ADVERTISEMENT

ಮಸ್ಕಿ ಕ್ಷೇತ್ರ ಸ್ಥಿತಿ–ಗತಿ| ಮಸ್ಕಿಯಲ್ಲಿ ಕಾಂಗ್ರೆಸ್‌, ಬಿಜೆಪಿ ನೇರ ಸ್ಪರ್ಧೆ

ನಾಗರಾಜ ಚಿನಗುಂಡಿ
Published 6 ಫೆಬ್ರುವರಿ 2023, 7:24 IST
Last Updated 6 ಫೆಬ್ರುವರಿ 2023, 7:24 IST
ಮಸ್ಕಿ ವಿಧಾನಸಭೆ ಕ್ಷೇತ್ರ
ಮಸ್ಕಿ ವಿಧಾನಸಭೆ ಕ್ಷೇತ್ರ   

ರಾಯಚೂರು: ನೂತನವಾಗಿ 2008ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ ಮಸ್ಕಿಯಲ್ಲಿ ಬಿಜೆಪಿ ಮತ್ತೆ ಪ್ರಾಬಲ್ಯ ಸಾಧಿಸಲು ಸಿದ್ಧತೆ ಮಾಡಿಕೊಂಡಿದೆ. ಆದರೆ, ಉಪಚುನಾವಣೆ ಮೂಲಕ ಶಾಸಕ ಸ್ಥಾನ ಪಡೆದಿರುವ ಕಾಂಗ್ರೆಸ್‌ ಹಾಲಿ ಶಾಸಕ ಬಸನಗೌಡ ತುರ್ವಿಹಾಳ ಮತ್ತೊಮ್ಮೆ ಆಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ.

ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ನಡೆಯುವುದಕ್ಕೆ ಮಸ್ಕಿ ಆಖಾಡ ಕಾಯುತ್ತಿದೆ. ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ ಸ್ಪರ್ಧಿಸುವುದು ಬಹುತೇಕ ಖಚಿತ. ಉಪಚುನಾವಣೆಯಲ್ಲಿ ಸೋಲನುಭವಿಸಿರುವ ಕಹಿ ಅನುಭವದಲ್ಲಿರುವ ಬಿಜೆಪಿ, ಮಸ್ಕಿಯಲ್ಲಿ ಗೆಲ್ಲಲೇಬೇಕು ಎನ್ನುವ ಹುಮ್ಮಸ್ಸಿನಲ್ಲಿದೆ.

ಬಿಜೆಪಿಯಿಂದ 2008 ರಲ್ಲಿ ಶಾಸಕರಾಗಿ ಆಯ್ಕೆಯಾಗಿ ರಾಜಕೀಯ ಪ್ರವೇಶ ಪಡೆದಿರುವ ಪ್ರತಾಪಗೌಡ ಅವರು ಆನಂತರ ಸತತ ಎರಡು ಅವಧಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಪಕ್ಷಗಳನ್ನು ಅದಲಿಬದಲಿ ಮಾಡುವುದು ಪುನಾವರ್ತನೆ ಆಗಿದ್ದರಿಂದ ಉಪಚುನಾವಣೆಯಲ್ಲಿ ಕ್ಷೇತ್ರದ ಶಾಸಕರನ್ನು ಜನರೇ ಬದಲಾಯಿಸಿದರು. ಸಚಿವ ಸ್ಥಾನದ ಆಕಾಂಕ್ಷೆಯಲ್ಲಿದ್ದ ಪ್ರತಾಪಗೌಡ ಸೋಲು ಕಂಡರೂ ಜನಸಂಪರ್ಕದಿಂದ ದೂರವಾಗಿಲ್ಲ. ಆಡಳಿತದಲ್ಲಿ ಬಿಜೆಪಿ ಇರುವುದರಿಂದ ತಮ್ಮದೇ ಆದ ಪರಿಮಿತಿಯಲ್ಲಿ ಕ್ಷೇತ್ರದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತಾ ಬಂದಿದ್ದಾರೆ. ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ಕೂಡಾ ದೊರೆಯಲಿಲ್ಲ. ಇದನ್ನು ಸರಿಪಡಿಸುವುದಕ್ಕಾಗಿ ಪ್ರತಾಪಗೌಡ ಅವರನ್ನೇ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ.

