ಮುದಗಲ್: ಹೋಬಳಿಯಲ್ಲಿ ದಾಳಿಂಬೆ ವಿಸ್ತೀರ್ಣ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದ್ದು, ರೈತರು ಪರ್ಯಾಯ ಬೆಳೆಗಳತ್ತ ಚಿಂತನೆ ನಡೆಸಿದ್ದಾರೆ.
2021–22ನೇ ಸಾಲಿನಲ್ಲಿ 288 ಹೆಕ್ಟೇರ್ ಇದ್ದ 2022-23ನೇ ಸಾಲಿನಲ್ಲಿ 225 ಹೆಕ್ಟೇರ್‌ಗೆ ಇಳಿಕೆಯಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ದಾಳಿಂಬೆ ಬೆಳೆಗೆ ಹಾನಿಯಾಗುತ್ತಿದ್ದು, ರೋಗಗಳು ಹೆಚ್ಚಾಗಿ ಕಾಡುತ್ತಿವೆ. ಇದಕ್ಕೆ ಪರ್ಯಾಯವಾಗಿ ಪಪ್ಪಾಯಿ, ಮಾವು, ಕಬ್ಬು, ಸೂರ್ಯಕಾಂತಿ, ಶೇಂಗಾ ಬೆಳೆಗಳತ್ತ ರೈತರು ಚಿತ್ತ ನೆಟ್ಟಿದ್ದಾರೆ.
ದಾಳಿಂಬೆ ಬೆಳೆಯಲ್ಲಿ ಕಾಣಿಸಿಕೊಳ್ಳುವ ದುಂಡಾಣು ಅಂಗಮಾರಿ (ಚುಕ್ಕಿ) ರೋಗವು ಅನೇಕ ವರ್ಷಗಳಿಂದ ದಾಳಿಂಬೆ ಬೆಳೆ ಬೇಸಾಯ ಮಾಡುತ್ತಿರುವ ಕಂಗಾಡಿಸಿದೆ. ದಾಳಿಂಬೆ ಬೆಳೆಯ ಕಾಂಡ, ಎಲೆ, ಹೂವು, ಕಾಯಿ ಕಟ್ಟುವ ವೇಳೆಯಲ್ಲೂ ಅಂಗಮಾರಿ ರೋಗವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಅಗತ್ಯ ಔಷಧಿ ಸಿಂಪಡಣೆಯ ಬಗ್ಗೆ ರೈತರಿಗೆ ಸೂಕ್ತ ಮಾರ್ಗದರ್ಶನವೂ ಇಲ್ಲ. ಕೆಲ ಕೀಟನಾಶಕ ಔಷಧ ಸಿಂಪಡಿಸಿದರು ರೋಗವು ಹತೋಟಿಗೆ ಬರುತ್ತಿಲ್ಲ. ಹೀಗಾಗಿ ರೈತರ ನಿರೀಕ್ಷಿತ ಮಟ್ಟದ ಇಳುವರಿ ಸಾಧ್ಯವಿಲ್ಲದಂತಾಗಿದೆ. ಹಳೆಯ ಗಿಡ ತೆಗೆದು ಹೊಸದಾಗಿ ದಾಳಿಂಬೆ ನೆಟ್ಟರೂ ರೋಗ ಬಾಧೆ ತಪ್ಪಿಲ್ಲ.
ತಾಲ್ಲೂಕಿನ ಅಡವಿಬಾವಿ, ಯರದಿಹಾಳ, ಬನ್ನಿಗೋಳ, ಆಶಿಹಾಳ, ಛತ್ತರ, ಛತ್ತರ ತಾಂಡಾ, ವಿವಿಧ ಭಾಗದಲ್ಲಿ ಹೆಚ್ಚಾಗಿ ದಾಳಿಂಬೆ ಬೆಳೆಯಲಾಗುತ್ತಿದೆ. ಇದು ಒಣಹವೆಯಲ್ಲಿ ಉತ್ತಮವಾಗಿ ಇಳುವರಿ ನೀಡುವ ಬೆಳೆಯಾಗಿದೆ. ಆದರೆ, ಈ ಭಾಗದಲ್ಲಿ ಇತ್ತೀಚೆಗೆ ಹೆಚ್ಚಿನ ಮಳೆಯಾಗುತ್ತಿರುವುದು ದಾಳಿಂಬೆ ಬೆಳೆಗಾರರನ್ನು ಆತಂಕಕ್ಕೆ ತಳ್ಳಿದೆ.
