ರಾಯಚೂರು: ಪ್ರತಿ ಮಗುವಿನಲ್ಲೂ ವಿಜ್ಞಾನಿಯಿದ್ದಾನೆ. ಪ್ರಕೃತಿಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಸಾಮರ್ಥ್ಯ, ಪ್ರಶ್ನಿಸುವ ಸಾಮರ್ಥ್ಯ ಅವನು ಬೆಳೆಸಿಕೊಂಡಲ್ಲಿ ಆ ವಿಜ್ಞಾನಿಯು ಹೊರಬರುತ್ತಾನೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಕಿರಣಕುಮಾರ್ ಹೇಳಿದರು.
ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಬೆಂಗಳೂರಿನ ಜವಾಹರ್‌ಲಾಲ್ ನೆಹರು ತಾರಾಲಯ ಸಹಯೋಗದಲ್ಲಿ ಬುಧವಾರ ನಡೆದ ಅಂತರರಾಷ್ಟ್ರೀಯ ಚಂದ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜುಲೈ 20 1969 ರಂದು ಇತಿಹಾಸದಲ್ಲಿ ಮೊದಲ ಬಾರಿಗೆ ಮಾನವನು ಚಂದ್ರನ ಮೇಲೆ ಪಾದಾರ್ಪಣೆ ಮಾಡಿದ್ದು, ಇದರ ಸವಿನೆನಪಿಗಾಗಿ ಜುಲೈ 20 ರಂದು ಅಂತರರಾಷ್ಟ್ರೀಯ ಚಂದ್ರ ದಿನವನ್ನಾಗಿ ಈ ವರ್ಷದಿಂದ ಆಚರಿಸಲಾಗುತ್ತಿದೆ ಎಂದರು.
ಅನಾದಿಕಾಲದಿಂದಲೂ ಸಾಕಷ್ಟು ವಿಜ್ಞಾನಿಗಳು ಬಾಹ್ಯಾಕಾಶ ವಿಜ್ಞಾನದ ಕುರಿತು ಸಂಶೋಧನೆಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ. ಇಂದು ಬಾಹ್ಯಾಕಾಶ ವಿಜ್ಞಾನವು ಕ್ಷಿಪ್ರ ಬೆಳವಣಿಗೆಯನ್ನು ಕಂಡಿರುವುದರಲ್ಲಿ ಅವರೆಲ್ಲರ ಕೊಡುಗೆ ಅಪಾರವಾಗಿದೆ. ಇಂತಹ ಬೆಳವಣಿಗೆ ಹಾಗೂ ತಂತ್ರಜ್ಞಾನವನ್ನು ತಳಹದಿ ಆಗಿಟ್ಟುಕೊಂಡು ಉನ್ನತ ಮಟ್ಟದ ಸಂಶೋಧನೆಯನ್ನು ಕೈಗೊಳ್ಳುವಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಕ್ಷಮತಾ ನಿರ್ಮಾಣ ನಿರ್ದೇಶಕ ಎನ್. ಸುಧೀರ್ ಕುಮಾರ್ ಮಾತನಾಡಿ, ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ವೈಜ್ಞಾನಿಕ ಪರಿಕಲ್ಪನೆ ಹಾಗೂ ವೈಜ್ಞಾನಿಕ ಚಟುವಟಿಕೆಗಳು ಹೆಚ್ಚಾಗಿ ಕಾಣಿಸುತ್ತವೆ. ರಾಜ್ಯಮಟ್ಟದ ಕಮ್ಮಟದಲ್ಲಿ ರಾಜ್ಯದ ಎಲ್ಲಾ ವಿಜ್ಞಾನ ಕೇಂದ್ರಗಳ ಮೂಲಕ ಮೂಲೆಮೂಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದರು.
ಡಾ. ಪ್ರಮೋದ್ ಗಲಗಲಿ ಮಾತನಾಡಿ, ಜವಾಹರ್ ಲಾಲ್ ನೆಹರು ತಾರಾಲಯವು ಹಲವಾರು ವೈಜ್ಞಾನಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುತ್ತದೆ ಎಂದು ತಿಳಿಸಿದರು.
ಜವಾಹರ್‌ಲಾಲ್ ನೆಹರು ತಾರಾಲಯದ ವೈಜ್ಞಾನಿಕಾಧಿಕಾರಿ ಲಕ್ಷ್ಮೀ ಅವರು ವಿದ್ಯಾರ್ಥಿಗಳಿಗೆ ‘ಚಟುವಟಿಕೆಗಳಲ್ಲಿ ಚಂದ್ರ’ ಎಂಬ ಪ್ರಾಯೋಗಿಕ ಅಧಿವೇಶನವನ್ನು ನಡೆಸಿಕೊಟ್ಟರು.
ವಿದ್ಯಾರ್ಥಿಗಳು ಖುದ್ದಾಗಿ ಚಟುವಟಿಕೆ ಕೈಗೊಂಡು ಚಂದ್ರನ ಬಿಂಬಾವಸ್ಥೆಗಳು, ಚಂದ್ರನ ಭ್ರಮಣೆ ಮತ್ತು ಪರಿಭ್ರಮಣೆ, ಗ್ರಹಗಳ ಭ್ರಮಣೆಯ ಅಕ್ಷಗಳ ಓರೆಕೋನಗಳು ಇತ್ಯಾದಿ ವಿಷಯಗಳನ್ನು ತಿಳಿದುಕೊಂಡರು.
ಜವಾಹರ್‌ಲಾಲ್ ನೆಹರು ತಾರಾಲಯ ಸಹಾಯಕ ನಿರ್ದೇಶಕ ಎಚ್.ಆರ್. ಮಧುಸೂದನ್, ಚಂದ್ರನ ಅಂಗಳದಲ್ಲಿ‘ ಎಂಬ ವಿಷಯದ ಕುರಿತು ಹಾಗೂ ಇಸ್ರೋ ಸಂಸ್ಥೆಯ ವಿಜ್ಞಾನ ಕಾರ್ಯಕ್ರಮಗಳ ನಿರ್ದೇಶಕ ಡಾ. ತೀರ್ಥ್ ಪ್ರತೀಮ್ ದಾಸ್ ಅವರು ಚಂದ್ರನೊಂದಿಗೆ ಪಯಣ ಎಂಬ ವಿಷಯದ ಕುರಿತು ಹಾಗೂ ಖಗೋಳ ವಿಜ್ಞಾನಿ ಡಾ. ಶೈಲಜಾ ನಕ್ಷತ್ರಗಳ ಕುರಿತಾಗಿ ಉಪನ್ಯಾಸ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.