ದೇವದುರ್ಗ (ರಾಯಚೂರು ಜಿಲ್ಲೆ): ದೇವದುರ್ಗ ತಾಲ್ಲೂಕಿನ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಹನುಮಂತ (3) ಬಾಲಕ ಶುಕ್ರವಾರ ಮೃತಪಟ್ಟಿದ್ದು, 30 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮೀಪದ ಅರಕೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ, ದೇವದುರ್ಗ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಅಸ್ವಸ್ಥರು ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿತ್ರಾಣವಾಗಿದ್ದ ಬಾಲಕನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾತಿಯಾಗದೆ ಮೃತಪಟ್ಟಿದೆ.
'ಗ್ರಾಮದಲ್ಲಿ ನೀರು ಸರಬರಾಜು ಆಗುತ್ತಿದ್ದ ನೀರಿನ ಟ್ಯಾಂಕ್ ಅನೇಕ ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ. ಇದರಿಂದ ಕಲುಷಿತಗೊಂಡ ನೀರನ್ನು ಗ್ರಾಮಸ್ಥರು ಸೇವಿಸಿದಾಗ ವಾಂತಿ, ಭೇದಿಗೆ ತುತ್ತಾಗಿದ್ದಾರೆ. ರಸ್ತೆ ಬದಿಯಲ್ಲಿ ಪೈಪ್ ಲೈನ್ ಓಡೆದು ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಮಿಶ್ರಣವಾಗಿರುವುದು ಘಟನೆಗೆ ಕಾರಣ. ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ನಿರುಪಯುಕ್ತವಾಗಿದ್ದು ಪಂಚಾಯಿತಿ ಅಧಿಕಾರಿಗಳು ದುರಸ್ತಿ ಮಾಡಿಸಿಲ್ಲ' ಎಂದು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ತಿಳಿಸಿದರು.
ಗ್ರಾಮಕ್ಕೆ ಅರಕೇರಾ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬನದೇಶ್ವರ, ಪಿಡಿಒ ರೇಣುಕಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ರೇಕಲಮರಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ನೀರಿನಲ್ಲಿ ಆರ್ಸೆನಿಕ್ ಅಂಶವಿದ್ದು, ಗ್ರಾಮದಲ್ಲಿ 50 ವರ್ಷ ದಾಟಿದವರೆಲ್ಲ ಮೊಣಕಾಲು ಬೇನೆಗೆ ಒಳಗಾಗಿದ್ದಾರೆ ಎನ್ನುವ ಕುರಿತು 'ಪ್ರಜಾವಾಣಿ'ಯಲ್ಲಿ ಮೂರು ವರ್ಷಗಳ ಹಿಂದೆಯೇ ವಿಶೇಷ ವರದಿ ಮಾಡಿತ್ತು. ಆನಂತರದಲ್ಲಿ ಶುದ್ಧ ನೀರಿನ ಘಟಕ ಸ್ಥಾಪಿಸಲಾಗಿದ್ದು, ಸಕಾಲಕ್ಕೆ ದುರಸ್ತಿ ಮಾಡದಿರುವುದು ಸಮಸ್ಯೆಗೆ ಕಾರಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.