ಮಸ್ಕಿ: ನವೆಂಬರ್ 1ರಂದು ನಡೆಯಲಿರುವ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತಾಲ್ಲೂಕು ಆಡಳಿತ ಹಾಗೂ ಪುರಸಭೆ ಮುಂದಾಗಿದೆ.
ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಹೆದ್ದಾರಿಯ ಎರಡೂ ಬದಿಯ ಕಂಬಗಳಿಗೆ ಕನ್ನಡದ ಬಾವುಟ ಕಟ್ಟಿ ಸಿಂಗಾರ ಮಾಡಲಾಗಿದೆ. ಎರಡೂ ಕಡೆಯ ಮಹಾದ್ವಾರಗಳಿಗೆ ಸ್ವಾಗತ ನಾಮಫಲಕ ಹಾಕಲಾಗಿದೆ. ಅಶೋಕ ವೃತ್ತ, ವಾಲ್ಮೀಕಿ, ಕನಕ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಕನ್ನಡದ ಬಂಟಿಂಗ್ಸ್ ಕಟ್ಟಲಾಗಿದೆ. ಇದಕ್ಕಾಗಿ ಪುರಸಭೆ ಸಿಬ್ಬಂದಿ ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ.
ಬೆಳಿಗ್ಗೆ ಕೇಂದ್ರ ಶಾಲಾ ಆವರಣದಲ್ಲಿ ಸಾರ್ವಜನಿಕರ ಕಾರ್ಯಕ್ರಮ ನಡೆಯಲಿದೆ. ನಂತರ ಪ್ರಮುಖ ಬೀದಿಗಳಲ್ಲಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಬ್ಯಾನರ್, ಬಂಟಿಂಗ್ಸ್ ಹಾಕಲಾಗಿದೆ.
ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್.ಬಸನಗೌಡ ತುರುವಿಹಾಳ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ತಹಶೀಲ್ದಾರ್ ಮಲ್ಲಪ್ಪ ಯರಗೋಳ, ತಾಲ್ಲೂಕು ಪಂಚಾಯಿತಿ ಇಒ ಅಮರೇಶ ಯಾದವ, ಸರ್ಕಲ್ ಇನ್‌ಸ್ಪೆಕ್ಟರ್ ಬಾಲಚಂದ್ರ ಡಿ. ಲಕ್ಕಂ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಕರವೇ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಹಶೀಲ್ದಾರ್ ಮಲ್ಲಪ್ಪ ಯರಗೋಳ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.