ಕವಿತಾಳ: ನೂತನ ತಂತ್ರಜ್ಞಾನ ಕುರಿತು ಚಾಲಕರಿಗೆ ಸೂಕ್ತ ತರಬೇತಿ ನೀಡದಿರುವುದು ಮತ್ತು ನಿರ್ವಹಣೆ ಕೊರತೆಯಿಂದ ಹೊಸ ಮಾದರಿಯ ಭಾರತ್ ಸ್ಟೇಜ್ 6 (ಬಿಎಸ್ 6) ಎಂಜಿನ್ ಹೊಂದಿದ ಬಸ್‌ಗಳು ರಸ್ತೆಯಲ್ಲಿ ಪದೇ ಪದೇ ಕೆಟ್ಟು ನಿಲ್ಲುತ್ತಿವೆ. ಪ್ರಯಾಣಿಕರು ಮತ್ತು ಚಾಲಕ, ನಿರ್ವಾಹಕರಿಗೆ ತಲೆನೋವಾಗಿ ಪರಿಣಿಮಿಸಿದೆ.
ಆಧುನಿಕ ತಂತ್ರಜ್ಞಾನದ ಬಿಎಸ್ 6 ಎಂಜಿನ್‌ನಲ್ಲಿ ಸೆನ್ಸರ್ ಬಳಕೆ ಮಾಡಲಾಗಿದ್ದು ಅತಿಯಾದ ವೇಗ, ವೇಗ ನಿಯಂತ್ರಣ, ಗೇರ್ ಬದಲಾವಣೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಸೆನ್ಸರ್ ಲೈಟ್ ತೋರಿಸಿ ಎಂಜಿನ್ ತನ್ನಿಂತಾನೇ ಆಫ್ ಆಗುತ್ತದೆ. ಆಗ ಬಸ್‌ನ್ನು ರಸ್ತೆ ಬದಿಗೆ ತಳ್ಳುವುದು ಅನಿವಾರ್ಯ. ಮೆಕ್ಯಾನಿಕ್ ಬಂದು ಸರಿಪಡಿಸುವವರೆಗೂ ಕಾಯಲೇಬೇಕು.
ರಸ್ತೆಯಲ್ಲಿ ಬಸ್ ಕೆಟ್ಟು ನಿಲ್ಲುವುದರಿಂದ ಪ್ರಯಾಣಿಕರಿಗೆ ಬದಲಿ ಬಸ್ ವ್ಯವಸ್ಥೆ ಮಾಡಿ ಟಿಕೆಟ್ ಹೊಂದಾಣಿಕೆ ಮಾಡಬೇಕು.
ಜಿಲ್ಲೆಯ ವಿವಿಧ ಡಿಪೊಗಳಿಂದ ಬಿಎಸ್ 6 ಮಾದರಿಯ ಅಂದಾಜು 150ಕ್ಕೂ ಹೆಚ್ಚು ಬಸ್‌ಗಳು ನಿತ್ಯ ವಿವಿಧೆಡೆ ಸಂಚರಿಸುತ್ತವೆ. ಲ್ಯಾಪ್ ಟಾಪ್ ಬಳಸಿ ಕೆಲವೇ ನಿಮಿಷಗಳಲ್ಲಿ ಎಂಜಿನ್ ಸಮಸ್ಯೆ ಸರಿಪಡಿಸುವ ಅವಕಾಶ ಕಲ್ಪಿಸಲಾಗಿದೆ, ಆದರೆ ದುರಸ್ತಿಗೆ ಅಗತ್ಯವಿರುವ ತಂತ್ರಜ್ಞಾನ ಹೊಂದಿದ ಲ್ಯಾಪ್‌ಟಾಪ್ ಕೇವಲ ಮೂರು ಡಿಪೊಗಳಲ್ಲಿ ಲಭ್ಯವಿದ್ದು ಮೆಕ್ಯಾನಿಕ್ ಒಬ್ಬರು ಅಲ್ಲಿಂದ ಬಂದು ದುರಸ್ತಿ ಮಾಡಲು ವಿಳಂಬವಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಶಕ್ತಿಶಾಲಿ ಎಂಜಿನ್ ಹೊಂದಿದ ಈ ವಾಹನಗಳಲ್ಲಿ ಡಿಸೇಲ್ ಜತೆಗೆ ಆಡ್ ಬ್ಲೂ (ಕೂಲಂಟ್ ಮಾದರಿಯ ದ್ರವ) ವನ್ನು ಪ್ರತ್ಯೇಕವಾಗಿ ಬಳಸಲಾಗುತ್ತದೆ. ಉತ್ಪಾದಕ ಕಂಪನಿ ಶಿಫಾರಸ್ಸು ಮಾಡಿದ ದ್ರವದ ಬದಲಿಗೆ ಸಂಸ್ಥೆ ಪೂರೈಸುವ ಪರ್ಯಾಯ ದ್ರವ ಬಳಕೆಯಿಂದ ಹೀಗಾಗುತ್ತಿದೆ ಎನ್ನಲಾಗುತ್ತಿದೆ.
