ಸಿರವಾರ: ನವಲಕಲ್ಲು ಗ್ರಾಮ ಪಂಚಾಯಿತಿಯ ಹುಂಚೇಡ್ ಗ್ರಾಮದ 75 ವರ್ಷದ ಯಲ್ಲಮ್ಮ ಅವರು ತಮ್ಮ ಇಳಿವಯಸ್ಸಿನಲ್ಲಿಯೂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದಿನಕೂಲಿ ಕೆಲಸ ಮಾಡುತ್ತಾ, ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ.
ಇಂದಿನ ದಿನಗಳಲ್ಲಿ ವಯಸ್ಸಾಗಿರುವ ಬಹುತೇಕರು ಆರಾಮವಾಗಿ ಕುಳಿತುಕೊಂಡು ಊಟ ಮಾಡಿ ಜೀವಿಸಿದರೆ ಸಾಕು ಎನ್ನುವ ಸಮಯದಲ್ಲಿ ನರೇಗಾದಲ್ಲಿ ನಿತ್ಯ ಕೆಲಸ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಇವರು ಇತರರಿಗೆ ಮಾದರಿಯಾಗಿದ್ದಾರೆ.
ಯಲ್ಲಮ್ಮ ಅವರ ಪತಿ ತಿಮ್ಮಯ್ಯ ಹಲವು ವರ್ಷಗಳ ಹಿಂದೆಯೇ ನಿಧನರಾಗಿದ್ದು, ಇರುವ ಒಬ್ಬ ಮಗಳನ್ನು ಮದುವೆ ಮಾಡಿಕೊಟ್ಟು, ನಂತರ ಗ್ರಾಮದಲ್ಲಿ ಜೀವಿಸುತ್ತಿದ್ದಾರೆ. ಮೊದಲು ಕೆಲ ವರ್ಷಗಳ ಕಾಲ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ನಂತರ ಅವರ ಕೈ ಹಿಡಿದದ್ದು ನರೇಗಾ ಯೋಜನೆ. ಯೋಜನೆಯ ಜಾಬ್‌ಕಾರ್ಡ್ ಮಾಡಿಸಿಕೊಂಡು ಕೆಲಸ ಮಾಡುತ್ತಿರುವುದು ಕಳೆದ ಹಲವು ದಿನಗಳಿಂದ ಅವರ ಜೀವನಕ್ಕೆ ಆಧಾರ ಆಗಿದೆ. ನರೇಗಾದಡಿಯಲ್ಲಿ ಸಿಗುತ್ತಿರುವ ಕೂಲಿಯಿಂದ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ವಯಸ್ಸಾದ ಇವರಿಗೆ ಮಕ್ಕಳ ಆಸರೆ ಬೇಕು. ಆದರೆ ಇವರು ಯಾರ ಮೇಲೆಯೂ ಅವಲಂಬನೆಯಾಗಿದೇ ತಾವೇ ದುಡಿಯುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಹುಂಚೇಡ್ ಗ್ರಾಮದಲ್ಲಿ ನರೇಗಾ ಯೋಜನೆಯಡಿಯಲ್ಲಿ ಕೈಗೊಂಡಿರುವ ನಾಲಾ ಹೂಳೆತ್ತುವ ಕಾಮಗಾರಿಯಲ್ಲಿ ಯಲ್ಲಮ್ಮ ಅವರು, ಬಿಸಿಲನ್ನು ಲೆಕ್ಕಿಸದೆ ಅತಿ ಉತ್ಸಾಹದಿಂದ ಕೆಲಸ ಮಾಡುವ ಮೂಲಕ ಜತೆಗೆ ಇರುವ ಯುವಕರು, ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.
‘ನರೇಗಾ ಕೆಲಸದಿಂದ ಬರುವ ಕೂಲಿಯಿಂದ ನಿತ್ಯ ಮೂರು ಹೊತ್ತು ಊಟ ಮಾಡಿಕೊಂಡು ಆರಾಮವಾಗಿದ್ದೇನೆ’ ಎಂದು ಸಂತಸದಿಂದ ಹೇಳುತ್ತಾರೆ ಯಲ್ಲಮ್ಮ ಅವರು.
‘ನರೇಗಾದಲ್ಲಿ ನಡೆಯುವ ಬಹಳಷ್ಟು ಕೆಲಸಗಳಲ್ಲಿ ಯುವಕರು, ಮಹಿಳೆಯರು ಹೆಚ್ಚಾಗಿ ಸುಸ್ತಾಗಿರುವುದನ್ನು ನೋಡಿದ್ದೇನೆ. ಆದರೆ ಯಲ್ಲಮ್ಮ ಇಳಿವಯಸ್ಸಿನಲ್ಲಿಯೂ ಆಯಾಸ ಪಡದೇ ಕೆಲಸ ಮಾಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ' ಎಂದು ನರೇಗಾ ಯೋಜನೆಯ ತಾಲ್ಲೂಕು ಐಇಸಿ ಸಂಯೋಜಕ ರಾಜೇಂದ್ರ ಕುಮಾರ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.