ADVERTISEMENT

ಬಿಜೆಪಿ ನಾಯಕರಿಗೆ ಸೋಲಿನ ಭೀತಿ: ಸಚಿವ ಎನ್.ಎಸ್.ಬೋಸರಾಜು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 13:32 IST
Last Updated 23 ಏಪ್ರಿಲ್ 2024, 13:32 IST
ಎನ್.ಎಸ್.ಬೋಸರಾಜು
ಎನ್.ಎಸ್.ಬೋಸರಾಜು   

ಮಾನ್ವಿ: ‘ಲೋಕಸಭಾ ಚುನಾವಣೆಯಲ್ಲಿ ಸೋಲುವ ಭೀತಿ, ಹತಾಶೆಯಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

‌ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು,‘ಮೊದಲ ಹಂತದಲ್ಲಿ 102 ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳಿಗೆ ಹಿನ್ನಡೆಯಾಗಿರುವುದು ತಿಳಿದು ಬಂದಿದೆ. ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ದೇಶದ ಸಂಪತ್ತು ಹಂಚುತ್ತದೆ. ಮಹಿಳೆಯರ ಮಂಗಳಸೂತ್ರ ಕಿತ್ತುಕೊಳ್ಳಲಿದೆ ಎಂದು ಕೀಳು‌ಮಟ್ಟದ ಮಾತುಗಳನ್ನಾಡಿದ್ದಾರೆ. ಚುನಾವಣಾ ಆಯೋಗ ಕೂಡಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

‘ಬರ ಪರಿಹಾರ ನೀಡುವಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಕೂಡಲೇ ಎನ್.ಡಿ.ಆರ್.ಎಫ್ ನಿಯಮಗಳ ಪ್ರಕಾರ ₹18,171 ಕೋಟಿ ಬರ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ ಪರವಾಗಿ ಒಂದು ಸುತ್ತಿನ ಪ್ರಚಾರ ಕಾರ್ಯ, ಮತಯಾಚನೆ ಮುಗಿದಿದೆ. ಎಲ್ಲಾ ಕಡೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಏ.26ರಂದು ಎರಡನೇ ಹಂತದ ಪ್ರಚಾರ ಕಾರ್ಯದ ಅಂಗವಾಗಿ ಮಾನ್ವಿ, ಹಿರೇಕೊಟ್ನೆಕಲ್, ಪೋತ್ನಾಳ, ಬಾಗಲವಾಡ, ಕವಿತಾಳ ಪಟ್ಟಣಗಳಲ್ಲಿ ಮತಯಾಚನೆ, ಬಹಿರಂಗ ಸಭೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಜಿ.ಹಂಪಯ್ಯ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರ್ ಸಾಬ್, ಮುಖಂಡರಾದ ಬಿ.ಕೆ.ಅಮರೇಶಪ್ಪ, ರಾಜಾ ವಸಂತ ನಾಯಕ, ಕೆ.ಬಸವಂತಪ್ಪ, ಖಾಲೀದ್ ಖಾದ್ರಿ, ರೌಡೂರು ಮಹಾಂತೇಶ ಸ್ವಾಮಿ, ಜಿ.ನಾಗರಾಜ, ಹನುಮೇಶ ಮದ್ಲಾಪುರ, ಹುಸೇನ್ ಬೇಗ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.