ADVERTISEMENT

ಮಸ್ಕಿ ಕ್ಷೇತ್ರ: ಶಾಸಕ ಬಸನಗೌಡರ ಎದುರು ಹಲವು ಸವಾಲು

ತಾಲ್ಲೂಕು ಕೇಂದ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗದ ಕಚೇರಿಗಳು: ಹಕ್ಕು ಪತ್ರ ವಿತರಣೆಯ ನಿರೀಕ್ಷೆಯಲ್ಲಿ ಸೋಮನಾಥ ನಗರದ ನಿವಾಸಿಗಳು

ಪ್ರಕಾಶ ಮಸ್ಕಿ
Published 20 ಮೇ 2023, 23:33 IST
Last Updated 20 ಮೇ 2023, 23:33 IST
ಆರ್.ಬಸನಗೌಡ ತುರ್ವಿಹಾಳ
ಆರ್.ಬಸನಗೌಡ ತುರ್ವಿಹಾಳ   

ಮಸ್ಕಿ: ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಆರ್.ಬಸನಗೌಡ ತುರ್ವಿಹಾಳ ಅವರ ಮುಂದೆ 5 (ಎ) ಕಾಲುವೆ ಯೋಜನೆ ಜಾರಿ ಹಾಗೂ ಸೋಮನಾಥ ನಗರದ ಹಕ್ಕುಪತ್ರ ವಿತರಣೆ ಸೇರಿ ಹತ್ತು ಹಲವು ಸವಾಲುಗಳಿವೆ.

2018 ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಪ್ರತಾಪಗೌಡ ಪಾಟೀಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ಎದುರಾದ ಉಪ ಚುನಾವಣೆ ವೇಳೆ ಪ್ರಚಾರಕ್ಕೆ ಆಗಮಿಸಿದ್ದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿ ಅನೇಕ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಆರ್.ಬಸನಗೌಡರನ್ನು ಗೆಲ್ಲಿಸಿದರೆ ಯೋಜನೆ ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.

ಈಚೆಗೆ ನಡೆದ ಚುನಾವಣೆಯಲ್ಲೂ ಇದೇ ಮುಖಂಡರು ಪುನಃ ಈ ಯೋಜನೆ ಮುಂದಿಟ್ಟುಕೊಂಡು ಮತಯಾಚನೆ ಮಾಡಿದ್ದರು. ಇದೀಗ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಯೋಜನೆ ಅನುಷ್ಠಾನದ ಜವಾಬ್ದಾರಿ ಇದೀಗ ನೂತನ ಶಾಸಕ ಆರ್.ಬಸನಗೌಡರ ಮೇಲಿದೆ.

ADVERTISEMENT

ಪಟ್ಟಣದ ಸೋಮನಾಥ ನಗರದಲ್ಲಿ ಸುಮಾರು 500 ಕ್ಕೂ ಹೆಚ್ಚು ಬಡ ಕೂಲಿ ಕಾರ್ಮಿಕರ ಕುಟುಂಬಗಳು 40 ವರ್ಷಗಳಿಂದ ಜೀವನ ಸಾಗಿಸುತ್ತಿವೆ. ಆಯ್ಕೆಯಾದರೆ ಆದ್ಯತೆಯ ಮೇರೆಗೆ ಹಕ್ಕುಪತ್ರ ಕೊಡಿಸುವ ಭರವಸೆ ನೀಡಿದ್ದ ಶಾಸಕರು ಇದೀಗ ಈ ಸಮಸ್ಯೆ ಬಗ್ಗೆ ಗಮನ ಕೊಡಬೇಕಿದೆ.

