರಿನ ಆರ್‌ಟಿಒ ಕಚೇರಿಯ ಬಳಿಯ ತಂಗುದಾಣದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಕಾರ್ ನಿಲ್ಲಿಸಿರುವುದು
ರಾಯಚೂರಿನ ಆರ್‌ಟಿಒ ಕಚೇರಿಯ ಬಳಿಯ ತಂಗುದಾಣದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಕಾರ್ ನಿಲ್ಲಿಸಿರುವುದು   

ರಾಯಚೂರು: ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿದ ಬಸ್ ತಂಗುದಾಣ ನಗರದ ಹಲವೆಡೆ ದುಸ್ಥಿತಿ ತಲುಪಿವೆ.

ನಗರದ ಪ್ರಮುಖ ಪ್ರದೇಶಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಶಾಸಕರ, ಸಂಸದರ, ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನದಡಿ ಬಸ್ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಬಸ್ ತಂಗುದಾಣಗಳಲ್ಲಿ ಸ್ವಚ್ಛತೆಯೇ ಇಲ್ಲವಾಗಿದೆ. ಒಳಗಡೆ ಕುಳಿತುಕೊಳ್ಳಲು ಆಸನಗಳೂ ಇಲ್ಲ. ನಾಯಿ, ಹಂದಿಗಳು ಆಶ್ರಯ ಪಡೆದುಕೊಂಡಿವೆ.

ನಗರದ ಹೊರ ವಲಯದ ಆರ್‌ಟಿಒ ಕಚೇರಿ ಪಕ್ಕದ ಬಸ್ ತಂದುದಾಣದಲ್ಲಿ ಖಾಸಗಿ ವ್ಯಕ್ತಿಗಳು ಕಾರು ಹಾಗೂ ದ್ವಿಚಕ್ರವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಮಂತ್ರಾಲಯ ರಸ್ತೆಯ ಸ್ಲಂ ಬೋರ್ಡ್ ಕಚೇರಿ ಬಳಿಯ ಬಸ್ ತಂಗುದಾಣದಲ್ಲಿ ಕಸ ತುಂಬಿಕೊಂಡಿದೆ. ಕೆಲವರು ಇಲ್ಲಿಯೇ ಕಸ ಎಸೆದಿದ್ದಾರೆ. ಹೀಗಾಗಿ ಗಬ್ಬುವಾಸನೆ ಹೆಚ್ಚಾಗಿದ್ದು, ಅಲ್ಲಿ ನಿಲ್ಲದಂತಹ ಸ್ಥಿತಿ ಇದೆ.

ADVERTISEMENT

‘ಹೆಸರಿಗೆ ಮಾತ್ರ ತಂಗುದಾಣವಿದೆ. ಸ್ಥಳೀಯ ಸಂಸ್ಥೆಗಳಿಂದ ನಿರ್ವಹಣೆ ಮಾಡದ ಕಾರಣ ಅಸ್ವಚ್ಛತೆ ತಾಂಡವವಾಡುತ್ತಿದೆ. ಹಿಂಭಾಗ ಹಾಗೂ ಬಲಭಾಗದಲ್ಲಿ ತೆರೆದಿದ್ದರಿಂದ ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ಆಗುವುದಿಲ್ಲ. ಈ ಬಸ್ ತಂಗುದಾಣ ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ’ ಎಂದು ಸ್ಥಳಿಯ ನಿವಾಸಿ ಸುರೇಶ ಆಕ್ರೋಶ ವ್ಯಕ್ತಪಡಿಸಿದರು.

ರಕ್ಷಣೆಯಿಲ್ಲದ ತಂಗುದಾಣ:

ನಗರದ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಬಳಿ ಚರಂಡಿಯ ಮೇಲೆ ತಂಗುದಾಣ ನಿರ್ಮಿಸಲಾಗಿದೆ. ಚರಂಡಿಗೆ ಸ್ಲ್ಯಾಬ್ ಹಾಕಿಲ್ಲ. ಎರಡು ಕಡೆ ದೊಡ್ಡ ಕಬ್ಬಿಣದ ಕಂಬಗಳ ಮೇಲೆ ನಿಲ್ಲಿಸಿದ್ದು ಅವು ತುಕ್ಕು ಹಿಡಿದು ಅರ್ಧ ತುಂಡಾಗಿದೆ. ಯಾವ ಸಂದರ್ಭದಲ್ಲಿಯೂ ಬೀಳುವ ಸ್ಥಿತಿಯಲ್ಲಿದೆ.  

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ತಂಗುದಾಣದಲ್ಲಿ ನಿಲ್ಲದೇ ರಸ್ತೆ ಬದಿಯಲ್ಲಿ ಬಸ್‌ಗಾಗಿ ಕಾದು ನಿಲ್ಲುತ್ತಾರೆ. ರಸ್ತೆಯ ಎರಡು ಬದಿಗಳಲ್ಲಿ ವ್ಯಾಪಾರಸ್ಥರು ಪಾದಾಚಾರಿ ರಸ್ತೆಯನ್ನೇ ಅತಿಕ್ರಮಣ ಮಾಡಿದ್ದಾರೆ. ಪಾದಚಾರಿಗಳು ರಸ್ತೆ ಮೇಲೆ ನಡೆದುಕೊಂಡು ಹೋಗಬೇಕಾಗಿದೆ. ಈ ರಸ್ತೆಯಲ್ಲಿ ಟಿಪ್ಪರ್, ಕಾರು ಭಾರಿ ವಾಹನಗಳು ಸಂಚಾರ ಅಧಿಕ ಇರುವುದರಿಂದ ಅಪಾಯ ಕಾದಿದೆ.