ಒಂದು ದಾಳಿಂಬೆ ತೋಟ ಮಾಡಿದ ನಂತರ ಕನಿಷ್ಠ ಎಂದರೆ 20 ವರ್ಷಗಳ ಕಾಲ ಅದು ಹಾಗೆ ಇರಲಿದೆ. ಆದರೆ, ಪ್ರಸ್ತುತ ದಿನಗಳಲ್ಲಿ ನಾಲ್ಕೈದು ವರ್ಷಕ್ಕೆ ಗಿಡಗಳನ್ನು ತೆಗೆದು ಮತ್ತೆ ಹೊಸದಾಗಿ ಗಿಡ ನೆಡುತ್ತಿದ್ದಾರೆ. ಅತಿಯಾದ ರಾಸಾ ಯನಿಕಗಳ ಬಳಕೆಯಿಂದ ಭೂಮಿಯ ಫಲವತ್ತತೆಯೂ ನಾಶವಾಗಿದೆ. ವರ್ಷ ಪೂರ್ತಿ ಫಸಲು ನೀಡುವ ಬೆಳೆಯನ್ನು ರೈತರು ಕೈ ಬಿಡುತ್ತಿದ್ದಾರೆ.
ದಾಳಿಂಬೆ ಇತರೆ ಹಣ್ಣಿನ ಬೆಳೆಗಳಂತಲ್ಲ. ಇದಕ್ಕೆ ಪ್ರತಿ ತಿಂಗಳು ಗೊಬ್ಬರ ನೀಡಬೇಕು. ಹಂತ ಹಂತವಾಗಿ ಔಷಧಿ ಸಿಂಪಡಣೆ ಮಾಡಬೇಕು. ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಬೇಕು. ಇಳುವರಿ ಬರುವವರೆಗೂ ಜೋಪಾನವಾಗಿ ಕಾಪಾಡಿಕೊಂಡು ಬರಬೇಕು. ದಾಳಿಂಬೆ ತುಂಬಾ ಸೂಕ್ಷ್ಮವಾದ ಬೆಳೆ. ಹೆಚ್ಚಿನ ಮಳೆಯಾದರೆ, ಇಳುವರಿ ಸರಿಯಾಗಿ ಬರುವುದಿಲ್ಲ. ಇತ್ತೀಚೆಗೆ ರೋಗಗಳು ಜಾಸ್ತಿಯಾಗಿದ್ದು, ಹವಾಮಾನ ವೈಪರೀತ್ಯ ಉಂಟಾಗಿ ಬೆಳೆ ಹಾನಿಯಾಗುತ್ತಿದ್ದರಿಂದ ದಾಳಿಂಬೆ ಬೆಳೆಗಾರರು ಹೆಚ್ಚಿನ ತೊಂದರೆ ಅನುಭವಿಸಿದ್ದಾರೆ. ಚುಕ್ಕಿ ರೋಗದಿಂದ ಬಣ್ಣ ಮತ್ತು ಕಳೆ ಹಾಳಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿಲ್ಲ. ಕೆಲವೊಮ್ಮೆ ಗುಣಮಟ್ಟದ ಬೆಳೆ ಬಂದಿದ್ದರೂ, ಸರಿಯಾದ ಬೆಲೆಯೂ ಸಿಗುವುದಿಲ್ಲ.
ಅರ್ಕ ಜೈವಿಕ ಮಿಶ್ರಣ ಗೊಬ್ಬರವು (ಎಎಂಸಿ) ದಾಳಿಂಬೆ ಬೆಳೆಯಲ್ಲಿ ಕಾಣಿಸಿಕೊಳ್ಳುವ ರೋಗಗಳ ಕಡಿವಾಣಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹೆಚ್ಚಿನ ರೈತರು ಇದನ್ನೇ ಬಳಸುತ್ತಿದ್ದಾರೆ ಎಂದು ರೈತ ಭೀಮಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.