ADVERTISEMENT

ಮಸ್ಕಿ | ಪುರಸಭೆ ಸದಸ್ಯರಿಗೆ ಸಿಗದ ಅಧಿಕಾರ

ಚುನಾವಣೆ ನಡೆದು ಎರಡೂವರೆ ವರ್ಷ ಕಳೆದರೂ ನಡೆಯದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ಪ್ರಕಾಶ ಮಸ್ಕಿ
Published 14 ಜುಲೈ 2024, 7:09 IST
Last Updated 14 ಜುಲೈ 2024, 7:09 IST
ಮಸ್ಕಿಯ ಪುರಸಭೆ ಕಟ್ಟಡ
ಮಸ್ಕಿಯ ಪುರಸಭೆ ಕಟ್ಟಡ   

ಮಸ್ಕಿ: ಇಲ್ಲಿನ ಪುರಸಭೆ ಆಡಳಿತ ಮಂಡಳಿಗೆ ಚುನಾವಣೆ ನಡೆದು ಎರಡೂವರೆ ವರ್ಷ ಕಳೆದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗದ ಕಾರಣ ಸದಸ್ಯರು ಅಧಿಕಾರ ಭಾಗ್ಯದಿಂದ ವಂಚಿತಗೊಂಡಿದ್ದಾರೆ.

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಗೊಂದಲ ಸರಿಪಡಿಸುವಲ್ಲಿ ರಾಜ್ಯ ಸರ್ಕಾರ ಆಸಕ್ತಿ ತೋರಿಸದ ಕಾರಣ ಸದಸ್ಯರು ಅಧಿಕಾರವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದರಿಂದ ಪಟ್ಟಣದ ಅಭಿವೃದ್ಧಿಗೆ ಹಿನ್ನಡೆಯಾಗಿದೆ.

23 ವಾರ್ಡ್‌ಗಳಲ್ಲಿ ದಿನ ಬೆಳಗಾದರೆ ಸಮಸ್ಯೆ ಹೊತ್ತು ಮನೆಗೆ ಬರುವ ಜನರನ್ನು ನಿಭಾಯಿಸುವುದು ಸದಸ್ಯರಿಗೆ ಸವಾಲಾಗಿದೆ.

ADVERTISEMENT

ಖಾತಾ ನಕಲು, ನಳದ ಪರವಾನಗಿ, ಕಟ್ಟಡ ಪರವಾನಗಿ, ಚರಂಡಿ, ಬೀದಿ ದೀಪದ ಸಮಸ್ಯೆ ಸೇರಿ ಇತರೆ ಕೆಲಸಗಳನ್ನು ಬೇಗ ಮಾಡಿಸಿ ಕೊಡುವಂತೆ ಜನರು ಪುರಸಭೆ ಸದಸ್ಯರ ದುಂಬಾಲು ಬೀಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಉಪವಿಭಾಗಾಧಿಕಾರಿ ಆಡಳಿತಾಧಿಕಾರಿ: 2021ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗದ ಕಾರಣ ಅಂದಿನಿಂದ ಇಂದಿನವರೆಗೆ ಲಿಂಗಸುಗೂರು ಉಪವಿಭಾಗಾಧಿಕಾರಿ ಆಡಳಿತಾಧಿಕಾರಿಯಾಗಿದ್ದಾರೆ.

‘ಆಡಳಿತಾಧಿಕಾರಿ ಎರಡು ಬಾರಿ ಮಾತ್ರ ಪುರಸಭೆ ಕಚೇರಿಗೆ ಭೇಟಿ ನೀಡಿದ್ದಾರೆ. ಪಟ್ಟಣದ ಅಭಿವೃದ್ಧಿ ಕುರಿತು ಗಮನಹರಿಸುತ್ತಿಲ್ಲ’ ಎಂದು ಸಾರ್ವಜನಿಕರು ಆರೋ‍ಪಿಸುತ್ತಾರೆ.

ಖಾತಾ ನಕಲು ಸೇರಿ ವಿವಿಧ ಕೆಲಸಗಳಿಗೆ ದಿನಗಟ್ಟಲೇ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಆಡಳಿತಾಧಿಕಾರಿ ಗಮನಹರಿಸುತ್ತಿಲ್ಲ ಎಂದು ದೂರಿದ್ದಾರೆ.

‘ರಸ್ತೆ ವಿಸ್ತರಣೆಗೆ ಕೆಲವು ಕಡೆ ಮಾತ್ರ ಒತ್ತುವರಿ ತೆರವು ಮಾಡಲಾಗಿದೆ. ಕೆಲವು ಕಡೆ ಮಾಡಿಲ್ಲ. ತಾರತಮ್ಯ ಮಾಡಲಾಗುತ್ತಿದೆ’ ಎಂದು ಜನ ಆರೋಪಿಸುತ್ತಾರೆ.

ಒತ್ತುವರಿ ತೆರವುಗೊಳಿಸಿ ಸರ್ವಿಸ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವರೇ ಕಾದು ನೋಡಬೇಕಾಗಿದೆ.

ಖಾತಾ ನಕಲು ಪಡೆಯಲು ತಿಂಗಳಾನುಗಟ್ಟಲೇ ಅಲೆಯಬೇಕು. ಆಡಳಿತಾಧಿಕಾರಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರಸ್ತೆ ಅಭಿವೃದ್ಧಿ ಸೇರಿ ಅನೇಕ ಕೆಲಸಗಳು ನನೆಗುದಿಗೆ ಬಿದ್ದಿವೆ

-ಶರಣಯ್ಯ ಸೊಪ್ಪಿಮಠ ಪುರಸಭೆ ಸದಸ್ಯ

ಪಟ್ಟಣದಲ್ಲಿ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ವಿಸ್ತರಣೆ ಕಾಮಗಾರಿ ನಡೆದಿದೆ. ಪುರಸಭೆಯವರು ಒತ್ತುವರಿ ತೆರವು ಮಾಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ

-ನಾಗರಾಜ ಸ್ಥಳೀಯ ನಿವಾಸಿ

ಖಾತಾ ನಕಲು ಸೇರಿದಂತೆ ವಾರ್ಡ್‌ಗಳಿಗೆ ಮೂಲ ಸೌಕರ್ಯ ಒದಗಿಸುವ ಕುರಿತು ಆಡಳಿತಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗಿದೆ

-ನರಸರೆಡ್ಡಿ ಮುಖ್ಯಾಧಿಕಾರಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.