ADVERTISEMENT

ಸಿಂಧನೂರು | ಕೆರೆಗಳಲ್ಲಿ ನೀರಿನ ಕೊರತೆ: ಜನರಲ್ಲಿ ಆತಂಕ

ಡಿ.ಎಚ್.ಕಂಬಳಿ
Published 16 ಮೇ 2024, 6:14 IST
Last Updated 16 ಮೇ 2024, 6:14 IST
ಸಿಂಧನೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ತುರ್ವಿಹಾಳ ಬಳಿಯಿರುವ ದೊಡ್ಡ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಜೆಸಿಬಿ ಮೂಲಕ ಹರಿ ಮಾಡಿ ನೀರನ್ನು ಒಂದೆಡೆ ಸಂಗ್ರಹ ಮಾಡುತ್ತಿರುವುದು
ಸಿಂಧನೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ತುರ್ವಿಹಾಳ ಬಳಿಯಿರುವ ದೊಡ್ಡ ಕೆರೆಯಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ಜೆಸಿಬಿ ಮೂಲಕ ಹರಿ ಮಾಡಿ ನೀರನ್ನು ಒಂದೆಡೆ ಸಂಗ್ರಹ ಮಾಡುತ್ತಿರುವುದು   

ಸಿಂಧನೂರು: ನಗರದ ಕುಡಿಯುವ ನೀರಿನ ಏಕೈಕ ಜಲಮೂಲವಾಗಿರುವ ತುರ್ವಿಹಾಳ ಬಳಿಯ ಕೆರೆ ಹಾಗೂ ನಗರದ ಕುಷ್ಟಗಿ ರಸ್ತೆಯಲ್ಲಿರುವ ಕೆರೆಯಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಕುಸಿದಿದ್ದು, ಇದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ತಾಲ್ಲೂಕಿನ ತುರ್ವಿಹಾಳ ಹತ್ತಿರದ ಮುಖ್ಯಕಾಲುವೆ ಬಳಿಯಿರುವ 159 ಎಕರೆ ಪ್ರದೇಶದಲ್ಲಿರುವ ದೊಡ್ಡ ಕೆರೆಯಿಂದ ಸಿಂಧನೂರಿನ ಕೆರೆಗೆ ನೀರು ತುಂಬಿಸಿ, ಅಲ್ಲಿಂದ ನಗರದ 31 ವಾರ್ಡ್‍ಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಆದರೆ ತುರ್ವಿಹಾಳ ಬಳಿಯಿರುವ ಕೆರೆಯಲ್ಲಿಯೇ ನೀರು ಅತ್ಯಂತ ಕಡಿಮೆಯಾಗಿದ್ದು, ಕಾಲುವೆಗೆ ನೀರು ಹರಿಸುವ ತನಕ ಇದೇ ನೀರಿನಲ್ಲಿಯೇ ಸಿಂಧನೂರು ಜನತೆಗೆ ಕುಡಿಯುವ ನೀರಿನ ಸೌಕರ್ಯ ಒದಗಿಸಬೇಕಾಗಿದೆ.

ತುರ್ವಿಹಾಳ ಕೆರೆ ಸಂಪೂರ್ಣ ಖಾಲಿಯಾಗುವ ಹಂತಕ್ಕೆ ಬಂದಿದ್ದು, ಅಲ್ಲಲ್ಲಿ ತೆಗ್ಗು ಪ್ರದೇಶದಲ್ಲಿ ಮಾತ್ರ ನೀರು ಕಾಣಿಸುತ್ತಿದೆ. ಹೀಗಾಗಿ ನಗರಸಭೆಯಿಂದ ಜೆಸಿಬಿ ಮೂಲಕ ಎಲ್ಲ ತೆಗ್ಗು ಪ್ರದೇಶಗಳ ನೀರನ್ನು ಹರಿ ಮಾಡಿ ಒಂದೆಡೆ ಸಂಗ್ರಹಿಸುವ ಕಾರ್ಯ ಭರದಿಂದ ನಡೆದಿದೆ. ನಿರೀಕ್ಷೆಗೂ ಮೀರಿ ಕೆರೆಯ ನೀರಿನ ಪ್ರಮಾಣ ಇಳಿದಿರುವುದರಿಂದ ಜನರಿಗೆ ನೀರನ್ನು ಯಾವ ರೀತಿ ಪೂರೈಕೆ ಮಾಡಬೇಕು ಎಂದು ನಗರಸಭೆ ಪೌರಾಯುಕ್ತರು ಸೇರಿದಂತೆ ಸದಸ್ಯರು ದಿಗಿಲುಗೊಂಡಿದ್ದಾರೆ. ಅಲ್ಲದೆ ತುರ್ವಿಹಾಳ ಮತ್ತು ಸಿಂಧನೂರು ಕೆರೆಯನ್ನು ವೀಕ್ಷಿಸಿದ ಸಾರ್ವಜನಿಕರು ಸಹ ತೀವ್ರ ಆತಂಕಗೊಂಡಿದ್ದಾರೆ.

