ಹೆಗ್ಗಡದಿನ್ನಿ (ದೇವದುರ್ಗ): ‘ಬಡವರಿಗಾಗಿ ಸಾಮೂಹಿಕ ವಿವಾಹಗಳು ಎನ್ನುವ ಬದಲು ಹೃದಯ ಶ್ರೀಮಂತರಿಗಾಗಿ ಸಮೂಹ ವಿವಾಹಗಳು ಎಂದು ಬದಲಾಗುತ್ತಿದೆ’ ಎಂದು ಕಲ್ಲೂರು ಅಡವಿಸಿದ್ದೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗ್ರಾಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧುವರರನ್ನು ಉದ್ದೇಶಿಸಿ ಮಾತನಾಡಿದ ಅವರು,‘ಆಡಂಬರದ ಮದುವೆಯಾಗುವ ಶ್ರೀಮಂತರಗಿಂತ ಸರಳವಾಗಿ ವಿವಾಹವಾಗುವ ನೀವು ನಿಜವಾದ ಹೃದಯ ಶ್ರೀಮಂತರು’ ಎಂದರು.
‘ಮಾನವೀಯ ಮೌಲ್ಯ, ಪ್ರೀತಿ ವಾತ್ಸಲ್ಯಕ್ಕೆ, ಪ್ರಾಥಮಿಕ ಸಂಬಂಧಗಳಿಗೆ ಆದ್ಯತೆ ನೀಡಿ ಸರಳ ವಿವಾಹವಾಗುವ ಮೂಲಕ ಸಾಲದ ಸುಳಿಯಿಂದ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಬೇಕು. ಅದ್ದೂರಿ ಮದುವೆಗೆ ಬಂದ ಯಾರೂ ನಿಮ್ಮ ಕಷ್ಟ ಸುಖಗಳನ್ನು ಕೇಳುವುದಿಲ್ಲ. ಸಾಧು, ಸಂತರು, ಶರಣರು, ವಿವಿಧ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಾಮೂಹಿಕ ವಿವಾಹ ದಾಂಪತ್ಯ ಜೀವನ ಉತ್ತಮವಾಗಿ ನಡೆಸುತ್ತಿದ್ದಾರೆ’ ಎಂದರು.
ಸರಳವಾಗಿ ನಡೆದ ಸಾಮೂಹಿಕ ವಿವಾಹದಲ್ಲಿ 10 ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು.
ಕಲಿಗಣನಾಥ ಸ್ವಾಮೀಜಿ, ಬೆಟ್ಟದಯ್ಯಪ್ಪ ತಾತ ಜಾಗಟಗಲ್, ನಾಗಲಿಂಗಯ್ಯ ಸ್ವಾಮಿ ಅಗರಖೇಡ, ಕೈಲಾಸಪತಿ ತಾತ ಯರಮರಸ್, ಕೆಪಿಸಿಸಿ ಮಹಿಳಾ ಘಟಕ ರಾಜ್ಯ ಉಪಾಧ್ಯಕ್ಷೆ ಶ್ರೀದೇವಿ ರಾಜಶೇಖರ ನಾಯಕ, ಅಕ್ಬರ ಸಾಬ್ ಸಿರವಾರ, ಮಲ್ಲಿಕಾರ್ಜುನ ಸ್ವಾಮಿ, ವೀರಯ್ಯಸ್ವಾಮಿ ಚಿಂಚೋಳಿ, ಭೀಮನಗೌಡ ನಾಗಡದಿನ್ನಿ, ನಾಗರಾಜಗೌಡ ಯರಮರಸ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.