ADVERTISEMENT

ಮುದಗಲ್ | ವಿಜ್ಞಾನ ವಿಭಾಗಕ್ಕೆ ವಿದ್ಯಾರ್ಥಿಗಳ ‘ಬರ’

ಡಾ.ಶರಣಪ್ಪ ಆನೆಹೊಸೂರು
Published 18 ಜೂನ್ 2024, 6:36 IST
Last Updated 18 ಜೂನ್ 2024, 6:36 IST
ಮುದಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಹೊರ ನೋಟ
ಮುದಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜು ಹೊರ ನೋಟ   

ಮುದಗಲ್: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಬೇಡಿಕೆ ತಗ್ಗಿದೆ.

ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿವೆ. ಪ್ರಸಕ್ತ ವರ್ಷ ವಿಜ್ಞಾನ ವಿಭಾಗದ ಪ್ರಥಮ ವರ್ಷಕ್ಕೆ ಇಲ್ಲಿಯವರಿಗೂ 6 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 6 ವಿದ್ಯಾರ್ಥಿಗಳಿಗೆ 6 ಜನ ಉಪನ್ಯಾಸಕರಿದ್ದಾರೆ. ಕಲಾ ವಿಭಾಗದಲ್ಲಿಯೇ ಗರಿಷ್ಠ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿದ್ದಾರೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫಲಿತಾಂಶ ಭಾರಿ ಕುಸಿತ ಕಂಡ ಹಿನ್ನೆಲೆಯಲ್ಲಿ ವಿಜ್ಞಾನ ವಿಭಾಗಕ್ಕೆ ಬೇಡಿಕೆ ತಗ್ಗಿದೆ. ಮುದಗಲ್ ಹೋಬಳಿಯ 12 ಸರ್ಕಾರಿ ಪ್ರೌಢ ಶಾಲೆಯಲ್ಲಿ 1,122 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 570 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 549 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ADVERTISEMENT

ಅರ್ಧದಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರಿಂದ ಇಲ್ಲಿನ ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ. ವಿಜ್ಞಾನ ತರಗತಿಗೆ ವಿದ್ಯಾರ್ಥಿಗಳನ್ನು ಕರೆತರಲು ಉಪನ್ಯಾಸಕರು ಹೆಣಗಾಡುತ್ತಿದ್ದಾರೆ. ವಿಜ್ಞಾನ ವಿಭಾಗಕ್ಕೆ ಪ್ರವೇಶ ಪಡೆಯಲು ಇಚ್ಛಿಸುವ ಇಲ್ಲಿನ ವಿದ್ಯಾರ್ಥಿಗಳು ಲಿಂಗಸುಗೂರು, ಇಳಕಲ್, ಬಾಗಲಕೋಟೆ, ಧಾರವಾಡ, ದಾವಣಗೆರೆಯಂಥ ನಗರಗಳಿಗೆ ಹೋಗುತ್ತಿದ್ದಾರೆ.

ಕಾಲೇಜಿನಲ್ಲಿ ಮೂರು ವಿಭಾಗಗಳು ಸೇರಿ ಪ್ರತಿ ವರ್ಷ ಸರಾಸರಿ ಪ್ರಥಮ ಪಿಯುಗೆ 130ರಿಂದ 150 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿದಿರುವ ಕಾರಣದಿಂದ ಹೇಳಿಕೊಳ್ಳುವಂತಹ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಇದುವರೆಗೆ ಪ್ರವೇಶ ಪಡೆದಿಲ್ಲ. ಈವರೆಗೆ 62 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಪ್ರವೇಶ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು ಎಂಬ ವಿಶ್ವಾಸ ವ್ಯಕ್ತಪಡೆಸುತ್ತಾರೆ ಕಾಲೇಜಿನ ಪ್ರಾಚಾರ್ಯರು.

ಕಾಲೇಜಿನಲ್ಲಿ 7 ಜನ ಉಪನ್ಯಾಸಕರಿದ್ದಾರೆ. ಕನ್ನಡ, ರಾಜ್ಯಶಾಸ್ತ್ರ, ಜೀವಶಾಸ್ತ್ರ, ಇತಿಹಾಸ ವಿಷಯಕ್ಕೆ ಕಾಯಂ ಉಪನ್ಯಾಸಕರ ಕೊರತೆ ಇದೆ. ಈ ವಿಷಯಗಳಿಗೆ ಅಥಿತಿ ಉಪನ್ಯಾಸಕರೇ ಆಧಾರ. ಶಾಶ್ವತ ಉಪನ್ಯಾಸಕರ ನೇಮಕವಾಗದ ಕಾರಣ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳು ವಿದ್ಯಾರ್ಥಿಗಳ ಪಾಲಕರಿಂದ ಕೇಳಿ ಬರುತ್ತಿವೆ.

ಕುಡಿಯುವ ನೀರಿನ ಟ್ಯಾಂಕ್ ಹೆಸರಿಗೆ ಮಾತ್ರ: ಕಾಲೇಜು ಆವರಣದಲ್ಲಿ ಕಿರು ನೀರಿನ ಟ್ಯಾಂಕ್ ಇದೆ. ಆದರೆ ನೀರು ಸರಬರಾಜು ಆಗುತ್ತಿಲ್ಲ. ಕಾಲೇಜಿನಲ್ಲಿ ನೀರು ಶುದ್ಧೀಕರಣ ಘಟಕದ ಸಾಮಗ್ರಿಗಳು ಇವೆ. ಅವುಗಳು ಕಾರ್ಯನಿರ್ವಹಿಸುತ್ತಿಲ್ಲ. ಅವು ನಿರುಪಯುಕ್ತವಾಗಿದೆ. ಕಾಲೇಜಿನಲ್ಲಿ ಸಿ.ಸಿ ಟಿವಿ ಕ್ಯಾಮೆರಾ ಇದ್ದರೂ, ಇಲ್ಲದಂತೆ ಇವೆ. ಇವು ಪ್ರಾಚಾರ್ಯರ ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪಟ್ಟಣದ ನಿವಾಸಿ ಸುರೇಶ ಆರೋಪಿಸಿದರು. ಕಾಲೇಜಿನ ಕಾಂಪೌಂಡ್‌ಗೆ ಹೊಂದಿಕೊಂಡಂತೆ ಹೊರ ಭಾಗದಲ್ಲಿ ಮುಳ್ಳು ಕಂಟಿ ಬೆಳೆದಿದೆ.

ಕಾಲೇಜು ಆವರಣದಲ್ಲಿರುವ ಕಿರು ನೀರಿನ ಟ್ಯಾಂಕ್ ನಿರುಪಯುಕ್ತವಾಗಿದೆ
ಮುದಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿದ್ದ ನೀರು ಶುದ್ಧೀಕರಣ ಘಟಕ ನಿರುಪಯುಕ್ತವಾಗಿದೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ರ ಫಲಿತಾಂಶ ಬಂದ ನಂತರ ಮತ್ತಷ್ಟು ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯಬಹುದು.

-ಸರೋಜಿನಿದೇವಿ ಪ್ರಭಾರಿ ಪ್ರಾಚಾರ್ಯರು ಸರ್ಕಾರಿ ಪಿಯು ಕಾಲೇಜು ಮುದಗಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.