ADVERTISEMENT

ಸೈಬರ್ ವಂಚನೆ | ಮೊಬೈಲ್ ಆ್ಯಪ್ ಹ್ಯಾಕ್: 40ಕ್ಕೂ ಹೆಚ್ಚು ಪ್ರಕರಣ

ಬ್ಯಾಂಕ್ ಗ್ರಾಹಕರ ನಿದ್ದೆಗೆಡಿಸಿದ ಸೈಬರ್ ವಂಚನೆ

​ಪ್ರಜಾವಾಣಿ ವಾರ್ತೆ
Published 15 ಮೇ 2024, 14:29 IST
Last Updated 15 ಮೇ 2024, 14:29 IST
ಮೊಬೈಲ್ ಆ್ಯಪ್
ಮೊಬೈಲ್ ಆ್ಯಪ್   

ಮಸ್ಕಿ: ಆನ್‌ಲೈನ್‌ ಬ್ಯಾಂಕಿಂಗ್‌ ಮೊಬೈಲ್ ಆ್ಯಪ್‌ಗಳನ್ನು ಹ್ಯಾಕ್ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ ಪ್ರಕರಣ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಬ್ಯಾಂಕ್ ಗ್ರಾಹಕರು ಆತಂಕಗೊಂಡಿದ್ದಾರೆ.

ಸೈಬರ್ ವಂಚಕರ ಜಾಲ ಬ್ಯಾಂಕ್ ಖಾತೆಯ ವಿವರಗಳನ್ನು ಹಾಗೂ ಮೊಬೈಲ್ ಆ್ಯಪ್ ಹ್ಯಾಕ್ ಮಾಡಿ ಗ್ರಾಹಕರ ಖಾತೆಯಲ್ಲಿನ ಹಣ ಕದ್ದಿರುವುದು ಬಹಿರಂಗವಾಗಿದೆ.

ಕೆನರಾ ಬ್ಯಾಂಕ್‌ನ ಆ್ಯಪ್ ಹ್ಯಾಕ್ ಮಾಡಲಾಗಿದ್ದು, ಗ್ರಾಹಕರು ತಮ್ಮ ತಮ್ಮ ಆ್ಯಪ್‌ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಇಕ್ಕಳಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ಬಸವ ಜಯಂತಿ ಅಂಗವಾಗಿ ಸಾಲು ಸಾಲು ರಜೆ ಇದ್ದ ಕಾರಣ ಸೈಬರ್ ವಂಚಕರು ಬ್ಯಾಂಕ್‌ ಖಾತೆಗಳಲ್ಲಿಯ ಹಣ ದೋಚಿದ್ದಾರೆ.

ಪಟ್ಟಣದ ಸರ್ಕಾರಿ ಕಾಲೇಜಿನ ಉಪನ್ಯಾಸಕರೊಬ್ಬರ ಮೊಬೈಲ್ ಆ್ಯಪ್ ಹ್ಯಾಕ್ ಆಗಿದ್ದು, ಸಂದೇಶದಲ್ಲಿ ಬಂದ ಲಿಂಕ್ ಒತ್ತಿದ್ದರಿಂದ ವಂಚಕರು ಖಾತೆಯಿಂದ ₹3.5 ಲಕ್ಷ ಲಪಟಾಯಿಸಿದ್ದಾರೆ. ಗುಡದೂರು ಕಾಲೇಜಿನ ಉಪನ್ಯಾಸಕರೊಬ್ಬರ ಖಾತೆಯಿಂದ ₹2.25 ಲಕ್ಷ ಎಗರಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯೊಬ್ಬರು ಸೈಬರ್ ಜಾಲದ ವಂಚನೆಗೆ ಒಳಗಾಗಿ ₹2 ಲಕ್ಷ ಕಳೆದುಕೊಂಡಿದ್ದಾರೆ.

ಇಂಥ ಹತ್ತಾರು ಪ್ರಕರಣಗಳು ನಡೆದಿದ್ದು ಖದೀಮರು ಸುಮಾರು ₹70 ಲಕ್ಷ ದೋಚಿಸಿದ್ದಾರೆ ಎನ್ನಲಾಗುತ್ತಿದೆ.

ಮಸ್ಕಿ ಪೊಲೀಸ್ ಠಾಣೆಯಲ್ಲಿ 40 ವಂಚನೆ ಪ್ರಕರಣಗಳು ದಾಖಲಾಗಿವೆ.

ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮಾಡುವವರು ಕೂಡಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ತಮ್ಮ ಹತ್ತಿರದ ಬ್ಯಾಂಕ್‌ಗೆ ಹೋಗಿ ತಾತ್ಕಾಲಿಕವಾಗಿ ಆನ್‌ಲೈನ್ ಹಣಕಾಸು ವ್ಯವಹಾರ ನಿಲ್ಲಿಸಬೇಕು ಎಂದು ಸರ್ಕಲ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಇಕ್ಕಳಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.