ರಾಯಚೂರು: ‘ಬೆಳೆ ನಷ್ಟವಾದ ರೈತರಿಗೆ ಫಸಲ್ ಬಿಮಾ ಯೋಜನೆಯಡಿ ಪರಿಹಾರ ನೀಡಲು ಕೃಷಿ ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ನಡೆಸಿ ವೈಜ್ಞಾನಿಕವಾದ ವರದಿ ಸಲ್ಲಿಸಬೇಕು. ಅಧಿಕಾರಿಗಳ ವಿಳಂಬ ಧೋರಣೆಯಿಂದ ರೈತರಿಗೆ ಅನ್ಯಾಯವಾಗದಂತೆ ಎಚ್ಚರ ವಹಿಸಬೇಕು’ ಎಂದು ಸಂಸದ ಜಿ.ಕುಮಾರ ನಾಯಕ ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
‘ಫಸಲ್ ಬಿಮಾ ಯೋಜನೆಯಡಿ ರೈತರು ನೋಂದಣಿ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ನೋಂದಣಿ ಮಾಡಿಕೊಂಡವರಿಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ವಿಳಂಬ ಧೋರಣೆಯಿಂದ ರೈತರು ಆಸಕ್ತಿ ತೋರಿಸುತ್ತಿಲ್ಲ ಎಂದು ರೈತರಿಂದ ದೂರುಗಳು ಬರುತ್ತಿವೆ’ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ‘ಫಸಲ್ ಬಿಮಾ ಯೋಜನೆಯಡಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಸಿರವಾರ ತಾಲ್ಲೂಕಿನಲ್ಲಿ ಕಳೆದ ವರ್ಷ ಫಸಲ್ ಬಿಮಾ ಯೋಜನೆಯಡಿ ಅವ್ಯವಹಾರ ನಡೆದ ಬಗ್ಗೆ ದೂರು ದಾಖಲಾದರೂ ಇದುವರೆಗೆ ಕ್ರಮ ಜರುಗಿಸಿಲ್ಲ. ವಿಮಾ ಕಂಪನಿಗೆ ಲಾಭವಾಗುತ್ತಿದೆಯೇ ಹೊರತು ರೈತರಿಗೆ ಸಮರ್ಪಕ ಪರಿಹಾರ ಸಿಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ನಿತೀಶ್ ಕೆ. ಮಧ್ಯ ಪ್ರವೇಶಿಸಿ, ‘ಫಸಲ್ ಬಿಮಾ ಯೋಜನೆಯ ಅವ್ಯವಹಾರದ ಕುರಿತು ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.
ಹೆದ್ದಾರಿ ಕಾಮಗಾರಿ ವಿಳಂಬ:
‘ರಾಷ್ಟ್ರೀಯ ಹೆದ್ದಾರಿ–167 ಹಗರಿ– ಝಡ್ಚರ್ಲಾ ವ್ಯಾಪ್ತಿಯ ಕೃಷ್ಣ ನದಿಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಕಾಮಗಾರಿ ಅ.30ಕ್ಕೆ ಪೂರ್ಣಗೊಳ್ಳಬೇಕಿತ್ತು. ಆಮೆಗತಿಯ ವೇಗ ನೋಡಿದರೆ 20 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ’ ಎಂದು ಸಂಸದ ಜಿ.ಕುಮಾರ ನಾಯಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
‘ಜೆಸಿಬಿ ಯಂತ್ರಗಳು ಕೆಸರಲ್ಲಿ ಸಿಲುಕುತ್ತಿವೆ. ಕೆಲ ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ’ ಎಂದು ಅಧಿಕಾರಿ ಸಬೂಬು ಹೇಳಿ ಜಾರಿಗೊಳ್ಳಲು ಪ್ರಯತ್ನಿಸಿದರು.