ರಾಯಚೂರಿನ ಮಂತ್ರಾಲಯ ರಸ್ತೆಯ ಸ್ಲಂ ಬೋರ್ಡ್ ಕಚೇರಿ ಬಳಿಯ ಬಸ್ ತಂಗುದಾಣದಲ್ಲಿ ಕಸ ತುಂಬಿಕೊಂಡಿರುವ ಕಾರಣ ರಸ್ತೆಯಲ್ಲಿ ನಿಂತಿರುವ ಪ್ರಯಾಣಿಕರು

ತಂಗುದಾಣ ನೆಲಸಮ: ನಗರದಲ್ಲಿ ದೊಡ್ಡ ಸಂಖ್ಯೆಯಲ್ಲಿ ರಾಜಸ್ಥಾನಿ ವ್ಯಾಪಾರಸ್ಥರು ನೆಲೆಸಿದ್ದಾರೆ. ರಾಜಸ್ಥಾನಿ ಸಂಘದವರು ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ಎಸ್ ಪಿ ಕಚೇರಿ ಮುಂಭಾಗ, ಮಹತ್ಮಾಗಾಂಧಿ ವೃತ್ತ, ಚಂದ್ರಮೌಳೇಶ್ವರ ರಸ್ತೆಯ ಕುಂಬಾರ ಓಣಿ, ರಿಮ್ಸ್ ಆಸ್ಪತ್ರೆ ಸೇರಿ ಹಲವೆಡೆ ಸ್ವಂತ ಖರ್ಚಿನಲ್ಲಿ ತಂಗುದಾಣ ನಿರ್ಮಿಸಿದ್ದಾರೆ. ಗಾಂಧಿ ಚೌಕ್, ಕುಂಬಾರ ಓಣಿಯಲ್ಲಿನ ತಂಗುದಾಣ ನಿರ್ವಹಣೆಯ ಕೊರತೆಯಿಂದ ಹಾಳಾಗಿದೆ.. ಎಸ್‌ಪಿ ಕಚೇರಿಯ ಮುಂಭಾಗದ ತಂಗುದಾಣ ನಾಯಿ, ಹಂದಿಗಳ ಆಶ್ರಯ ತಾಣವಾಗಿದೆ.

ರಾಯಚೂರಿನ ಸ್ಟೇಷನ್ ರಸ್ತೆಯಲ್ಲಿರುವ ಬಸ್ ನಿಲ್ದಾಣದ ದುಸ್ಥಿತಿ

‘ಜನರ ಅನುಕೂಲಕ್ಕಾಗಿಯೇ ರಾಜಸ್ಥಾನಿ ಸಂಘದವರು ಬಸ್‌ ತಂಗುದಾಣ ನಿರ್ಮಿಸಿದ್ದರೂ ಅವುಗಳನ್ನು ಸ್ಥಳೀಯ ಆಡಳಿತ ಅದನ್ನು ಉಳಿಸಿಕೊಳ್ಳಲು ಆಸಕ್ತಿ ತೋರಿಸಿಲ್ಲ’ ಎಂದು ರಾಜಸ್ಥಾನಿ ವ್ಯಾಪಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಇದರ ಹೊರತಾಗಿ ರಾಯಚೂರು ನಗರಾಭಿವೃಧ್ಧಿ ಪ್ರಾಧಿಕಾರದಿಂದ ನೂತನವಾಗಿ ಬಸ್ ತಂಗುದಾಣ ನಿರ್ಮಿಸಿದೆ. ಆದರೆ ಪ್ರಯಾಣಿಕರು ಕೂರಲು ಹೆಚ್ಚು ಆಸನಗಳಿಲ್ಲ.

ರಾಯಚೂರಿನ ಚಂದ್ರಮೌಳೇಶ್ವರ ರಸ್ತೆಯ ಬಳಿ ರಾಜಸ್ಥಾನಿ ಸಂಘದಿಂದ ನಿರ್ಮಿಸಿದ ಬಸ್ ತಂಗುದಾಣ ಶಿಥಿಲಾವಸ್ಥೆಯಲ್ಲಿದೆ
ನಗರದಲ್ಲಿ ಅನೇಕ ತಂಗುದಾಣಗಳನ್ನು ನಿರ್ಮಿಸಿದರೂ ಅವುಗಳನ್ನು ನಗರಸಭೆಗೆ ಹಸ್ತಾಂತರಿಸಿಲ್ಲ. ತಂಗುದಾಣಗಳಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು
ಗುರುಸಿದ್ದಯ್ಯ ಹಿರೇಮಠ ರಾಯಚೂರು ನಗರಸಭೆ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.