‘ಹೆದ್ದಾರಿಗಳಲ್ಲಿ ವೇಗವಾಗಿ ಸಾಗುವಾಗ ಅಥವಾ ಘಾಟ್ ಪ್ರದೇಶದಲ್ಲಿ ತಕ್ಷಣ ನಿಲುಗಡೆಯಾದರೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ, ಹಲವು ಬಾರಿ ಈ ರೀತಿ ಘಟನೆ ನಡೆದಿದೆ, ಡಿಸೇಲ್ ಉಳಿತಾಯ ಮಾಡಲು ಹೆದ್ದಾರಿಗಳಲ್ಲಿ ಗೇರ್ ಬಳಸದೆ ನ್ಯೂಟ್ರಲ್‌ನಲ್ಲಿ ಚಲಿಸುತ್ತೇವೆ ಆಗ ಎಂಜಿನ್ ಆಫ್ ಆದರೆ ಸಮಸ್ಯೆಯಾಗುತ್ತದೆ’ ಎಂದು ಹೆಸರ ಹೇಳಲು ಇಚ್ಚಿಸಿದ ಚಾಲಕರೊಬ್ಬರು ಹೇಳಿದರು.
ಕಂಪ್ಯೂಟರ್ ತಂತ್ರಜ್ಞಾನ ಅಳವಡಿಸಿಲಾಗಿದ್ದು ಚಾಲಕರು ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಹೊಸ ಮಾದರಿ ಬಸ್‌ಗಳನ್ನು ಹೊಂದಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿ.–ರಾಹುಲ್ ಹೊನಸೂರಿ, ಲಿಂಗಸುಗೂರು ಘಟಕ ವ್ಯವಸ್ಥಾಪಕ ಕೆಕೆಆರ್‌ಟಿಸಿ
‘ವಾಹನದ ಹಿಂಬದಿ ಹೆಲ್ಪರ್ ನೀಡಿದ್ದರಿಂದ ತಗ್ಗು ದಿನ್ನೆಗೆ ಇಳಿದರೆ (ಜಂಪ್ )ಎತ್ತಿ ಹಾಕುತ್ತದೆ ಎನ್ನುವ ದೂರುಗಳಿವೆ. ಅಧಿಕ ಭಾರದ ಸರಕು ಸಾಗಾಣಿಕೆ ಲಾರಿಗಳಿಗೆ ಹೆಲ್ಪರ್‌ನಿಂದ ಸಹಾಯವಾಗುತ್ತದೆ. ಬಸ್‌ಗಳಲ್ಲಿ ಅಧಿಕ ಭಾರ ಇರುವುದಿಲ್ಲ ಹೀಗಾಗಿ ಹೆಲ್ಪರ್‌ನಿಂದ ಹಿಂಬದಿ ಆಸನಗಳಲ್ಲಿ ಕುಳಿತ ಪ್ರಯಾಣಿಕ ದೂರುತ್ತಾರೆ’ ಎಂದು ನಿರ್ವಾಹಕರೊಬ್ಬರು ಹೇಳಿದರು.
‘ಬಿಎಸ್ 6 ಮಾದರಿ ಬಸ್‌ಗಳು ಶೂನ್ಯ ಹೊರಸೂಸುವಿಕೆ ವಾಹನಗಳಾಗಿವೆ. ಚಾಲಕರಿಗೆ, ಮೆಕ್ಯಾನಿಕ್‌ಗಳಿಗೆ ತರಬೇತಿ ನೀಡಲಾಗುತ್ತಿದೆ, ತಕ್ಷಣ ಸಮಸ್ಯೆ ಸರಿಪಡಿಸಲು ಅನುಕೂಲವಾಗುವಂತೆ ವಾಹನದ ಡ್ಯಾಶ್ ಬೋರ್ಡ್‌ನಲ್ಲಿ ಮಾಹಿತಿ ಫಲಕ ಹಾಕಲಾಗಿದೆ. ಮಲ್ಟಿ ಎಕ್ಸೆಲ್ ವಾಹನಗಳಿಗೆ ಬಳಸುವ ಆಡ್ ಬ್ಲೂ ಅನ್ನೇ ಬಳಸಲಾಗುತ್ತಿದೆ’ ಎಂದು ಲಿಂಗಸುಗೂರು ಘಟಕ ವ್ಯವಸ್ಥಾಪಕ ರಾಹುಲ್ ಹೊನಸೂರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.