ರಾಯಚೂರು: ರಾಷ್ಟ್ರೀಯ ಹೆದ್ದಾರಿ 748 ಎ ಬೆಳಗಾವಿ–ರಾಯಚೂರು ಹೆದ್ದಾರಿ ವಿಸ್ತರಣೆಯಲ್ಲಿ ಭೂಮಿ ಕಳೆದುಕೊಂಡವರ ಬದಲಿಗೆ ಅನ್ಯರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದ್ದು, ಇದೀಗ ಅದನ್ನು ವಸೂಲಿ ಮಾಡಲು ಅಧಿಕಾರಿಗಳು ಪರದಾಡುತ್ತಿದ್ದಾರೆ.
ವಿಶೇಷ ಭೂಸ್ವಾಧೀನ ಅಧಿಕಾರಿಗಳು ಸರಿಯಾಗಿ ದಾಖಲೆಗಳ ಪರಿಶೀಲನೆ ಮಾಡದೆ ಪರಿಹಾರ ಹಣವನ್ನು ಬೇರೆಯವರ ಖಾತೆಗೆ ಜಮಾ ಮಾಡಿ ಎಡವಟ್ಟು ಮಾಡಿದ್ದಾರೆ. ಹಣ ಪಡೆದವರೂ ಮರಳಿಸಲು ಸಿದ್ಧರಿಲ್ಲದ ಕಾರಣ ಅಧಿಕಾರಿಗಳು ಐವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ.
ವಿಶೇಷ ಭೂಸ್ವಾಧೀನ ಅಧಿಕಾರಿ ನೋಟಿಸ್ ನೀಡಿದರೂ ಸರ್ಕಾರದ ಹಣ ಮರಳಿಸದ ಕಾರಣ ಜಂಟಿ ಖಾತೆದಾರರಾದ ಸಿದ್ದನಗೌಡ, ರುದ್ರಗೌಡ, ಶಂಕರಗೌಡ ಸೇರಿ ಇದಕ್ಕೆ ಕುಮ್ಮಕ್ಕು ನೀಡಿದ ಹಿರೇಹಣಗಿ ಪ್ರಾಥಮಿಕ ಶಾಲಾ ಶಿಕ್ಷಕ ಅಮರೇಶ, ವಿನಯ ಕುಮಾರ ವಿರುದ್ಧ ನೇತಾಜಿ ಪೋಲಿಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ (1860) 420, 406, 149 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸಿರವಾರ ತಾಲ್ಲೂಕಿನ ಪಾತಾಪುರ ಗ್ರಾಮದ ಸರ್ವೆ ನಂ 35/2ರಲ್ಲಿ ವಿತರಿಸಿದ ಭೂ ಪರಿಹಾರ ಹಣವನ್ನು ಪಿ. ಸಿದ್ದನಗೌಡ, ರುದ್ರಗೌಡ, ಶಂಕರಗೌಡ ಅವರ ಒಪ್ಪಂದದಂತೆ ಮೂವರ ಜಂಟಿ ಖಾತೆಗೆ 2023ರ ಅಕ್ಟೋಬರ್ 9ರಂದು ರಂದು ₹ 1,19,64,711 ಜಮಾ ಮಾಡಲಾಗಿದೆ. ಇದರಲ್ಲಿ ಪಾತಾಪೂರು ಗ್ರಾಮದ ಶ್ರೀದೇವಿ ಮಲ್ಲಯ್ಯ ಸ್ವಾಮಿ ಅವರಿಗೆ ಸೇರಿದ್ದ ₹ 43,47,310 ಮನೆಯ ಪರಿಹಾರ ಹಣ ಹಾಗೂ ಉಟಗನೂರು ಬಸವಲಿಂಗ ತಾತಾ ದೇವಸ್ಥಾನ ಪರಿಹಾರ ಹಣವನ್ನು ತೆಗೆದುಕೊಂಡಿರುವುದು ಪೊಲೀಸ್ ವಿಚಾರಣೆಯ ಸಂದರ್ಭದಲ್ಲಿ ಬಹಿರಂಗವಾಗಿದೆ.
