ಲಿಂಗಸುಗೂರು: ಅಗ್ನಿಶಾಮಕ ಠಾಣೆ ಆರಂಭಗೊಂಡು ಇಪ್ಪತ್ಕಾಲ್ಕು ವರ್ಷಗಳಲ್ಲಿ ಆಕಸ್ಮಿಕ ಬೆಂಕಿ, ಅನಾಹುತ, ಕೆರೆ, ಬಾವಿ, ನದಿ ಇತರೆಡೆಗಳಲ್ಲಿ ಜೀವಹಾನಿ ತಪ್ಪಿಸುವಂತ ಸಾಕಷ್ಟು ಪ್ರಕರಣಗಳಲ್ಲಿ ಸೇವೆ ಸಲ್ಲಿಸಿದೆ. ಈಗಿರುವ ಮೂರು ಜಲ ವಾಹನ (ವಾಟರ್ ಟೆಂಡರ್)ಗಳಲ್ಲಿ ಒಂದು ಮಾತ್ರ ಬಳಕೆಗೆ ಯೋಗ್ಯವಾಗಿದ್ದು, ಸಂಕಷ್ಟ ಎದುರಿಸುವಂತಾಗಿದೆ.
ತಾಲ್ಲೂಕು ಸೇರಿದಂತೆ ಪಕ್ಕದ ಮಸ್ಕಿ ತಾಲ್ಲೂಕಿನ ಕವಿತಾಳ, ಸಂತೆಕೆಲ್ಲೂರು, ಮಸ್ಕಿ ಹೋಬಳಿ ವ್ಯಾಪ್ತಿ ಪ್ರದೇಶದಲ್ಲಿ ಅವಘಡಗಳ ಮಾಹಿತಿ ಬಂದಾಕ್ಷಣ ಸೇವೆಗೆ ತೆರಳುವುದು ಸಾಮಾನ್ಯ. ಈಗಿರುವ ಜಲವಾಹನ ಮೂರರಲ್ಲಿ 1991 ಮತ್ತು 1998ರ ಮಾಡೆಲ್ ವಾಹನಗಳ 15 ವರ್ಷದ ಅವಧಿ ಪೂರ್ಣಗೊಂಡಿದ್ದು ಬಳಕೆಗೆ ಯೋಗ್ಯವಾಗಿಲ್ಲ.
ಈಚೆಗೆ ಗಂಗಾವತಿ ಠಾಣೆಯಿಂದ ನೀಡಿರುವ ಹಳೆಯ ಜಲವಾಹನ (ವಾಟರ್ ಟೆಂಡರ್) 2011ರ ಮಾಡೆಲ್ ಬಳಕೆ ಮಾಡುತ್ತಿದ್ದು 2ವರ್ಷ ಮಾತ್ರ ಬಳಕೆ ಮಾಡಬಹುದಾಗಿದೆ. ಮೂರು ಜಲವಾಹನ ಬಳಕೆ ಮಾಡುವ ವಿಶಾಲ ವ್ಯಾಪ್ತಿ ಹೊಂದಿರುವ ಠಾಣೆಯಲ್ಲಿ ಒಂದೆ ವಾಹನದಿಂದ ಕಾರ್ಯಾಚರಣೆ ನಡೆಸುವ ಅನಿವಾರ್ಯತೆ ಎದುರಾಗಿದೆ.
ಪ್ರಮುಖ ಅಗ್ನಿ ಶಾಮಕಾಧಿಕಾರಿ (ಜಮಾದಾರ) 2 ಹುದ್ದೆ ಮತ್ತು ಚಾಲಕ ಒಂದು ಹುದ್ದೆ ಒಟ್ಟು ಮೂರು ಸಿಬ್ಬಂದಿ ಕೊರತೆ ಇದೆ. 2024 ಜನವರಿ ತಿಂಗಳಿಂದ ಈವರೆಗೆ 50 ಪ್ರಕರಣಗಳು ವರದಿ ಆಗಿದ್ದು ₹47.23 ಲಕ್ಷ ನಷ್ಟದ ವರದಿ ಆಗಿದ್ದು, ಅಂದಾಜು ₹63.71 ಲಕ್ಷ ನಷ್ಟವಾಗುವುದನ್ನು ರಕ್ಷಣೆ ಮಾಡಲಾಗಿದೆ.
