ADVERTISEMENT

ಜಾಲಹಳ್ಳಿ | ನಾಲೆಗಳ ಆಧುನೀಕರಣ ಸ್ಥಗಿತ: ರೈತರಲ್ಲಿ ಆತಂಕ

ದೇವದುರ್ಗ ತಾಲ್ಲೂಕಿನ ಜೀವನಾಡಿ ನಾರಾಯಣಪುರ ಬಲದಂಡೆ ಕಾಲುವೆ

ಅಲಿಬಾಬಾ ಪಟೇಲ್
Published 21 ಮೇ 2024, 5:26 IST
Last Updated 21 ಮೇ 2024, 5:26 IST
ಜಾಲಹಳ್ಳಿ ಸಮೀಪದ ನಾರಾಯಣಪುರ ಬಲದಂಡೆ ಕಾಲುವೆಯ ವಿತರಣಾ ಕಾಲುವೆಯಲ್ಲಿ ಗಿಡ–ಗಂಟಿ ಬೆಳೆದಿರುವುದು
ಜಾಲಹಳ್ಳಿ ಸಮೀಪದ ನಾರಾಯಣಪುರ ಬಲದಂಡೆ ಕಾಲುವೆಯ ವಿತರಣಾ ಕಾಲುವೆಯಲ್ಲಿ ಗಿಡ–ಗಂಟಿ ಬೆಳೆದಿರುವುದು   

ಜಾಲಹಳ್ಳಿ: ದೇವದುರ್ಗ ತಾಲ್ಲೂಕಿನ ಜೀವನಾಡಿಯಾದ ನಾರಾಯಣಪುರ ಬಲದಂಡೆ ಕಾಲುವೆಯ ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿ ಬಹುತೇಕ ಸ್ಥಗಿತವಾಗಿರುವ ಕಾರಣ ರೈತರಲ್ಲಿ ಆತಂಕ ಮನೆ ಮಾಡಿದೆ.

ಎರಡು ವರ್ಷಗಳ ಹಿಂದೆಯೇ ಕೃಷ್ಣಾ ಭಾಗ್ಯ ಜಲ ನಿಗಮದ ಉಪ ವಿಭಾಗ ಸಂಖ್ಯೆ-5ರ ಅಡಿಯಲ್ಲಿ ಬರುವ 9ರಿಂದ 14ನೇ ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿಯನ್ನು ಸುಮಾರು ₹760 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಕಾಲುವೆಗಳ ಆಧುನೀಕರಣ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ. ಶೇ 20ರಷ್ಟು ಕಾಮಗಾರಿ ಬಾಕಿ ಇದೆ. ಬಹುತೇಕ ವಿತರಣಾ ಕಾಲುವೆಗಳ ಆಧುನೀಕರಣ ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 40 ಲ್ಯಾಟ್ರಲ್ ಕಾಲುವೆಗಳ (114 ಕಿ.ಮೀ ) ಕಾಮಗಾರಿ ಬಾಕಿ ಉಳಿದಿದೆ.

ಜಾಲಹಳ್ಳಿ ವ್ಯಾಪ್ತಿಯ 9ನೇ ವಿತರಣಾ ಕಾಲುವೆ ಅಡಿ ಬರುವ ಬಿ.ಡಿ-2 ಕಾಲುವೆಯ ಉಪ ಕಾಲುವೆ ಸಂಖ್ಯೆ–9 ಮುದ್ದಗೋಟ, ಚಪ್ಪಳಕಿ, ಹಂಪರಗುಂದಿ ಸೀಮೆಯಲ್ಲಿರುವ ಸಾವಿರಾರು ಎಕರೆ ಕೃಷಿ‌ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುತ್ತದೆ. ಈ ಕಾಲುವೆ ಸುಮಾರು ಏಳು ಕಿ.ಮೀ ಉದ್ದ ಇದ್ದು, ಇದರ ವ್ಯಾಪ್ತಿಗೆ 7 ಲ್ಯಾಟ್ರಲ್‌ಗಳು ಕೂಡ ಬರುತ್ತವೆ. ಅವು ಕೂಡ ಆಧುನೀಕರಣಗೊಂಡಿಲ್ಲ.

