ರಾಯಚೂರು: ಸುಕ್ಷೇತ್ರ ಶ್ರೀಶೈಲದಲ್ಲಿ ಬುಧವಾರ ತಡರಾತ್ರಿ ಕರ್ನಾಟಕದ ಭಕ್ತರು ಮತ್ತು ಆಂಧ್ರಪ್ರದೇಶದ ವ್ಯಾಪಾರಿಗಳ ಮಧ್ಯೆ ನಡೆದ ಗಲಾಟೆಯಿಂದಾಗಿ ಆತಂಕಕ್ಕೊಳಗಾದ ಭಕ್ತರು ರಾತ್ರೋರಾತ್ರಿ ವಾಹನಗಳ ಮೂಲಕ ತಮ್ಮ ಊರುಗಳತ್ತ ಮರಳಿದ್ದಾರೆ.
‘ವಾಹನಗಳನ್ನು ಧ್ವಂಸ ಮಾಡಿರುವ ಘಟನೆಯಿಂದ ಭಕ್ತರು ಭಯಗೊಂಡಿದ್ದರು. ಅಂಗಡಿ ಮುಗ್ಗಟ್ಟುಗಳನ್ನೆಲ್ಲ ಮುಚ್ಚಿದ್ದರಿಂದ ನೀರು, ಆಹಾರದ ಸಮಸ್ಯೆ ಆಗುತ್ತದೆ ಎಂದು ಸ್ವಂತ ವಾಹನಗಳಲ್ಲಿ ಬಂದಿದ್ದ ಲಕ್ಷಾಂತರ ಭಕ್ತರು ಜಾಗ ಖಾಲಿ ಮಾಡಿದ್ದಾರೆ‘ ಎಂದು ವಿಜಯಪುರ ಜಿಲ್ಲೆ ಬಬಲೇಶ್ವರ ಭಕ್ತ ಶಂಕರಯ್ಯ ಅವರು ’ಪ್ರಜಾವಾಣಿ‘ಗೆ ತಿಳಿಸಿದರು.
ಶ್ರೀಶೈಲದಲ್ಲಿ 144 ಸೆಕ್ಷೆನ್ ಜಾರಿಗೊಳಿಸಿದ್ದು, ಭಕ್ತರು ಗುಂಪಾಗಿ ಸಂಚರಿಸುವುದಕ್ಕೆ ಅವಕಾಶವಿಲ್ಲ. ವಾಹನಗಳ ಸಂಚಾರ ಮತ್ತು ಭಕ್ತರ ಸಂಚಾರ ವಿರಳವಾಗಿದೆ. ಪೊಲೀಸರು ಮತ್ತು ಅರೆಸೇನಾ ಪಡೆಯವರು ಬಂದಿದ್ದು, ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ. ವಸತಿಗೃಹದಲ್ಲಿ ಉಳಿದುಕೊಂಡಿರುವ ಭಕ್ತರು ಹೊರಗೆ ಬರಲಾಗುತ್ತಿಲ್ಲ. ಒಬ್ಬೊಬ್ಬರಾಗಿ ಹೊರಬರಬಹುದಾಗಿದೆ.
ಶ್ರೀಶೈಲ ಪೀಠದ ಆಡಳಿತಾಧಿಕಾರಿಗಳು ಹೇಳುವ ಪ್ರಕಾರ, ಯುವಕ ಕೊಲೆಯಾಗಿದ್ದಾನೆ ಎನ್ನುವ ವದಂತಿ, ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿರುವುದು, ಬೈಕ್ ನೆಲಕ್ಕೆ ಉರುಳಿಸಿರುವುದು ಹಾಗೂ ಅಂಗಡಿಗಳಲ್ಲಿನ ಸಾಮಗ್ರಿಗಳನ್ನು ರಸ್ತೆಗೆ ಚೆಲ್ಲಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಇದರಿಂದಲೇ ಭಕ್ತರಲ್ಲಿ ತಪ್ಪು ಸಂದೇಶ ರವಾನೆಯಾಗಿ ಗಾಬರಿಯಾಗಿದ್ದಾರೆ. ವಾಸ್ತವದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಭಕ್ತರು ಯಾವುದೇ ಭಯವಿಲ್ಲದೆ ಬಂದು ದರ್ಶನ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದರು.
’ಪ್ರತಿವರ್ಷ ರಥೋತ್ಸವ ಮುಗಿಯುವವರೆಗೂ ಭಕ್ತರು ತುಂಬಿರುತ್ತಿದ್ದರು. ಈಗ ಮಾಮೂಲಿ ದಿನಗಳಂತೆ ಶ್ರೀಶೈಲದ ರಸ್ತೆಗಳು ಕಾಣುತ್ತಿವೆ. ಬಹಳಷ್ಟು ಜನರು ವಾಪಸ್ ಹೋಗಿದ್ದಾರೆ. ಕುಡಿಯುವುದಕ್ಕೆ ನೀರಿನ ಸಮಸ್ಯೆ ಇದೆ. ಅಂಗಡಿಗಳು ತೆರೆದಿಲ್ಲವಾದ್ದರಿಂದ ನೀರು ಖರೀದಿಯೂ ಸಾಧ್ಯವಾಗುತ್ತಿಲ್ಲ. ಗುರುವಾರ ರಾತ್ರಿವರೆಗೂ ಪರಿಸ್ಥಿತಿ ನೋಡುತ್ತೇವೆ. ಸಹಜ ಸ್ಥಿತಿ ಇದ್ದರೆ ಉಳಿದುಕೊಳ್ಳುತ್ತೇವೆ. ಇಲ್ಲವಾದರೆ ರಾತ್ರಿಯೇ ಮರಳುತ್ತೇವೆ‘ ಎಂದು ಶ್ರೀಶೈಲದ ವಸತಿಗೃಹವೊಂದರಲ್ಲಿ ಉಳಿದುಕೊಂಡಿರುವ ರಾಯಚೂರು ಜಿಲ್ಲೆ ಸಿರವಾರದ ಭಕ್ತ ಬಸವರಾಜಗೌಡ ತಿಳಿಸಿದರು.
ಇದನ್ನೂ ಓದಿ | ಹಲ್ಲೆಗೊಳಗಾದ ಯುವಕ ಮೃತಪಟ್ಟಿಲ್ಲ: ಶ್ರೀಶೈಲ ಮಠದ ಅಧಿಕಾರಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.