ಇದರಲ್ಲಿ ಅವಾರ್ಡ್ ಪುಸ್ತಕದಂತೆ ಸಿದ್ದನಗೌಡ ಅವರು ಶೇಕಡ 10ರಷ್ಟು ಟಿಡಿಎಸ್ ಹೊರತುಪಡಿಸಿ ₹ 67 ಲಕ್ಷ ತೆಗೆದುಕೊಳ್ಳಬೇಕಾಗಿತ್ತು. ಆದರೆ, ಹಣ ಜಂಟಿ ಖಾತೆಗೆ ವರ್ಗಾವಣೆಯಾದ ಮರುದಿನವೇ ಶ್ರೀದೇವಿ ಮಲ್ಲಯ್ಯ ಸ್ವಾಮಿ ಅವರಿಗೆ ಸೇರಿದ ಪರಿಹಾರ ಹಣ ಸೇರಿ ಒಟ್ಟು ₹ 95 ಲಕ್ಷ ಹಣವನ್ನು ತನ್ನ ಖಾಸಗಿ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಅಲ್ಲದೆ ರಾಜಶೇಖರ ತೋರಗಲ್ ಎನ್ನೂವವರಿಗೂ ₹ 11,66,000 ವರ್ಗಾಯಿಸಿರುವುದು ಜಂಟಿ ಬ್ಯಾಂಕ್ ಖಾತೆಯ ವಿವರದಿಂದ ತಿಳಿದು ಬಂದಿದೆ. ಪ್ರಕರಣದ ವಿಚಾರಣೆಯಲ್ಲಿ ರಾಜಶೇಖರ ತೋರಗಲ್, ಹಣ ವರ್ಗಾಯಿಸಿದ ಅಂದಿನ ವಿಶೇಷ ಭೂಸ್ವಾಧೀನ ಅಧಿಕಾರಿ ಹರ್ಷಾ ಶೆಟ್ಟಿ ಸೇರಿ ತಪ್ಪಿತಸ್ಥರ ವಿರುದ್ಧವೂ ಪ್ರಕರಣ ದಾಖಲು ಮಾಡಲು ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಹಣ ಕೊಡದಿರುವ ಬಗ್ಗೆ ತಕರಾರು ಬಂದಾಗ ವಿಶೇಷ ಭೂಸ್ವಾಧಿನ ಅಧಿಕಾರಿ ರಾಜಕುಮಾರ ಜಾಧವ ಸ್ಥಳಕ್ಕೆ ಭೇಟಿ ನೀಡಿ ವಿಚಾರಿಸಿದ್ದರು. ಹೆಚ್ಚುವರಿಯಾಗಿ ಪಡೆದ ಹಣವನ್ನು ಮರಳಿ ಕಾರ್ಯಾಲಯಕ್ಕೆ ಡಿಡಿ ಮುಖಾಂತರ ನೀಡುವಂತೆ ಜಂಟಿ ಖಾತೆದಾರರಿಗೆ ಸೂಚಿಸಿದರೂ ಮರಳಿಸಿಲ್ಲ.
ಶ್ರೀದೇವಿ ಮಲ್ಲಯ್ಯ ಸ್ವಾಮಿ ಅವರ ಆಸ್ತಿ ಮಾಲೀಕತ್ವದ ದೃಢೀಕರಣಕ್ಕಾಗಿ, ತಹಶೀಲ್ದಾರ್ ದಾಖಲಾತಿ ವರದಿ, ಸ್ಥಳ ಪರಿಶೀಲಿಸಿ ಪಂಚನಾಮೆ ವರದಿ, ಗ್ರಾಮ ಪಂಚಾಯಿತಿ ದಾಖಲೆಗಳು ಹಾಗೂ ವಿಶೇಷ ಭೂ–ಸ್ವಾಧೀನ ಅಧಿಕಾರಿ ಅವರ ಸ್ಥಾನಿಕ ವರದಿಯಿಂದ ಶ್ರೀದೇವಿಯವರ ಮನೆಯ ಪರಿಹಾರ ಹಣವೂ ಇದರಲ್ಲಿ ಸೇರಿರುವುದು ವಿಶೇಷ ಭೂಸ್ವಾಧೀನ ಅಧಿಕಾರಿಗಳ ಆದೇಶದಿಂದ ದೃಢವಾಗಿದೆ.
