ಮಾನ್ವಿ: ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆ ಅಂಗವಾಗಿ ತಾಲ್ಲೂಕು ಸ್ವೀಪ್ ಸಮಿತಿ ವಿಶೇಷ ಮತದಾನ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಂಡಿದೆ.
ಮತದಾರರನ್ನು ಮತದಾನಕ್ಕಾಗಿ ಮತಗಟ್ಟೆಗಳಿಗೆ ಸೆಳೆಯುವುದು ಮತ್ತು ಹಲವು ವಿಷಯಗಳ ಕುರಿತು ಜಾಗೃತಿ ಮೂಡಿಸುವುದು ಈ ವಿಷಯಾಧಾರಿತ ಮತಗಟ್ಟೆಗಳ ಸ್ಥಾಪನೆಯ ಉದ್ದೇಶವಾಗಿದೆ.
ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಐದು ವಿಷಯಾಧಾರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಮತದಾನದ ಮಹತ್ವ ಸಾರುವ ವಿಷಯಾಧಾರಿತ ಮತಗಟ್ಟೆ ಸ್ಥಾಪಿಸಲಾಗಿದೆ. ಮಾನ್ವಿ ಪಟ್ಣಣದ ಎಪಿಎಂಸಿ ರೈತ ಭವನದಲ್ಲಿ ಅಂಗವಿಕಲ ಸ್ನೇಹಿ ಮತಗಟ್ಟೆ, ನೀರಮಾನ್ವಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಯುವ ಮತಗಟ್ಟೆ, ಬ್ಯಾಗವಾಟ ಗ್ರಾಮದ ಶಾಲೆಯಲ್ಲಿ ಗ್ರಾಮೀಣ ಜಾನಪದ ಸೊಗಡು ಹಾಗೂ ಕಲೆಗಳನ್ನು ಬಿಂಬಿಸುವ ಸಾಂಪ್ರದಾಯಿಕ ಮಾದರಿ ಮತಗಟ್ಟೆ, ಪೋತ್ನಾಳ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ‘ಸಖಿ’ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ. ಮತಗಟ್ಟೆಯ ಗೋಡೆಗಳಿಗೆ ಮತದಾನ ಜಾಗೃತಿ ಹಾಗೂ ಆಯಾ ವಿಷಯಕ್ಕೆ ಸಂಬಂಧಿಸಿದ ಚಿತ್ರಗಳು ಹಾಗೂ ಘೋಷ ವಾಕ್ಯಗಳನ್ನು ಬರೆದು ವಿಶೇಷವಾಗಿ ವರ್ಣಾಲಂಕಾರ ಮಾಡಲಾಗಿದೆ. ನೋಡುಗರ ಗಮನ ಸೆಳೆಯುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.