ಮಸ್ಕಿ: ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ಅಡಿಯಲ್ಲಿ ಬರುವ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿಗೆ ವಿದ್ಯಾರ್ಥಿಗಳ ಬರ ಬಂದಿದೆ.
ಪ್ರತಿ ತರಗತಿಗೆ 40 ವಿದ್ಯಾರ್ಥಿಗಳ ಪ್ರವೇಶ ಇರಬೇಕಾದ ಈ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿ ವರ್ಷದಲ್ಲಿ ಪ್ರಥಮ ವರ್ಷ ಕಲಾ ವಿಭಾಗಕ್ಕೆ 12, ವಾಣಿಜ್ಯ ವಿಭಾಗಕ್ಕೆ 3 ಸೇರಿ ಒಟ್ಟು 15 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ದ್ವಿತೀಯ ವರ್ಷದ ಕಲಾ ವಿಭಾಗದಲ್ಲಿ 16 ಹಾಗೂ ವಾಣಿಜ್ಯ ವಿಭಾಗದಲ್ಲಿ 4 ವಿದ್ಯಾರ್ಥಿಗಳು ಓದುತ್ತಿದ್ದಾರೆ.
ಕಾಲೇಜಿನಲ್ಲಿ ವಿಜ್ಞಾನ ವಿಭಾಗಕ್ಕೆ ಉಪನ್ಯಾಸಕರ ನೇಮಕವಾಗದ ಕಾರಣ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
12 ಜನ ಉಪನ್ಯಾಸಕರ ಹುದ್ದೆ ಇರುವ ಈ ಕಾಲೇಜಿನಲ್ಲಿ ಐವರು ಉಪನ್ಯಾಸಕರು ಮಾತ್ರ ಇದ್ದಾರೆ. ಪ್ರಾಚಾರ್ಯ ಸೇರಿ 7 ಹುದ್ದೆಗಳು ಖಾಲಿ ಬಿದ್ದಿದ್ದು, ಈ ಹುದ್ದೆಗಳಿಗೆ ಇದುವರೆಗೂ ಭರ್ತಿ ಆಗದ ಕಾರಣ ಪಾಲಕರು ಈ ಕಾಲೇಜಿಗೆ ವಿದ್ಯಾರ್ಥಿಗಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.
ಕಾಲೇಜಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಪ್ರಭಾರ ಪ್ರಾಚಾರ್ಯ ಮಾನಪ್ಪ ಮತ್ತು ಇತರೆ ಉಳಿದ ಉಪನ್ಯಾಸಕರು ಮನೆ ಮನೆಗೆ ಹೋಗಿ ಪಾಲಕರ ಹಾಗೂ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜವಾಗಿಲ್ಲ. ಕರಪತ್ರ, ಪೋಸ್ಟರ್ ಅಂಟಿಸಿದರೂ ಸಹ ವಿದ್ಯಾರ್ಥಿಗಳು ಈ ಕಾಲೇಜು ಕಡೆ ಮುಖ ಮಾಡುತ್ತಿಲ್ಲ.
ಕಾಲೇಜಿನ ಮಹಿಳಾ ಮತ್ತು ಪುರುಷರ ಶೌಚಾಲಯಗಳು ಹಾಳಾಗಿದ್ದು, ದುರಸ್ತಿ ಆಗದ ಕಾರಣ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪರದಾಡಬೇಕಾಗಿದೆ.
‘ಪಟ್ಟಣದಿಂದ 1.5 ಕಿ.ಮೀ ದೂರವಿರುವ ಈ ಕಾಲೇಜು ರಾತ್ರಿ ವೇಳೆ ಅಕ್ರಮ ಚಟುವಟಿಕೆಗಳ ಕೇಂದ್ರವಾಗಿದೆ. ಕುಡುಕರ ಹಾವಳಿ, ರಾತ್ರಿ ವೇಳೆ ಇಲ್ಲಿ ಜೂಜು ನಡೆಯುತ್ತಿದ್ದರಿಂದ ಕಾಲೇಜಿನ ಪರಿಸರ ಹಾಳಾಗಿದೆ. ಶಿಕ್ಷಣ ಇಲಾಖೆ, ತಾಲ್ಲೂಕು ಆಡಳಿತ ಈ ಕಡೆ ಗಮನ ಹರಿಸಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕ ಪಬ್ಲಿಕ್ ಶಾಲೆ ಅಡಿಯಲ್ಲಿ ಈ ಕಾಲೇಜಿಗೆ ಪ್ರತಿ ವರ್ಷ ₹ 5 ರಿಂದ 6 ಲಕ್ಷ ವಿಶೇಷವಾಗಿ ಹಣ ಹರಿದು ಬರುತ್ತದೆ. ಆದರೆ, ಈ ಹಣ ಬಳಕೆ ಮಾಡಿಕೊಂಡು ಕಾಲೇಜು ಕಟ್ಟಡಕ್ಕೆ ಸುಣ್ಣ ಬಣ್ಣ, ಶೌಚಾಲಯಗಳ ದುರಸ್ತಿಗೆ ಅನುದಾನ ಬಳಕೆ ಮಾಡುತ್ತಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.
ಕಾಲೇಜಿಗೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು ಮನೆ ಮನೆಗೆ ತೆರಳಿ ಪಾಲಕರ ಮನವೊಲಿಸುವ ಕೆಲಸ ಕಾಲೇಜು ಸಿಬ್ಬಂದಿ ಮಾಡುತ್ತಿದ್ದಾರೆ. ಆದರೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿಲ್ಲ. ಪಟ್ಟಣದಿಂದ 1.5 ಕಿಮೀ ದೂರದಲ್ಲಿ ಕಾಲೇಜು ಇರುವುದು ಸಹ ಹಾಜರಾತಿ ಕುಂಠಿತಕ್ಕೆ ಕಾರಣ.ಮಾನಪ್ಪ ಪ್ರಭಾರ ಪ್ರಾಂಶುಪಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.