ವಿಶೇಷ ಭೂ–ಸ್ವಾಧೀನ ಅಧಿಕಾರಿಗಳು ವಿಚಾರಣೆ ನಂತರ ಹಣವನ್ನು ಹಿಂದಿರುಗಿಸುವಂತೆ ಆದೇಶಿಸಿ ಒಂದು ವಾರದೊಳಗಾಗಿ ಹಣ ಕಾರ್ಯಾಲಯಕ್ಕೆ ನೀಡುವಂತೆ ಸಿರವಾರ ತಹಶೀಲ್ದಾರ್ ಮೂಲಕ ನೋಟಿಸ್ ಜಾರಿ ಮಾಡಿದ್ದಾರೆ. ಹಣ ಪಡೆದವರು ಇದಕ್ಕೆ ಪ್ರತಿಕ್ರಿಯಿಸದ ಕಾರಣ ವಂಚನೆ ಪ್ರಕರಣ ದಾಖಲೆಯಾಗಿದೆ.
‘ವಿಶೇಷ ಭೂ ಸ್ವಾಧೀನ ಅಧಿಕಾರಿ ಹರ್ಷಾ ಶೆಟ್ಟಿ ಅವಾರ್ಡ್ ಮಾಡಿರುವುದು ಲೋಪಗಳಿಂದ ಕೂಡಿದ್ದಲ್ಲದೆ ಜೆಎಂಸಿ ಸರ್ವೆ ಮಾಡದೆ ಇರುವುದರಿಂದ ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿದೆ. 2013 ಭೂ ಸ್ವಾಧೀನ ಹೊಸ ಕಾಯ್ದೆಯ ಪ್ರಕಾರ ಜೆಎಂಸಿ (ಜಂಟಿ ಭೂ-ಮಾಪನಾ ಸರ್ವೆ) ವರದಿಯಾದರಿಸಿ ಪರಿಹಾರ ಹಣ ನೀಡಬೇಕು ಎಂಬ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ. ಡಿಶಾಂಕ್ ಎಂಬ ಖಾಸಗಿ ಆ್ಯಪ್ ಬಳಸಿ ಹಣ ಪಾವತಿಸಲಾಗಿದೆ’ ಎಂದು ಶ್ರೀದೇವಿ ಮಲ್ಲಯ್ಯ ಸ್ವಾಮಿ ದೂರಿದ್ದಾರೆ.
‘ಹೆದ್ದಾರಿ ವಿಸ್ತರಣೆಯ ಕಾರಣ ನಿಮ್ಮ ಮನೆ ತೆರವುಗೊಳಿಸಲಿದ್ದೇವೆ. ಸರ್ಕಾರದಿಂದ ನಿಮಗೆ ಪರಿಹಾರ ಬಿಡುಗಡೆಯಾಗಿದೆ. ಜಂಟಿ ಖಾತೆದಾರರಾದ ಸಿದ್ಧನಗೌಡರು ಹಣ ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ ಮೇಲೆಯೇ ನನಗೆ ವಿಷಯ ಗೊತ್ತಾಗಿದೆ. ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಿಜವಾದ ಸಂತ್ರಸ್ತರಿಗೆ ಪರಿಹಾರ ಕೊಡಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಭೂಮಿ ಕಳೆದುಕೊಂಡ ಸಂತ್ರಸ್ತರ ಪರಿಹಾರ ಹಣ ಬೇರೆಯವರ ಖಾತೆಗೆ ಜಮಾ ಆಗಿದ್ದು ಪ್ರಕರಣವೂ ದಾಖಲಾಗಿದೆ. ಹಣ ಮರಳಿ ಪಡೆಯುವ ಪ್ರಕ್ರಿಯೆ ಮುಂದುವರಿದಿದೆ.ಶಿವಪ್ಪ ಭಜಂತ್ರಿ ಹೆಚ್ಚುವರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.