ADVERTISEMENT

ತುರ್ವಿಹಾಳ ಮತ್ತು ಸಿಂಧನೂರಿನ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಕುರಿತು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಅವರನ್ನು ಸಂಪರ್ಕಿಸಿದಾಗ,‘ಜೂನ್ ಮೊದಲ ವಾರದವರೆಗೆ ಸಿಂಧನೂರು ನಗರದ ಜನರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯ ಇಲ್ಲ. ತುರ್ವಿಹಾಳ ಕೆರೆ ಬಹುದೊಡ್ಡದಾಗಿರುವುದರಿಂದ ನೀರಿನ ಪ್ರಮಾಣ ಕಡಿಮೆ ಕಾಣುತ್ತಿದೆ. ವಾಸ್ತವವಾಗಿ ಅಲ್ಲಲ್ಲಿ ತೆಗ್ಗು ಪ್ರದೇಶದಲ್ಲಿ ನಿಂತ ನೀರನ್ನು ಒಂದೆಡೆ ಸಂಗ್ರಹಿಸಿದರೆ ನೀರಿನ ಲಭ್ಯತೆ ಅಧಿಕವಾಗಲಿದೆ’ ಎಂದು ಪ್ರತಿಕ್ರಿಯಿಸಿದರು.

ನಗರಸಭೆ ಸದಸ್ಯರ ತುರ್ತುಸಭೆ: ನಗರದ ಕುಷ್ಟಗಿ ರಸ್ತೆಯಲ್ಲಿರುವ ದೊಡ್ಡ ಕೆರೆ, ಸಣ್ಣ ಕೆರೆ ಹಾಗೂ ತುರ್ವಿಹಾಳ ಬಳಿಯಿರುವ ದೊಡ್ಡ ಕೆರೆಯಲ್ಲಿ ನೀರಿನ ಕೊರತೆ ಇರುವುದನ್ನು ಗಮನಿಸಿರುವ ಪೌರಾಯುಕ್ತ ಮಂಜುನಾಥ ಗುಂಡೂರು ಅವರು ನಗರಸಭೆ ಕಚೇರಿಯಲ್ಲಿ ಬುಧವಾರ ನಗರಸಭೆಯ ಸರ್ವ ಸದಸ್ಯರ ತುರ್ತು ಸಭೆ ಕರೆದು ಈಗ ವಾರ್ಡ್‍ಗಳಿಗೆ 8 ದಿನಕ್ಕೊಮ್ಮೆ ಪೂರೈಕೆ ಮಾಡಲಾಗುತ್ತಿದ್ದು, ಅದನ್ನು ಮತ್ತೆರಡು ದಿನ ಹೆಚ್ಚಿಸಿ 10 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ನಗರಸಭೆ ಸದಸ್ಯರೊಬ್ಬರು ತಿಳಿಸಿದರು.

ಜೂನ್ ಮೊದಲ ವಾರದವರೆಗೆ ಕುಡಿಯುವ ನೀರು ಪೂರೈಕೆಗೆ ತೊಂದರೆ ಇಲ್ಲವೆಂದು ನಗರಸಭೆ ಪೌರಾಯುಕ್ತರು ಹೇಳುತ್ತಾರೆ. ಜೂನ್ ಮೊದಲ ವಾರದ ನಂತರವೂ ನೀರಿನ ಸಮಸ್ಯೆ ಉದ್ಬವಿಸಲಿದೆ. ಕೊರತೆ ನೀಗಿಸಲು ಒಡೆದ ಪೈಪ್‍ಲೈನ್‍ ದುರಸ್ತಿ ಮಾಡಿ ನೀರು ಪೋಲಾಗದಂತೆ ಗಮನ ಹರಿಸಬೇಕು
ವೀರಭದ್ರಪ್ಪ ಕುರಕುಂದಿ ಪ್ರಧಾನ ಸಂಚಾಲಕ ನಗರಾಭಿವೃದ್ಧಿ ಹೋರಾಟ ಸಮಿತಿ
‘ಪೂರೈಕೆಯಲ್ಲಿ ವ್ಯತ್ಯಯವಾಗದು’
340.5 ಎಂಎಲ್‍ಡಿ ಸಾಮರ್ಥ್ಯವಿರುವ ಸಿಂಧನೂರು ನಗರದ ದೊಡ್ಡ ಕೆರೆಯಲ್ಲಿ 75 ಎಂಎಲ್‍ಡಿ 77.18 ಎಂಎಲ್‍ಡಿ ಸಾಮರ್ಥ್ಯವಿರುವ ಸಣ್ಣ ಕೆರೆಯಲ್ಲಿ 15 ಎಂಎಲ್‍ಡಿ ಹಾಗೂ 2551.48 ಎಂಎಲ್‍ಡಿ ಸಾಮರ್ಥ್ಯವಿರುವ ತುರ್ವಿಹಾಳ ಬಳಿಯ ಕೆರೆಯಲ್ಲಿ 590 ಎಂಎಲ್‍ಡಿ ನೀರು ಸಂಗ್ರಹವಿದೆ. ಒಟ್ಟು 680 ಎಂಎಲ್‍ಡಿ ನೀರು ಸಂಗ್ರಹವಿದ್ದು ಇದರಲ್ಲಿ ಶೇ 20ರಷ್ಟು ಅಂದರೆ 136 ಎಂಎಲ್‍ಡಿ ನೀರು ಆವಿಯಾಗಲಿದ್ದು 544 ಎಂಎಲ್‍ಡಿ ನೀರು ಲಭ್ಯವಾಗಲಿದೆ. ಹೀಗಾಗಿ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.