ಸಿಂಧನೂರು: ‘ನಿವೃತ್ತ ಎಂಜಿನಿಯರ್ ಕನ್ನಯ್ಯ ನಾಯ್ಡು ತುಂಗಭದ್ರಾ ಜಲಾಶಯದ 19ನೇ ಗೇಟ್ ದುರಸ್ತಿ ಮಾಡುವ ಮೂಲಕ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆ ಸೇರಿದಂತೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ರೈತರ ಹಿತರಕ್ಷಿಸಿದ ಭಾಗ್ಯದಾತರು’ ಎಂದು ಶಾಸಕ ಹಂಪನಗೌಡ ಬಾದರ್ಲಿ ಬಣ್ಣಿಸಿದರು.
ಇಲ್ಲಿಗೆ ಸಮೀಪದ ಯಲಮಂಚಾಲಿ ಕಮ್ಮವಾರಿ ಭವನದಲ್ಲಿ ಕಮ್ಮವಾರಿ ಸಂಘದ ತಾಲ್ಲೂಕು ಘಟಕದಿಂದ ಕಾರ್ತಿಕಮಾಸದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ವನಭೋಜನ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕನ್ನಯ್ಯ ನಾಯ್ಡು ದೇಶದ ನೂರಾರು ಜಲಾಶಯಗಳ ಗೇಟ್‌ಗಳ ಪರಿಶೀಲನೆ ಮತ್ತು ಅವುಗಳ ಸುಸ್ಥಿರತೆಗೆ ವಿಶೇಷ ಕೊಡುಗೆ ನೀಡಿದ್ದಾರೆ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಲೆಕ್ಕಿಸದೆ ಕರ್ನಾಟಕ ರಾಜ್ಯದ ಮನವಿಗೆ ಸ್ಪಂದಿಸಿ ತುಂಗಭದ್ರಾ ಜಲಾಶಯದ 19ನೇ ಗೇಟ್ ಅಳವಡಿಕೆಗೆ ಶ್ರಮಿಸಿದರು’ ಎಂದರು.
ಸಂಘದ ಅಧ್ಯಕ್ಷ ಬಿ.ಹರ್ಷ ಮಾತನಾಡಿ, ‘ಪಿ.ವಿ.ರಾವ್ ರಂಗಾಪುರ ಕ್ಯಾಂಪಿನಲ್ಲಿ ಬಹುದೊಡ್ಡ ಶಾಲಾ ಕಟ್ಟಡ ಕಟ್ಟಿಸಿ ಸರ್ಕಾರಕ್ಕೆ ದೇಣಿಗೆ ನೀಡಿದ್ದಾರೆ. ಕೃಷ್ಣದೇವರಾಯ ಸಂಸ್ಥೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಕೃಷ್ಣದೇವರಾಯ ವಿದ್ಯಾ ಸಂಸ್ಥೆಯ ಕಟ್ಟಡ ನಿರ್ಮಾಣ ಸೇರಿದಂತೆ ನೂರಾರು ಸೇವಾ ಕಾರ್ಯಗಳನ್ನು ಮಾಡುತ್ತಿರುವದಕ್ಕೆ ಸೇವಾ ರತ್ನ ಪ್ರಶಸ್ತಿ ನೀಡಲಾಗಿದೆ’ ಎಂದರು.
ಪಿ.ವಿ.ರಾವ್, ಚಲನಚಿತ್ರ ನಟ ಬಂಡ್ಲ ಗಣೇಶ ಮಾತನಾಡಿದರು. ಕಮ್ಮವಾರಿ ಸಂಘದಿಂದ ಕನ್ನಯ್ಯ ನಾಯ್ಡು ಅವರಿಗೆ ‘ಜಲರಕ್ಷಕ’ ಪ್ರಶಸ್ತಿ ಮತ್ತು ಗುತ್ತಿಗೆದಾರ ಪಿ.ವಿ.ರಾವ್ ಅವರಿಗೆ ‘ಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ಕೊಲ್ಲಾ ಶೇಷಗಿರಿರಾವ್, ಕಾಕತೀಯ ಕ್ಲಬ್ ಅಧ್ಯಕ್ಷ ಚಿಟ್ಟೂರಿ ಶ್ರೀನಿವಾಸ, ಶ್ರೀಕೃಷ್ಣ ದೇವರಾಯ ವಿದ್ಯಾಸಂಸ್ಥೆಯ ಅಧ್ಯಕ್ಷ ಪಿ.ವೆಂಕಟರಾವ್, ಗೌರವಾಧ್ಯಕ್ಷ ಬಲುಸು ಸುಬ್ರಮಣ್ಯಂ, ವ್ಯವಸ್ಥಾಪಕ ಅಧ್ಯಕ್ಷ ನವಭಾರತ ಸತ್ಯನಾರಾಯಣ, ನಲ್ಲ ವೆಂಕಟೇಶ್ವರರಾವ್ ಉಪಸ್ಥಿತರಿದ್ದರು. ವೆಂಕಟೇಶ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.