ADVERTISEMENT

ಕೊಳಗೇರಿ ಜನರಿಗೆ ಮೋದಿ ಸರ್ಕಾರ ಕೊಡುಗೆ ಶೂನ್ಯ: ಎ.ನರಸಿಂಹಮೂರ್ತಿ

ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2024, 15:55 IST
Last Updated 22 ಏಪ್ರಿಲ್ 2024, 15:55 IST
ರಾಯಚೂರಿನ ಕನ್ನಡ ಭವನದಲ್ಲಿ ಸೋಮವಾರ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಹಾಗೂ ಸ್ಲಂ ಜನಾಂದೋಲನ ಕರ್ನಾಟಕದ ವತಿಯಿಂದ ಆಯೋಜಿಸಿದ್ದ ‘ಭಾರತ ಸಂವಿಧಾನ ರಕ್ಷಣೆಗಾಗಿ ಸ್ಲಂ ಜನರ ಮತ ಜಾಗೃತಿ ಜಾಥಾದ ಕರಪತ್ರ ಹಾಗೂ ಸ್ಟಿಕ್ಕರ್ ಬಿಡುಗಡೆ ಮಾಡಲಾಯಿತು
ರಾಯಚೂರಿನ ಕನ್ನಡ ಭವನದಲ್ಲಿ ಸೋಮವಾರ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಹಾಗೂ ಸ್ಲಂ ಜನಾಂದೋಲನ ಕರ್ನಾಟಕದ ವತಿಯಿಂದ ಆಯೋಜಿಸಿದ್ದ ‘ಭಾರತ ಸಂವಿಧಾನ ರಕ್ಷಣೆಗಾಗಿ ಸ್ಲಂ ಜನರ ಮತ ಜಾಗೃತಿ ಜಾಥಾದ ಕರಪತ್ರ ಹಾಗೂ ಸ್ಟಿಕ್ಕರ್ ಬಿಡುಗಡೆ ಮಾಡಲಾಯಿತು   

ರಾಯಚೂರು: ‘ಕೇಂದ್ರದ ನರೇಂದ್ರ ಮೋದಿ ಸರ್ಕಾರ 10 ವರ್ಷದ ಆಡಳಿತದಲ್ಲಿ ಸ್ಲಂ ಜನರಿಗೆ ಶೂನ್ಯ ಕೊಡುಗೆ ನೀಡಿದೆ. ನಾಗರಿಕರ ಹಕ್ಕುಗಳನ್ನು ಕಸಿದುಕೊಂಡು ಕಾರ್ಪೊರೇಟ್‌ಗಳ ಪರ ಆಡಳಿತ ನಡೆಸಿದೆ’ ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಸಂಚಾಲಕ ಎ.ನರಸಿಂಹಮೂರ್ತಿ ವಾಗ್ದಾಳಿ ನಡೆಸಿದರು.

ನಗರದ ಕನ್ನಡ ಭವನದಲ್ಲಿ ಸೋಮವಾರ ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಹಾಗೂ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ವತಿಯಿಂದ ಆಯೋಜಿಸಲಾಗಿದ್ದ ‘ಭಾರತ ಸಂವಿಧಾನ ರಕ್ಷಣೆಗಾಗಿ ಸ್ಲಂ ಜನರ ಮತ ಜಾಗೃತಿ ಜಾಥಾ’ಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಬಡವರ ಆದಾಯ ಕಡಿಮೆಯಾದರೂ ಖರ್ಚು ಜಾಸ್ತಿಯಾಗುತ್ತಾ ಹೋಗಿದೆ. ಪಿಎಂಎವೈ ಯೋಜನೆ ಬಡವರ ವಿರೋಧಿಯಾಗಿದ್ದು, ದೇಶದ 40 ಕೋಟಿ ಜನರಿಗೆ ಮನೆ ಇಲ್ಲ. ಆದರೆ 10 ವರ್ಷಗಳಲ್ಲಿ 2 ಕೋಟಿ ಜನರಿಗೆ ತಲಾ ₹1.50 ಲಕ್ಷ ಸಬ್ಸಿಡಿ ನೀಡಿದೆ. ಅದರಲ್ಲಿ ₹1.30 ಲಕ್ಷ ಜಿಎಸ್‌ಟಿ ಮೂಲಕ ಲೂಟಿ ಮಾಡಿದೆ’ ಎಂದು ದೂರಿದರು.

ADVERTISEMENT

‘ನಮಗೆ ಬೇಕಿರುವುದು ಮೋದಿ ಗ್ಯಾರಂಟಿಗಳಲ್ಲ. ಸಂವಿಧಾನದ ರಕ್ಷಣೆಯ ಗ್ಯಾರಂಟಿ ಬೇಕಿದೆ. ದೇಶದ ಅಭಿವೃದ್ಧಿಯ ಆಯಾಮದಲ್ಲಿ ಲೋಕಸಭಾ ಚುನಾವಣೆ ನಡೆಯದೇ ವ್ಯಕ್ತಿ ಕೇಂದ್ರಿತ ಮೋದಿಕರಣದಲ್ಲಿ ಚುನಾವಣೆ ನಡೆಯುತ್ತಿರುವುದು ವಿಪರ್ಯಾಸ’ ಎಂದು ಕಳವಳ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಸ್ಲಂ ಕ್ರಿಯಾ ವೇದಿಕೆಯ ರಾಜ್ಯ ಮುಖಂಡ ಕೆ.ಪಿ ಅನೀಲಕುಮಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಅಧ್ಯಕ್ಷ ಜನಾರ್ದನ ಹಳ್ಳಿಬೆಂಚಿ, ನೂರ್ ಜಹಾನ್, ನಾಗರಾಜ, ವೆಂಕಟೇಶ ಭಂಡಾರಿ, ಶರಣಬಸವ ರೆಡ್ಡಿ, ಮಣಿಕಂಠ ಸೇರಿದಂತೆ ವಿವಿಧ ಕೊಳೆಗೇರಿ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದರು.

ನಾಗರಾಜ ಸ್ವಾಗತಿಸಿದರು. ಬಸವರಾಜ ಹೊಸೂರು ನಿರೂಪಿಸಿದರು. ಪವನಕುಮಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.