ADVERTISEMENT

ಮೂರು ವರ್ಷಗಳಿಂದ ಕಾಲುವೆಯಲ್ಲಿನ ಹೂಳು ತೆಗೆಯದ ಕಾರಣ ಗಿಡ–ಗಂಟಿ ಬೆಳೆದು ನಿಂತಿದೆ. ನೀರು ಸರಾಗವಾಗಿ ಹರಿಯುವುದಿಲ್ಲ. ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಇದರಿಂದ ಕಾಲುವೆ ಕೊನೆ ಭಾಗದ ರೈತರು ಅನೇಕ ವರ್ಷಗಳಿಂದ‌ ಹಿಂಗಾರು ಬೆಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ.

ಈಗಾಗಲೇ ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ ಆಧುನೀಕರಣಕ್ಕೆ ಒಟ್ಟು ₹906 ಕೋಟಿ ವೆಚ್ಚ ಮಾಡಲಾಗಿದೆ. ವಿತರಣಾ ಕಾಲುವೆ ಹಾಗೂ ಲ್ಯಾಟ್ರಲ್ ಕಾಲುವೆಗಳ ನವೀಕರಣಕ್ಕೆ ಒಟ್ಟು ₹1,466 ಕೋಟಿ ವೆಚ್ಚ ಮಾಡಲಾಗಿದೆ. ಅದರೂ ದೇವದುರ್ಗ ತಾಲ್ಲೂಕಿನ ಕಾಲುವೆಯ ಕೊನೆ ಭಾಗದ ಕೆಲವು ಗ್ರಾಮಗಳ ರೈತರ ಜಮೀನುಗಳಿಗೆ ನೀರು ತಲುಪಿಲ್ಲ.

ಅಮರಾಪುರ ಕ್ರಾಸ್ ಬಳಿ ಇರುವ ನೀರಾವರಿ ನಿಗಮದ ವಿಭಾಗ ಸಂಖ್ಯೆ–14 ಹಾಗೂ 19ರ ಕಚೇರಿಯಲ್ಲಿ ಒಟ್ಟು 10 ಜನ ಎಂಜಿನಿಯರ್‌ಗಳು ಇರಬೇಕು. ಕೇವಲ ಐವರು ಕೆಲಸ ಮಾಡುತ್ತಿದ್ದಾರೆ. 5 ಹುದ್ದೆಗಳು ಖಾಲಿ ಇವೆ.

ಕಾಲುವೆಗಳ ಆಧುನೀಕರಣಕ್ಕೆ ಮಂಜೂರಾದ ಹಣದಲ್ಲಿ ಗುತ್ತಿಗೆದಾರರು ಕಾಮಗಾರಿ ಮಾಡಿದ್ದಾರೆ. ಉಳಿದ ಕಾಮಗಾರಿ ಕೈಗೆತ್ತಿಕೊಳ್ಳಲು ನಿಗಮವು ಕೇಂದ್ರ ಜಲ ಸಂಪನ್ಮೂಲ ಇಲಾಖೆಗೆ ಕ್ರಿಯಾ ಯೋಜನೆ ಕಳಿಸಿದೆ. ಹಣ ಮಂಜೂರಾದ ಕೂಡಲೇ ಟೆಂಡರ್ ಕರೆದು ಕೆಲಸ ಕೈಗೆತ್ತಿಕೊಳ್ಳಲಾಗುವುದು

-ಎಂ.ಎಸ್‌.ಭಜಂತ್ರಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೃಷ್ಣಾ ಭಾಗ್ಯ ಜಲ ನಿಗಮ ಅಮರಾಪುರ ಕ್ರಾಸ್

ಮೂರು ವರ್ಷಗಳಿಂದ ನೀರಾವರಿ ನಿಗಮದ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಶಾಸಕರಿಗೆ ಮುದ್ದಗೋಟ್ ಗ್ರಾಮಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಕಾಲುವೆ ದುರಸ್ತಿ ಮಾಡಿಸುವಂತೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ

-ಬಸವರಾಜ ತೇಕೂರ್ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.