ADVERTISEMENT

ವಚನ ಸಾಹಿತ್ಯ ರಕ್ಷಿಸಿದ ದಂಡನಾಯಕ ಮಾಚಿದೇವ: ಚಿಂತಕ ಶರಣ ಅಮರಗುಂಡಪ್ಪ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 6:57 IST
Last Updated 6 ಫೆಬ್ರುವರಿ 2024, 6:57 IST
<div class="paragraphs"><p>ರಾಯಚೂರಿನ ಬಸವ ಕೇಂದ್ರದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು</p></div>

ರಾಯಚೂರಿನ ಬಸವ ಕೇಂದ್ರದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು

   

ರಾಯಚೂರು: ‘ಸರ್ವರಿಗೂ ಸಮಪಾಲು-ಸಮಬಾಳು ಒದಗಿಸಲು ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಶರಣರ ಅಗ್ರಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಕಂಡುಬರುತ್ತಾರೆ’ ಎಂದು ಚಿಂತಕ ಶರಣ ಅಮರಗುಂಡಪ್ಪ ಹೂಗಾರ ಹೇಳಿದರು.

ಇಲ್ಲಿಯ ಬಸವ ಕೇಂದ್ರದಲ್ಲಿ, 12ನೇ ಶತಮಾನದ ಕಲ್ಯಾಣ ಕ್ರಾಂತಿಯ ವೀರ ಗಣಾಚಾರಿ ಮಡಿವಾಳ ಮಾಚಿದೇವರ ಜಯಂತಿ ಅಂಗವಾಗಿ ಆಯೋಜಿಸಿದ್ದ ವಿಶೇಷ ಚಿಂತನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಮಾಚಿದೇವರು ಹೊತ್ತ ಜವಾಬ್ದಾರಿ ಅನುಪಮವಾದದ್ದು. ಶರಣ ಸಮೂಹವನ್ನು ರಕ್ಷಿಸಿ, ವಚನ ಸಾಹಿತ್ಯವನ್ನು ಉಳವಿಗೆ ತಲುಪಿಸಿದ ಮಹಾನ್ ದಂಡನಾಯಕನೇ ಮಾಚಿದೇವ’ ಎಂದು ತಿಳಿಸಿದರು.

‘12ನೆಯ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು-ಕೀಳು ತಾರತಮ್ಯ, ಅಸ್ಪೃಶ್ಯತೆ, ಮೂಢನಂಬಿಕೆ, ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು, ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು’ ಎಂದು ಹೇಳಿದರು.

ಸುಮಂಗಲಮ್ಮ ಹಿರೇಮಠ, ಶರಣೆ ಲಕ್ಷ್ಮಿ ಪಟ್ಟಣಶೆಟ್ಟಿ, ಶರಣ ಬೆಟ್ಟಪ್ಪ ಕಸ್ತೂರಿ, ಬಸವರಾಜ ಕುರುಗೋಡು ಮತ್ತು ಶಿವಕುಮಾರ ಮಾಟೂರ್ ಚಿಂತನೆ ಮಾಡಿದರು.

ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ಅಧ್ಯಕ್ಷತೆ ವಹಿಸಿದ್ದರು. ಚನ್ನಬಸವ ಸ್ವಾಗತಿಸಿದರು. ಚನ್ನಬಸವಣ್ಣ ಮಹಾಜನಶೆಟ್ಟಿ ನಿರೂಪಣೆ ಮಾಡಿದರು. ವೆಂಕಣ್ಣ ಆಶಾಪುರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.