‘ಕಾಮಗಾರಿಯ ಸ್ಥಳದಲ್ಲಿ ತಾಂತ್ರಿಕ ಸಮಸ್ಯೆಯಾಗುತ್ತಿದ್ದರೆ ಮೊದಲೇ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕಿತ್ತಲ್ಲ’ ಎಂದು ತರಾಟೆಗೆ ತೆಗೆದುಕೊಂಡ ಅವರು, ‘ನಿಮ್ಮ ಪಾಂಡಿತ್ಯ ಸಭೆಯಲ್ಲಿ ತೋರಿಸಬೇಡಿ’ ಎಂದು ಹರಿಹಾಯ್ದರು.
ಎನ್‌ಎಚ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ:
ರಾಷ್ಟ್ರೀಯ ಹೆದ್ದಾರಿಯ ಕುರಿತು ಚರ್ಚೆ ನಡೆಯುವಾಗ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ‘ಹೆದ್ದಾರಿಗಳಲ್ಲಿ ದೊಡ್ಡ ಗುಂಡಿಗಳು ಬಿದ್ದಿವೆ. ಗುಂಡಿಗಳಿದ ಬಚಾವಾಗಲು ಸವಾರರು ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುತ್ತಿವೆ. ಹೈದರಾಬಾದ್ ರಸ್ತೆಯ ಎರಡು ಬದಿಯಲ್ಲಿ ಜಾಲಿ ಗಿಡಗಳು ಬೆಳೆದಿದರೂ ತೆರವುಗೊಳಿಸಿಲ್ಲ. ಸುಗಮ ಸಂಚಾರ ಅನುಕೂಲ ಮಾಡದ ಹೆದ್ದಾರಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಪಘಾತಗಳು ಸಂಭವಿಸುತ್ತಿವೆ. ಅಧಿಕಾರಿಗಳನ್ನೇ ಹೊಣೆ ಮಾಡಿ ಎಫ್‌ಐಆರ್ ದಾಖಲಿಸಬೇಕು. ಅಂದಾಗ ಮಾತ್ರವೇ ವ್ಯವಸ್ಥೆ ಸರಿಯಾಗಬಹುದು’ ಎಂದರು.
‘ಹೆದ್ದಾರಿ ಬಳಿ ಬಳೆದ ಜಾಲಿಗಿಡಗಳನ್ನು ತೆಗೆದು ಹದಗೆಟ್ಟ ರಸ್ತೆಗಳ ದುರಸ್ತಿಗೊಳಿಸಲಾಗುವುದು. ಅಗತ್ಯವಿರುವ ಕಡೆ ಹಂಪ್ಸ್ ಹಾಕಿ ವಾಹನಗಳ ವೇಗವನ್ನು ನಿಯಂತ್ರಿಸಲಾಗುವುದು’ ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದರು.
ಜಿಲ್ಲಾ ಪಂಚಾಯಿತಿಯ ಸಿಇಒ ರಾಹುಲ್ ತುಕಾರಾಂ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೃಷಿ ಸಿಂಚಾಯಿ ಫಸಲ್ ಬಿಮಾ ತಾಳೆ ಬೀಜ ಯೋಜನೆ ಪರಂಪರಾಗತ ಕೃಷಿ ಯೋಜನೆಗಳ ಬಗ್ಗೆ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಬೇಕುಜಿ.ಕುಮಾರ ನಾಯಕ ಸಂಸದ
ಶಕ್ತಿನಗರದ ಆರ್‌ಟಿಪಿಎಸ್‌ನಿಂದ ಯರಮರಸ್ ಕ್ಯಾಂಪ್ ವರೆಗೆ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು ರಬ್ಬರ್ ಹಂಪ್ಸ್ ನಿರ್ಮಿಸಬೇಕು. ರಸ್ತೆ ಬದಿಯ ಜಾಲಿಗಿಡ ತೆರವುಗೊಳಿಸಬೇಕುಬಸನಗೌಡ ದದ್ದಲ್ ಗ್ರಾಮೀಣ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.