ರಾಯಚೂರು: ‘ತಾಯಿಯ ಎದೆ ಹಾಲು ಮಗುವಿಗೆ ಅಮೃತಕ್ಕೆ ಸಮಾನ. ಹೆರಿಗೆಯಾದ ಒಂದು ಗಂಟೆಯೊಳಗೆ ಮಗುವಿಗೆ ತಾಯಿಯ ಎದೆ ಹಾಲುಣಿಸಬೇಕು’ ಎಂದು ನಗರ ಪ್ರಸೂತಿ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ವಿಜಯಾ.ಕೆ ಹೇಳಿದರು.
ನಗರದ ನಗರ ಪ್ರಸೂತಿ ಕೇಂದ್ರದಲ್ಲಿ ನಡೆದ ವಿಶ್ವ ಸ್ತನ್ಯಪಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,‘ ಮಗುವಿಗೆ ಎದೆ ಹಾಲು ನೀಡುವುದು ಪ್ರತಿಯೊಬ್ಬ ತಾಯಿಯ ಕರ್ತವ್ಯವಾಗಿದೆ. ಕೆಲವೊಬ್ಬರು ತಮ್ಮ ಸೌಂದರ್ಯ ಹಾಳಾಗುತ್ತದೆ ಎಂದು ಎದೆ ಹಾಲು ಕುಡಿಸುವುದನ್ನು ಬಿಡುತ್ತಾರೆ. ಆದರೆ ಹಾಗೆ ಮಾಡುವುದು ಸರಿಯಾದ ಕ್ರಮವಲ್ಲ’ ಎಂದರು.
ತಾಯಿಯ ಎದೆಹಾಲು ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಸ್ತನ್ಯಪಾನ ಜಾಗೃತಿಗಾಗಿ ಆಗಸ್ಟ್ 7 ರವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ ಆಯೋಜಿಸಲಾಗಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ಡಿ.ಶಾಕೀರ ಮಾತನಾಡಿ,‘ತಾಯಿಯು 6 ತಿಂಗಳುಗಳವರೆಗೆ ಮಕ್ಕಳಿಗೆ ಎದೆ ಹಾಲುಣಿಸಬೇಕು. ಇದರಿಂದ ನ್ಯೂಮೋನಿಯಾ, ಅತಿಸಾರಭೇದಿ ಹಾಗೂ ಅಪೌಷ್ಟಿಕತೆ ಬಾರದಂತೆ ತಡೆಗಟ್ಟಬಹುದು’ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಷ್ಮೀ ಮುಂಡಾಸ್ ಮಾತನಾಡಿ,‘ಇಂದಿನ ದಿನಗಳಲ್ಲಿ ಕೆಲಸ ಮಾಡುವ ಮಹಿಳೆಯರು ಎದೆ ಹಾಲುಣಿಸುವುದರ ಕಡೆ ಹೆಚ್ಚು ಗಮನಹರಿಸುವುದಿಲ್ಲ. ಇದರಿಂದಾಗಿ ಮಗು ರೋಗಕ್ಕೆ ತುತ್ತಾಗುತ್ತದೆ’ ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಶಿಕಲಾ, ಡಾ.ಕಾವ್ಯಾ, ಡಾ.ಚೇತನಾ, ಮಲ್ಲೇಶ್ವರಿ, ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.