ಮಂತ್ರಾಲಯ (ರಾಯಚೂರು): ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ 353ನೇ ಆರಾಧಾನಾ ಮಹೋತ್ಸವ ಪ್ರಯುಕ್ತ ಗುರುವಾರ ರಾಯರ ಉತ್ತರಾರಾಧನೆ ಹಾಗೂ ಮಹಾರಥೋತ್ಸವವು ಭಕ್ತಸಾಗರದ ಮಧ್ಯೆ ವಿಜೃಂಭಣೆಯಿಂದ ನಡೆಯಿತು.
ಶ್ರೀ ಮಠದ ಆವರಣದಿಂದ ಕಲಾ ತಂಡಗಳ ಮೆರವಣಿಗೆ ಮೂಲಕ ಶ್ರೀ ಗುರುಸಾರಭೌಮ ವಿದ್ಯಾಪೀಠದ ಆವರಣದ ವರೆಗೆ ಶ್ರೀರಾಘವೇಂದ್ರ ಸ್ವಾಮಿಗಳ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಪಂಡಿತರ ಅಷ್ಟೋತ್ತರ ಪಠಣದ ನಂತರ ಶ್ರೀ ಮಠಕ್ಕೆ ತಂದು ಮೂಲ ಬೃಂದಾವನ ಪೂಜೆ ಸಲ್ಲಿಸಲಾಯಿತು. ನಂತರ ಸಂಭ್ರಮದೊಂದಿಗೆ ಮಹಾರಥೋತ್ಸವ ಜರುಗಿತು.
ಡೊಳ್ಳು ಕುಣಿತ, ಬ್ಯಾಂಡ್ ವಾದನ , ಭಜನಾ ಮಂಡಳಿಗಳು ಸೇರಿದಂತೆ ಇತರೆ ಕಲಾ ವಾದ್ಯಗಳು, ಕಲಾ ತಂಡಗಳು ಮೆರವಣಿಗೆ ಮೆರುಗು ತುಂಬಿದ್ದವು. ಭಕ್ತರು ಸಾಂಪ್ರದಾಯಿಕ ವಸ್ತಗಳನ್ನು ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಭ್ರಮಿಸಿದರು.
ನಂತರ ರಥದ ಮೇಲೆಯೇ ನಿಂತು ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿದರು.
ಶ್ರೀ ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ ಪ್ರಯುಕ್ತ ರಾಯರ ಮೂಲ ಬೃಂದಾವನಕ್ಕೆ ವಿಶೇಷ ನವರತ್ನಗಳನ್ನೊಂಡ ಚಿನ್ನಾಭರಣಗಳಿಂದ ಅಲಂಕಾರ ಮಾಡಲಾಗಿತ್ತು.
ಮೈಸೂರು ರಾಜಮನೆತನದ ವಂಶಸ್ಥ ಹಾಗೂ ಸಂಸದರೂ ಆದ ಯದುವೀರ್ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಅವರಿಗೆ ಶ್ರೀಮಠದ ವತಿಯಿಂದ ‘ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿ‘ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಸಮ್ಮಾನಪತ್ರ, ಸ್ಮರಣಿಕೆ, ನಗದು, ಶ್ರೀಫಲ ಹಾಗೂ ಮಂತ್ರಾಕ್ಷತೆಯನ್ನು ಒಳಗೊಂಡಿದೆ.
ಇದಕ್ಕೂ ಮೊದಲು ಯದುವೀರ ಕೃಷ್ಣದತ್ತ ಚಾಮರಾಜೇಂದ್ರ ಒಡೆಯರ್ ಅವರು ರಾಯರ ಮೂಲ ಬೃಂದಾವನಕ್ಕೆ ಪೂಜೆ ಸಲ್ಲಿಸಿದರು. ಮಠದಲ್ಲಿ ಚಿನ್ನದ ಕವಚದ ಶಿಲಾಮಂಟಪದ ಮುಂಭಾಗವನ್ನು ಯದುವೀರ್ ಹಾಗೂ ಸ್ವಾಮೀಜಿ ಜಂಟಿಯಾಗಿ ಉದ್ಘಾಟಿಸಿದರು.
ಬುಧವಾರ ರಾತ್ರಿ ಚಿತ್ರನಟ ಜಗ್ಗೇಶ್, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸೇರಿದಂತೆ ಪ್ರಮುಖ ಗಣ್ಯರು ರಾಯರ ದರ್ಶನ ಪಡೆದರು. ರಾತ್ರಿ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.