ಶಕ್ತಿನಗರ: ರಾಯಚೂರು ತಾಲ್ಲೂಕಿನ ಜಾಗೀರ ವೆಂಕಟಾಪುರ ಗ್ರಾಮದ ರೈತ ತಿಪ್ಪಣ್ಣ ಮಣ್ಣು ಹಾಗೂ ನೀರಿನ ಸಂರಕ್ಷಣೆ ಗಾಗಿ ನರೇಗಾ ಯೋಜನೆಯಡಿ ತಮ್ಮ ಹೊಲದಲ್ಲಿ ಕಂದಕ ತೆಗೆದಿದ್ದಾರೆ.
ಬದುವಿಗೆ ಮಣ್ಣು ಹಾಕಿದ್ದರಿಂದ ಬದು ಗಟ್ಟಿಯಾಗಿದೆ. ಕದಕಗಳಲ್ಲಿ ನೀರು ತುಂಬಿಕೊಂಡಿದೆ. ಮಣ್ಣು ನೀರನ್ನು ಹೀರಿಕೊಳ್ಳು ವುದರಿಂದ ಕಡಿಮೆ ಮಳೆಯಾದರೂ ತೇವಾಂಶ ಕಡಿಮೆಯಾಗುವುದಿಲ್ಲ. ಕೆಲಸ ಮಾಡಿದವರಿಗೆ ಕೂಲಿ ಹಣವೂ ದೊರೆತಿದೆ.
ಏನಿದು ಕಾಮಗಾರಿ: ನರೇಗಾ ಯೋಜನೆಯಡಿ ರೈತರು ತಮ್ಮ ಹೊಲದಲ್ಲಿ ಬದು ನಿರ್ಮಾಣ ಮಾಡಬಹುದು. ಆಗ ಗುಂಡಿಗಳಲ್ಲಿ ಮಳೆ ನೀರು ಶೇಖರಣೆಯಾಗಿ ಅಂತರ್ಜಲ ಮಟ್ಟ ಹೆಚ್ಚಳ ಮತ್ತು ಮಣ್ಣಿನ ಸಂರಕ್ಷಣೆ ಜೊತೆಗೆ ರೈತರಿಗೆ ಸಾಕಷ್ಟು ಪ್ರಯೋಜನಗಳು ಲಭಿಸಲಿವೆ.
ರೈತರು ಒಂದು ಎಕರೆಯಲ್ಲಿ 15 ಕಂದಕ ಬದುಗಳನ್ನು ತೆಗೆಯಲು ₹14,449 ಸಾವಿರ ಕೂಲಿ ಹಣ ಹಾಗೂ ₹2,500 ಸಾಮಗ್ರಿ ವೆಚ್ಚ ನೀಡಲಾಗುತ್ತದೆ. ಉದ್ಯೋಗ ಚೀಟಿದಾರರಿಗೆ ಉದ್ಯೋಗವನ್ನೂ ಕಲ್ಪಿಸಲಾಗುತ್ತದೆ.
ಗುಂಡಿ ವಿನ್ಯಾಸ: 15 ಅಡಿ ಉದ್ದ, 3 ಅಡಿ ಆಗಲ, 2 ಅಡಿ ಆಳ ಗುಂಡಿ ತೆಗೆಯಬೇಕು. ಒಂದು ಎಕೆರೆಯಲ್ಲಿ 15 ಗುಂಡಿಗಳನ್ನು ತೆಗೆಯಬಹುದು.
ಬದು ನಿರ್ಮಾಣದ ಅನುಕೂಲಗಳು: ಮಣ್ಣಿನ ಸವಕಳಿ ನಿಯಂತ್ರಿಸುತ್ತದೆ. ತೇವಾಂಶ ಹೆಚ್ಚಾಗುವುದರಿಂದ ಶೇ 10ರಿಂದ 15ರಷ್ಟು ಹೆಚ್ಚಿನ ಇಳುವರಿ ಬರುತ್ತದೆ. ಒಂದು ಕಂದಕ ಬದುವಿನಲ್ಲಿ ಸುಮಾರು 3 ಸಾವಿರ ಲೀಟರ್‌ನಂತೆ 45,000 ಲೀಟರ್ ನೀರು ಭೂಮಿಯಲ್ಲಿ ಇಂಗುವ ಮೂಲಕ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ.
ಬದುಗಳ ಮೇಲೆ ತೋಟಗಾರಿಕೆ, ಅರಣ್ಯ ಸಸಿಗಳನ್ನು ನಾಟಿ ಮಾಡಿದಲ್ಲಿ ಬದುಗಳ ಸ್ಥಿರೀಕರಣ ಹಾಗೂ ಅದಾಯ ಹೆಚ್ಚಿಸಿಕೊಳ್ಳಬಹುದಾಗಿದೆ.
ನರೇಗಾ ಯೋಜನೆಯ ವೈಯಕ್ತಿಕ ಕಾಮಗಾರಿಯಡಿ ರೈತರು ತಮ್ಮ ಹೊಲದಲ್ಲಿ ಬದು ನಿರ್ಮಾಣ ಮಾಡಿಕೊಳ್ಳುವುದರಿಂದ ಮಣ್ಣು ಮತ್ತು ನೀರು ಸಂರಕ್ಷಣೆ, ಅಂತರ್ಜಲ ಮಟ್ಟ ಹೆಚ್ಚಳ ಹಾಗೂ ಉತ್ತಮ ಇಳುವರಿಗೆ ಸಹಕಾರಿಯಾಗಲಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.