2023ರಲ್ಲಿ 175 ಪ್ರಕರಣಗಳು ನಡೆದಿದ್ದು, ಈ ಸಂದರ್ಭದಲ್ಲಿ ₹78.53 ಲಕ್ಷ ನಷ್ಟವಾಗಿದ್ದರೆ, ಅಂದಾಜು ₹1,27ಕೋಟಿ ನಷ್ಟದಷ್ಟು ಮೌಲ್ಯದ ಆಸ್ತಿ ರಕ್ಷಣೆ ಮಾಡಲಾಗಿದೆ. ಅಷ್ಟೊಂದು ಪ್ರಕರಣಗಳು ನಡೆಯುತ್ತಿರುವ ಠಾಣೆಯಲ್ಲಿ ಹಳೆಯ ಒಂದೇ ವಾಹನ ಬಳಕೆಗೆ ಇದ್ದು ಜಿಲ್ಲಾಡಳಿತ ಹೆಚ್ಚುವರಿ ವಾಹನ ನೀಡಲು ಮುತುವರ್ಜಿ ವಹಿಸಬೇಕಿದೆ.
ಕೃಷ್ಣಾನದಿ ಪ್ರವಾಹ ಸೇರಿದಂತೆ ನೆರೆ ಹಾವಳಿಯಂತಹ ಪ್ರಕರಣಗಳಲ್ಲಿ ಸಿಲುಕಿದವರ ರಕ್ಷಣೆಗಾಗಿ 30ಎಚ್.ಪಿ ಮತ್ತು 25ಎಚ್.ಪಿ ಸಾಮರ್ಥ್ಯದ ಎರಡು ಬೋಟ್‍ಗಳು ಲಭ್ಯವಿವೆ. ನೆರೆಹಾವಳಿ, ಅಗ್ನಿ ದುರಂತ ತಡೆಯಲು ಬೇಕಾಗುವ ಎಲ್ಲ ಸೌಲಭ್ಯಗಳಿದ್ದು ಸಿಬ್ಬಂದಿಗೆ ವಸತಿಗೃಹ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಬೇಕಿದೆ.
‘ಅಗ್ನಿಶಾಮಕ ಠಾಣಾ ಸಿಬ್ಬಂದಿಗೆ ಅನ್ಯ ತಾಲ್ಲೂಕುಗಳಿಗೆ ತೆರಳುತ್ತಿರುವುದನ್ನು ತಡೆಯಬೇಕು. ಮಸ್ಕಿಗೆ ಈಗಾಗಲೆ ಭೂಮಿ ಮಂಜೂರು ಆಗಿದ್ದು ಕೂಡಲೆ ಸರ್ಕಾರ ಠಾಣೆ ಮಂಜೂರು ಮಾಡುವ ಜೊತೆಗೆ ಲಿಂಗಸುಗೂರಿಗೆ ಹೆಚ್ಚುವರಿ ವಾಹನ ಮಂಜೂರು ಮಾಡಬೇಕು’ ಎಂದು ಕರವೇ ತಾಲ್ಲೂಕು ಅಧ್ಯಕ್ಷ ಜಿಲಾನಿಪಾಷ ಒತ್ತಾಯಿಸಿದ್ದಾರೆ.
‘ಠಾಣೆಗೆ ಬೇಕಾಗಿರುವ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಈಗಿರುವ ಮೂರು ವಾಹನಗಳಲ್ಲಿ ಎರಡು ವಾಹನಗಳ 15 ವರ್ಷ ಅವಧಿ ಪೂರ್ಣಗೊಂಡಿದೆ. ಇರುವ ಜಲವಾಹನ ಬಳಸಿ ಸಿಬ್ಬಂದಿಯೊಂದಿಗೆ ಸುತ್ತಮುತ್ತಲ ತಾಲ್ಲೂಕು ಗ್ರಾಮೀಣ ಪ್ರದೇಶ ಅವಘಡ ಕರೆ ಬಂದಾಗ ಸೇವೆ ಸಲ್ಲಿಸುತ್ತಿದ್ದೇವೆ’ ಎಂದು ಅಗ್ನಿಶಾಮಕ ಠಾಣಾಧಿಕಾರಿ ಹೊನ್ನಪ್ಪ ದೊಡಮನಿ ಹೇಳಿದರು.
ಅತ್ಯಾಧುನಿಕ ಕಿಟ್ ಸೌಲಭ್ಯ ಕಲ್ಪಿಸಬೇಕು ಹೊಸ ವಾಟರ್ ಟೆಂಡರ್ ವಾಹನ ನೀಡಿರಿ ಮಸ್ಕಿ ತಾಲ್ಲೂಕಿಗೆ ಪ್ರತ್ಯೇಕ ಠಾಣೆ ನೀಡಬೇಕು
ತಾಲ್ಲೂಕಿನ ಗ್ರಾಮ, ತಾಂಡಾ ಹಟ್ಟಿಗಳಲ್ಲಿ ಈವರೆಗೆ ಸಂಭವಿಸಿದ ಅಗ್ನಿ ಅವಘಡ ಮತ್ತು ನೆರೆಹಾವಳಿ ಪ್ರಕರಣ ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ಇದೆ.
-ಹೊನ್ನಪ್ಪ ದೊಡಮನಿಅಗ್ನಿಶಾಮಕ ಠಾಣಾಧಿಕಾರಿ, ಲಿಂಗಸುಗೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.