ADVERTISEMENT

ಲಿಂಗಸುಗೂರು: ಕೆರೆ ಆಧುನೀಕರಣ ಕಾಮಗಾರಿ ನನೆಗುದಿಗೆ

ಹುನಕುಂಟಿ ಬಹುಗ್ರಾಮ ಶುದ್ಧ ಕುಡಿಯುವ ನೀರು ಯೋಜನೆಯ ಕೆರೆ ನಿಷ್ಪ್ರಯೋಜಕ

ಪ್ರಜಾವಾಣಿ ವಿಶೇಷ
Published 5 ಜುಲೈ 2024, 6:10 IST
Last Updated 5 ಜುಲೈ 2024, 6:10 IST
ಲಿಂಗಸುಗೂರು ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಹುನಕುಂಟಿ ಕೆರೆ ಭರ್ತಿಯಾಗಿದ್ದರೂ ನಿಷ್ಪ್ರಯೋಜಕವಾಗಿದೆ
ಲಿಂಗಸುಗೂರು ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಹುನಕುಂಟಿ ಕೆರೆ ಭರ್ತಿಯಾಗಿದ್ದರೂ ನಿಷ್ಪ್ರಯೋಜಕವಾಗಿದೆ   

ಲಿಂಗಸುಗೂರು: ಜಲ ಜೀವನ್‍ ಮಿಷನ್‍ ಯೋಜನೆಯಡಿ ಕೆರೆ ಆಧುನೀಕರಣ ಸೇರಿ ಬಹುಗ್ರಾಮ ಯೋಜನೆ ವ್ಯಾಪ್ತಿ ಗ್ರಾಮಗಳಲ್ಲಿ ಪೈಪ್‌ಲೈನ್‍ ಮೂಲಕ ಮನೆ ಮನೆಗೆ ನಳ ಜೋಡಣೆ ಮಾಡಿ ನೀರು ಪೂರೈಸುವ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಯೋಜನೆಯಡಿ ಬಹು ಗ್ರಾಮ ಕುಡಿಯುವ ನೀರು ಯೋಜನೆಗೆ ₹ 3.25 ಕೋಟಿ ಅನುದಾನ ನೀಡಲಾಗಿತ್ತು. 2012-13ರಲ್ಲಿ ಹುನಕುಂಟಿ ಬಳಿಯ ನಾಲಾದಲ್ಲಿ ಕೆರೆ ನಿರ್ಮಿಸಿ, ಜಲಶುದ್ಧೀಕರಣ ಘಟಕ ಸ್ಥಾಪಿಸಿ ಹುನಕುಂಟಿ, ಕಳ್ಳಿಲಿಂಗಸುಗೂರು, ಭೂಪುರ ಗ್ರಾಮಗಳಿಗೆ ಶಾಶ್ವತ ಮತ್ತು ಸಮರ್ಪಕ ಕುಡಿಯುವ ನೀರು ಪೂರೈಸಲು ಟೆಂಡರ್‌ ನೀಡಲಾಗಿತ್ತು.

2015-16ರಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಹುನಕುಂಟಿ, ಭೂಪುರ, ಕಳ್ಳಿಲಿಂಗಸುಗೂರು ಗ್ರಾಮಸ್ಥರಿಂದ ಸಾಮೂಹಿಕ ತಿರಸ್ಕಾರಕ್ಕೆ ಒಳಪಟ್ಟಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನಿಷ್ಪ್ರಯೋಜಕವಾಗಿದೆ. ನೀರು ಪೂರೈಕೆ ಸ್ಥಗಿತಗೊಂಡಿದ್ದು, ಕೆರೆಯ ನೀರು ಕಲುಷಿತಗೊಂಡಿದೆ. ನೀರು ಮಲೀನಗೊಂಡು ರೋಗ ಹರಡುವ ಕೇಂದ್ರ ಸ್ಥಳವಾಗಿ ಮಾರ್ಪಟ್ಟಿದೆ.

ADVERTISEMENT

ನಾಲಾವೊಂದರಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ, ಶುದ್ಧೀಕರಿಸದೆ ನೀರು ಪೂರೈಕೆ ಮಾಡುವುದರಿಂದ ಚರ್ಮರೋಗ ಸೇರಿದಂತೆ ಇತರೆ ರೋಗಗಳು ಬರುತ್ತಿವೆ ಎಂಬುದು ಗ್ರಾಮಸ್ಥರ ಸಾಮೂಹಿಕ ಆರೋಪ. ಈ ಕುರಿತು ಶಾಸಕರು, ಸಂಸದರು, ಸಚಿವರಿಗೆ ದೂರು ನೀಡಿದ್ದು ಆಧುನೀಕರಣ ಕಾಮಗಾರಿಗೆ ₹ 2 ಕೋಟಿ ಅನುದಾನ ನೀಡಿದ್ದರೂ ಗುತ್ತಿಗೆದಾರರು ಕಾಮಗಾರಿ ಕೈಗೆತ್ತಿಕೊಳ್ಳುತ್ತಿಲ್ಲ.

‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರಾತಿ ಆಗಿದ್ದರಿಂದ ಹರ್ಷಗೊಂಡಿದ್ದ ಜನರಲ್ಲಿ ಅಸಮಾಧಾನವನ್ನು ಉಂಟು ಮಾಡಿದೆ. ದಶಕ ಕಳೆದರೂ ಆಡಳಿತ ವ್ಯವಸ್ಥೆ ಸ್ಪಂದನೆ ನೀಡದೆ ಹೋಗಿದ್ದರಿಂದ ಕೊಳವೆ ಮತ್ತು ತೆರೆದಬಾವಿಯ ಆರ್ಸೆನಿಕ್‍ ಮಿಶ್ರಿತ ನೀರು ಬಳಕೆ ಮಾಡುತ್ತಿದ್ದೇವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶರಣಗೌಡ ಮಾಲಿ ಪಾಟೀಲ ಆರೋಪಿಸಿದ್ದಾರೆ.

‘ಜಲ ಜೀವನ್‍ ಮಿಷನ್‍ ಯೋಜನೆಯಡಿ ಕೆರೆ ಶುದ್ಧೀಕರಿಸಿ, ಕಲುಷಿತ ನೀರು ಸಂಗ್ರಹಗೊಳ್ಳದಂತೆ ಆಧುನೀಕರಣಗೊಳಿಸಬೇಕು. ಆದರೆ, ಗುತ್ತಿಗೆದಾರ ಕೆರೆ ಆಧುನೀಕರಣಗೊಳಿಸದೆ ಇತರೆ ಕಾಮಗಾರಿ ಬೇಡ ಎಂದು ವಿರೋಧಿಸಿದ್ದೇವೆ. ಈ ಮಧ‍್ಯೆ ಪೈಪ್‌ಲೈನ್‍ ಹೆಸರಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದು, ತನಿಖೆ ನಡೆಸಬೇಕು’ ಎಂದು ಗ್ರಾಮಸ್ಥ ಸಂಜೀವಪ್ಪ ಚಲವಾದಿ ಹೇಳಿಕೊಂಡಿದ್ದಾರೆ.

‘ಹುನಕುಂಟಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಕೆರೆ ಆಧುನೀಕರಣಕ್ಕೆ ಚಿಂತನೆ ನಡೆದಿದೆ. ಹೆಚ್ಚಿನ ಪ್ರಮಾಣದ ನೀರು ಸಂಗ್ರಹ ಆಗಿದ್ದರಿಂದ ಸಂಪೂರ್ಣ ಖಾಲಿ ಮಾಡಿ ದುರಸ್ತಿಗೊಳಿಸುವುದು ಸವಾಲಾಗಿದೆ. ಜಲ ಜೀವನ್‍ ಮಿಷನ್‍ ಯೋಜನೆ ಕಾಮಗಾರಿ ಅನುಷ್ಠಾನಕ್ಕೆ ವಿರೋಧ ವ್ಯಕ್ತವಾಗಿದೆ’ ಎಂದು ಜಿಲ್ಲಾ ಪಂಚಾಯತ್‍ ಎಂಜಿನಿಯರಿಂಗ್‍ ವಿಭಾಗದ ಮೂಲಗಳು ದೃಢಪಡಿಸಿವೆ.

 ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿರುವೆ. ಕಾಮಗಾರಿ ಕೈಗೆತ್ತಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಕುಡಿಯುವ ನೀರಿನ ಕೆರೆ ವೈಜ್ಞಾನಿಕವಾಗಿ ನವೀಕರಿಸಿ ಜನರಿಗೆ ಅನುಕೂಲ ಮಾಡಿಕೊಡಲು ಸೂಚನೆ ನೀಡಿರುವೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಅಮರೇಶ ‘ಪ್ರಜಾವಾಣಿ’ಗೆ ತಿಳಿಸಿದರುಹೇಳಿದರು.

ಲಿಂಗಸುಗೂರು ತಾಲ್ಲೂಕು ಹುನಕುಂಟಿ ಬಹುಗ್ರಾಮ ಕುಡಿವ ನೀರು ಯೋಜನೆ ಜಲಶುದ್ಧೀಕರಣ ಘಟಕ ಬಳಕೆಯಾಗದೆ ಅನಾಥ ಸ್ಥಿತಿಯಲ್ಲಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.