ADVERTISEMENT

ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಬಸನಗೌಡ ತುರ್ವಿಹಾಳ ಅವರು ಈಗಾಗಲೇ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಟಿಕೆಟ್‌ ಖಚಿತ. ಕ್ಷೇತ್ರದಲ್ಲಿ ಜನ ಬೆಂಬಲ ಯಾಚಿಸುವ ಕಾರ್ಯ ಈಗಾಗಲೇ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ಅಭಿವೃದ್ಧಿ ಕಾರ್ಯ ಮಾಡಿರುವುದು ಶ್ರೀರಕ್ಷೆಯಾಗಲಿದೆ ಎನ್ನುವ ವಿಶ್ವಾಸಲ್ಲಿದ್ದಾರೆ. ‘ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ವರಿಷ್ಠರು ಸೇರಿದಂತೆ ಕ್ಷೇತ್ರದಲ್ಲಿ ಕಾರ್ಯಕರ್ತರಿಂದ ವ್ಯಕ್ತವಾಗಿದ್ದ ಒಗ್ಗಟ್ಟು ಹಾಗೂ ಬೆಂಬಲ ಈ ಚುನಾವಣೆಯಲ್ಲೂ ಕೆಲಸ ಮಾಡಲಿದೆ‘ ಎಂದು ನಿರೀಕ್ಷಿಸಲಾಗಿದೆ. ಎಲ್ಲರನ್ನು ಒಗ್ಗೂಡಿಸಿಕೊಂಡು ಪ್ರಚಾರ ಕಾರ್ಯವನ್ನು ಬಸನಗೌಡ ಅವರು ಎಷ್ಟು ಗಟ್ಟಿಯಾಗಿ ಮಾಡುತ್ತಾರೆ ಎಂಬುದನ್ನು ಕಾದು ನೋಡಲಾಗುತ್ತಿದೆ.

ಜೆಡಿಎಸ್‌ ಪಕ್ಷವು ಅಭ್ಯರ್ಥಿಯ ಹುಡುಕಾಟದಲ್ಲಿದೆ. ಈ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿ ರುವುದರಿಂದ ಹೊರಜಿಲ್ಲೆಗ ಳಿಂದಲೂ ಪ್ರಭಾವಿಗಳು ಸ್ಪರ್ಧಿಸಲು ಮುಂದೆ ಬರುವ ಸಾಧ್ಯತೆಯೂ ಇದೆ. ಚುನಾವಣೆ ಆರಂಭವಾ

ಗುವವರೆಗೂ ಜೆಡಿಎಸ್‌ ನಡೆ ಏನೆಂಬುದು ಗೊತ್ತಾಗುವುದಿಲ್ಲ.

ಕಲ್ಯಾಣ ರಾಜ್ಯ ‍ಪ್ರಗತಿ ಪಕ್ಷ (ಕೆಆರ್‌ಪಿಪಿ)ದ ಸಂಸ್ಥಾಪಕ ಜನಾರ್ದನರೆಡ್ಡಿ ಅವರು ಮಸ್ಕಿ ಕ್ಷೇತ್ರದಲ್ಲಿ ಸಕ್ತೀಯತೆ ತೋರಿಸುತ್ತಿದ್ದಾರೆ. ಈಗಾಗಲೇ ವಿವಿಧ ಸಮುದಾಯಗಳ ಮುಖಂಡರ ಸಭೆ ಮಾಡಿ, ಅಭ್ಯರ್ಥಿಯೊಬ್ಬನನ್ನು ಚುನಾವಣೆ ಕಣಕ್ಕೆ ಇಳಿಸಲಾಗುವುದು ಎಂದು ಘೋಷಿಸಿದ್ದಾರೆ. ಆದರೆ, ಅಭ್ಯರ್ಥಿ ಯಾರು ಎಂಬುದು ಕುತೂಹಲಕಾರಿ ಅಂಶ. ಮಸ್ಕಿ ಕ್ಷೇತ್ರದಲ್ಲಿ ಕೊನೆಗಳಿಗೆಯಲ್ಲಿ ಪಕ್ಷಾಂತರ ನಡೆದರೂ ಅಚ್ಚರಿಪಡಬೇಕಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಪಕ್ಷದಿಂದಲೂ ಆಯ್ಕೆಯಾಗಿರುವ ಪ್ರತಾಪಗೌಡ ಅವರಿಗೂ ಆಯ್ಕೆಗಳಿವೆ.

2008 ರಲ್ಲಿ ಬಿಜೆಪಿ ಸ್ಪರ್ಧಿಸಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿರುವ ಬಸನಗೌಡ ತುರ್ವಿಹಾಳ ಅವರಿಗೂ ಆಯ್ಕೆಗಳಿವೆ. ಯಾರೂ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬುದು ಕಾಂಗ್ರೆಸ್‌, ಬಿಜೆಪಿಯಿಂದ ಅಧಿಕೃತವಾಗಿ ಪಟ್ಟಿ ಬಿಡುಗಡೆಯಾದ ಬಳಿಕವೇ ತಿಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.