ಮಸ್ಕಿ ನೂತನ ತಾಲ್ಲೂಕು ಕೇಂದ್ರವಾಗಿದ್ದರೂ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಕಚೇರಿಗಳು ಆರಂಭವಾಗಿಲ್ಲ. ಈ ತಾಲ್ಲೂಕಿಗೆ ಒಳಪಡುವ ಸಿಂಧನೂರು, ಮಾನ್ವಿ ಹಾಗೂ ಲಿಂಗಸುಗೂರು ತಾಲ್ಲೂಕಿನ ಹಳ್ಳಿಗಳ ಜನರು ತಮ್ಮ ಕೆಲಸಗಳಿಗಾಗಿ ಮೂಲ ತಾಲ್ಲೂಕುಗಳಿಗೆ ಅಲೆದಾಡುವುದು ತಪ್ಪಿಲ್ಲ. ಆಡಳಿತ ಪಕ್ಷದ ಶಾಸಕರಾ ಗಿರುವ ಆರ್.ಬಸನಗೌಡ ಅವರು ಪೂರ್ಣ ಪ್ರಮಾಣದ ಕಚೇರಿಗಳ ಆರಂಭಕ್ಕೆ ಒತ್ತು ನೀಡಬೇಕಿದೆ.

ತಾಲ್ಲೂಕು ಕೇಂದ್ರ ಸ್ಥಾನವಾದ ಪಟ್ಟಣದಲ್ಲಿ ಈಗಿನ ಸರ್ಕಾರಿ ಆಸ್ಪತ್ರೆಯನ್ನು ನೂರು ಹಾಸಿಗೆಗಳ ಆಸ್ಪತ್ರೆಯನ್ನಾಗಿಸುವುದು, ಬಸ್ ನಿಲ್ದಾಣ ಮೇಲ್ದರ್ಜೆಗೇರಿಸುವುದು ಹಾಗೂ ತುಂಗಭದ್ರಾ ಎಡದಂಡೆ ಕಾಲುವೆಯ ಕೆಳ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿಸುವ ಸಂಬಂಧ ಹೆಚ್ಚು ಗಮನ ಹರಿಸಬೇಕು ಎಂಬುದು ಜನರ ಒತ್ತಾಸೆಯಾಗಿದೆ.

ಶಾಶ್ವತ ಶುದ್ಧ ಕುಡಿಯುವ ನೀರು ಸೇರಿದಂತೆ ಕ್ಷೇತ್ರದ ಹಲವಾರು ಸಮಸ್ಯೆಗಳು ನೂತನ ಶಾಸಕರಿಗೆ ಸವಾಲಾಗಿದ್ದು, ಈ ಬಗ್ಗೆ ಗಮನ ಹರಿಸುವರರೇ ಎಂಬುದು ಕ್ಷೇತ್ರದ ಜನರ ನಿರೀಕ್ಷೆಯಾಗಿದೆ.

ರಾಜ್ಯದಲ್ಲಿ ನಮ್ಮ ಪಕ್ಷವೇ ಆಡಳಿತಕ್ಕೆ ಬಂದಿದ್ದರಿಂದ ಕ್ಷೇತ್ರದ ನೀರಾವರಿ ಯೋಜನೆ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಬರುವ ಐದು ವರ್ಷಗಳ ಅವಧಿಯಲ್ಲಿ ಶಾಶ್ವತ ಪರಿಹಾರ ಕಲ್ಪಿಸಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಕ್ರಮ ಕೈಗೊಳ್ಳುತ್ತೇನೆ
-ಆರ್. ಬಸನಗೌಡ ತುರ್ವಿಹಾಳ ಶಾಸಕ
ಎರಡನೇ ಬಾರಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಆರ್.ಬಸನಗೌಡ ಅವರು ಪಟ್ಟಣದಲ್ಲಿ ಪೂರ್ಣ ಪ್ರಮಾಣದಲ್ಲಿ ಕಚೇರಿಗಳ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕೆಲಸ ಮಾಡಬೇಕು
-ಅಮರೇಶ ನಿವಾಸಿ
ತುಕ್ಕು ಹಿಡಿದಿರುವ ತಾಲ್ಲೂಕು ಆಡಳಿತ ಯಂತ್ರಕ್ಕೆ ನೂತನ ಶಾಸಕರು ಚುರುಕು ಮುಟ್ಟಿಸಿ ಅಧಿಕಾರಿಗಳು ತೀವ್ರಗತಿಯಲ್ಲಿ ಕೆಲಸ ಮಾಡುವಂತೆ ಮಾಡಲು ಕ್ರಮ ಕೈಗೊಳ್ಳಲಿ
-ಗಂಗಾಧರ ಮಸ್ಕಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.